ಸಾಮಾನ್ಯವಾಗಿ ಒಂದೆರಡು ತಿಂಗಳಿಗೆ ಬೇಕಾಗುವ ಅಕ್ಕಿ, ಬೇಳೆ, ದ್ವಿಧಳ ಧಾನ್ಯಗಳನ್ನು ಒಂದೇ ಬಾರಿಗೆ ಖರೀದಿಸಿ, ಡಬ್ಬಗಳಲ್ಲಿ ಭದ್ರವಾಗಿ ಶೇಖರಿಸಿಡುತ್ತಾರೆ. ಅಕ್ಕಿ, ಕಾಳುಗಳು, ಹಿಟ್ಟುಗಳನ್ನು ಎಷ್ಟೇ ಭದ್ರವಾಗಿ ಸ್ಟೋರ್ ಮಾಡಿಟ್ಟರೂ ಡಬ್ಬದೊಳಗೆ ಹುಳುಗಳು ಆವರಿಸಿಬಿಡುತ್ತವೆ. ಅದರಲ್ಲೂ ಮಳೆಗಾಲದ ಸಮಯದಲ್ಲಿ ಈ ಸಮಸ್ಯೆ ತುಸು ಹೆಚ್ಚೇ ಇರುತ್ತದೆ.
ಹುಳುಗಳು ಅವರಿಸುವುದರಿಂದ ಅಕ್ಕಿ, ಕಾಳುಗಳು ಮತ್ತು ಹಿಟ್ಟಿನ ರುಚಿ, ಗುಣಮಟ್ಟ ಎರಡೂ ಕಡಿಮೆಯಾಗುತ್ತದೆ. ನೀವು ಮನೆಯಲ್ಲಿ ಡಬ್ಬದಲ್ಲಿ ಶೇಖರಿಸಿಟ್ಟ ಅಕ್ಕಿಯಲ್ಲೂ ಇದೇ ರೀತಿ ಹುಳುಗಳಾಗಿದ್ಯಾ? ಹಾಗಿದ್ರೆ ಈ ಸಮಸ್ಯೆಗೆ ಪರಿಹಾರವನ್ನು ಪಡೆಯಲು ಮತ್ತು ಸ್ಟೋರ್ ಮಾಡಿಡುವ ಅಕ್ಕಿ, ಕಾಳುಗಳಲ್ಲಿ ಹುಳುಗಳಾಗದಂತೆ ನೋಡಿಕೊಳ್ಳಲು ಈ ಸಿಂಪಲ್ ಹಾಗೆನೇ ಪರಿಣಾಮಕಾರಿ ಸಲಹೆಗಳಿವೆ.
ಅಕ್ಕಿಯಲ್ಲಿರುವ ಹುಳುಗಳನ್ನು ತೆಗೆದುಹಾಕುವುದು ಹೇಗೆ? – ಅಕ್ಕಿಯನ್ನು ಸೂರ್ಯನ ಬೆಳಕಿನಲ್ಲಿಡಿ : ನೀವು ಡಬ್ಬದಲ್ಲಿ ಶೇಖರಿಸಿಟ್ಟ ಅಕ್ಕಿ ಅಥವಾ ಕಾಳುಗಳಲ್ಲಿ ವಿಪರೀತ ಹುಳುಗಳಿದ್ದರೆ, ಅಕ್ಕಿಯನ್ನು ದೊಡ್ಡ ತಟ್ಟೆ ಅಥವಾ ಸ್ವಚ್ಛವಾದ ಬಟ್ಟೆಯ ಮೇಲೆ ತೆಳುವಾಗಿ ಹರಡಿ. ಬಿಸಿಲಿನಲ್ಲಿಡಿ. ಕನಿಷ್ಠ ಎರಡರಿಂದ ಮೂರು ಗಂಟೆಗಳ ಕಾಲ ಅದನ್ನು ಬಿಸಿಲಿನಲ್ಲಿಡಬೇಕು. ಸೂರ್ಯನ ಶಾಖವು ಅಕ್ಕಿಯಿಂದ ಕೀಟಗಳನ್ನು ಓಡಿಸುತ್ತದೆ. ಅಲ್ಲದೆ ಈ ಟ್ರಿಕ್ಸ್ ಅಕ್ಕಿಯಿಂದ ತೇವಾಂಶವನ್ನು ಸಹ ತೆಗೆದುಹಾಕುತ್ತದೆ.
ವಿನೆಗರ್ ಮತ್ತು ಇಂಗು ಬಳಕೆ : ಒಂದು ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ಬಿಳಿ ವಿನೆಗರ್ ಸುರಿಯಿರಿ. ಅದಕ್ಕೆ ಕಾಲು ಚಮಚ ಇಂಗು ಸೇರಿಸಿ. ಇದನ್ನು ಅಕ್ಕಿಯ ಡಬ್ಬದ ಮಧ್ಯದಲ್ಲಿಡಿ. ವಿನೆಗರ್ ಮತ್ತು ಇಂಗಿನ ಕಟುವಾದ ವಾಸನೆಗೆ ಹುಳುಗಳು ಸಂಪೂರ್ಣವಾಗಿ ಮಾಯವಾಗಿಬಿಡುತ್ತವೆ. ಕೀಟಗಳು ಹೋದ ನಂತರ, ಅಕ್ಕಿಯನ್ನು ಮತ್ತೊಂದು ಪಾತ್ರೆಗೆ ವರ್ಗಾಯಿಸಿ. ಅಕ್ಕಿ, ಕಾಳುಗಳ ಡಬ್ಬದಲ್ಲಿರುವ ಹುಳು, ಕೀಟಗಳನ್ನು ತೊಡೆದುಹಾಕಲು ಈ ಟ್ರಿಕ್ಸ್ ತುಂಬಾನೇ ಪರಿಣಾಮಕಾರಿ.
ಲವಂಗ ಅಥವಾ ದಾಲ್ಚಿನ್ನಿ : ಅಕ್ಕಿ ಡಬ್ಬದಿಂದ ಕೀಟಗಳನ್ನು ತೆಗೆದುಹಾಕಲು ನೀವು ಲವಂಗ ಅಥವಾ ದಾಲ್ಚಿನ್ನಿಯನ್ನು ಸಹ ಬಳಸಬಹುದು. ಅಕ್ಕಿ ಡಬ್ಬದಲ್ಲಿ ಕೆಲವು ಲವಂಗ ಅಥವಾ ದಾಲ್ಚಿನ್ನಿ ತುಂಡುಗಳನ್ನು ಇರಿಸಿ. ಅವುಗಳ ಬಲವಾದ ಪರಿಮಳವು ಹುಳುಗಳನ್ನು ಹೋಗಲಾಡಿಸುತ್ತವೆ. ಅಲ್ಲದೆ ಇದು ಅಕ್ಕಿಯಲ್ಲಿನ ತೇವಾಂಶದ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ. ನೀವು ಅಕ್ಕಿ, ಕಾಳುಗಳನ್ನು ಸ್ಟೋರ್ ಮಾಡುವಾಗ ಒಂದೆರಡು ಲವಂಗ, ದಾಲ್ಚಿನ್ನಿಯನ್ನು ಆ ಡಬ್ಬದಲ್ಲಿ ಇಟ್ಟರೆ ಹುಳುಗಳು ಎಂದಿಗೂ ಅಕ್ಕಿಯನ್ನು ಆವರಿಸುವುದಿಲ್ಲ.
ಅಕ್ಕಿ, ಕಾಳುಗಳಲ್ಲಿ ಹುಳುಗಳಾಗದಂತೆ ನೋಡಿಕೊಳ್ಳುವುದು ಹೇಗೆ? – ಬಿರಿಯಾನಿ ಎಲೆ ತಂತ್ರ : ಕೀಟ, ಹುಳುಗಳು ಬಿರಿಯಾನಿ ಎಲೆಗಳ ವಾಸನೆಯನ್ನು ಇಷ್ಟಪಡುವುದಿಲ್ಲ. ಈ ಎಲೆ ನೈಸರ್ಗಿಕ ಕೀಟ ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಇದು ಅಕ್ಕಿ, ಕಾಳುಗಳಲ್ಲಿ ಹುಳುಗಳಾಗುವುದನ್ನು ತಡೆಯಲು ಸಹ ಪರಿಣಾಮಕಾರಿ. ನೀವು ಸ್ಟೋರ್ ಮಾಡುವ ಅಕ್ಕಿ ಡಬ್ಬದಲ್ಲಿ ಎರಡರಿಂದ ಮೂರು ಬಿರಿಯಾನಿ ಎಲೆಗಳನ್ನು ಇರಿಸಿ. ಈ ವಿಧಾನವು ಹಿಟ್ಟು ಮತ್ತು ಇತರ ದ್ವಿದಳ ಧಾನ್ಯಗಳಿಗೂ ಪರಿಣಾಮಕಾರಿಯಾಗಿದೆ.
ಬೆಳ್ಳುಳ್ಳಿ ಸೇರಿಸಿ : ಅಕ್ಕಿಗೆ ಕೀಟಗಳು ಮುತ್ತಿಕೊಳ್ಳುವುದನ್ನು ತಡೆಯಲು, ಸಿಪ್ಪೆ ತೆಗೆಯದ ಐದರಿಂದ ಆರು ಬೆಳ್ಳುಳ್ಳಿ ಎಸಳುಗಳನ್ನು ಅಕ್ಕಿ ಡಬ್ಬದಲ್ಲಿಡಿ. ಇದರ ಬಲವಾದ ವಾಸನೆಯು ಕೀಟಗಳನ್ನು ದೂರವಿಡುತ್ತದೆ. ಅಕ್ಕಿ, ಕಾಳುಗಳಲ್ಲಿ ಹುಳುಗಳಾಗುವುದನ್ನು ತಡೆಯುತ್ತದೆ.
ಅರಶಿಣ ಕೊಂಬು, ಒಣ ಮೆಣಸು : ಒಂದು ಒಣ ಅರಿಶಿನ ಕೊಂಬು, ಒಂದು ಒಣ ಮೆಣಸುಎರಡು ಪಲಾವ್ ಎಲೆ ಮತ್ತು ನಾಲ್ಕರಿಂದ ಐದು ಲವಂಗಗಳನ್ನು ದ್ವಿದಳ ಧಾನ್ಯಗಳು, ಅಕ್ಕಿ ಅಥವಾ ಯಾವುದೇ ಇತರ ಧಾನ್ಯಗಳನ್ನು ಸ್ಟೋರ್ ಮಾಡಿಡುವ ಪಾತ್ರೆಯಲ್ಲಿ ಹಾಕಿದರೆ, ಆ ಡಬ್ಬದಲ್ಲಿ ಹುಳು, ಕೀಟಗಳು ಆವರಿಸುವುದಿಲ್ಲ. ಇವುಗಳ ನೈಸರ್ಗಿಕ ಪರಿಮಳ ಅಕ್ಕಿ, ಧಾನ್ಯಗಳಲ್ಲಿ ಕೀಟ, ಹುಳುಗಳು ಆವರಿಸುವುದನ್ನು ತಡೆಯುತ್ತವೆ. ಅವುಗಳ ಸಂತಾನೋತ್ಪತ್ತಿಯ ಸಾಧ್ಯತೆಯನ್ನು ನಿವಾರಿಸುತ್ತದೆ. ಇದನ್ನೂ ಓದಿ : ಮಾಜಿ ಉಪಸಭಾಪತಿ ಆಶಿಶ್ ಬ್ಯಾನರ್ಜಿ ಟಿಎಂಸಿ ಕಚೇರಿಯಲ್ಲಿ ಶವವಾಗಿ ಪತ್ತೆ..!
