28.9 C
ಬೆಂಗಳೂರು
June 10, 2026
kranthikidi.com
ತಾಜಾಸುದ್ದಿವಿದೇಶ

ಪಾಕ್‌ಗೆ ಬಿಸಿ ಮುಟ್ಟಿಸಲು ಮತ್ತೆ ರೆಡಿ; ಭಾರತಕ್ಕೆ ಬಂದಿಳಿದ ಮತ್ತೊಂದು ಸುದರ್ಶನ ಚಕ್ರ

ನವದೆಹಲಿ : ಆಪರೇಷನ್ ಸಿಂಧೂರ ವೇಳೆ ಪಾಕಿಸ್ತಾನದ ಕ್ಷಿಪಣಿ, ಡ್ರೋನ್‌ಗಳನ್ನು ಹೊಡೆದುರುಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ, ರಷ್ಯಾ ನಿರ್ಮಿತ ಅತ್ಯಂತ ಶಕ್ತಿಶಾಲಿ ಎಸ್‌-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ 4ನೇ ಘಟಕ ಜೂನ್ 3ರಂದು ಯಶಸ್ವಿಯಾಗಿ ಭಾರತಕ್ಕೆ ತಲುಪಿದೆ. ಇದರೊಂದಿಗೆ ಭಾರತದ ವಾಯು ರಕ್ಷಣಾ ಪಡೆ ಈಗ ಒಟ್ಟು ನಾಲ್ಕು ಎಸ್‌-400 ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಗಳನ್ನು ಹೊಂದಿದಂತಾಗಿದೆ.

ಕಳೆದ ತಿಂಗಳಷ್ಟೇ ಭಾರತೀಯ ವಾಯುಪಡೆಯ ಉನ್ನತ ಅಧಿಕಾರಿಗಳ ತಂಡ ರಷ್ಯಾಕ್ಕೆ ಭೇಟಿ ನೀಡಿ ಈ ವ್ಯವಸ್ಥೆಯ ತಾಂತ್ರಿಕ ತಪಾಸಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ, ಈ 4ನೇ ಘಟಕದ ಉಳಿದ ಉಪಕರಣಗಳು ಮುಂದಿನ ಕೆಲವು ದಿನಗಳಲ್ಲಿ ವಿವಿಧ ಬಂದರುಗಳ ಮೂಲಕ ಭಾರತವನ್ನು ತಲುಪಲಿವೆ. ಜೂನ್ ತಿಂಗಳ ಅಂತ್ಯದ ವೇಳೆಗೆ ಇದನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಲು ಸೇನೆ ಸಜ್ಜಾಗಿದೆ.

ಈ ನೂತನ ಎಸ್‌-400 ಕ್ಷಿಪಣಿ ವ್ಯವಸ್ಥೆಯನ್ನು ಭಾರತದ ಪಶ್ಚಿಮ ಗಡಿಯಲ್ಲಿ, ಅಂದರೆ ಪಾಕಿಸ್ತಾನದ ಗಡಿಗೆ ತೀರಾ ಹತ್ತಿರದಲ್ಲಿ ನಿಯೋಜಿಸುವ ಸಾಧ್ಯತೆಯಿದೆ. ಇದು ಶತ್ರು ರಾಷ್ಟ್ರಗಳ ಕಡೆಯಿಂದ ನುಗ್ಗಿ ಬರುವ ಯಾವುದೇ ರೀತಿಯ ಡ್ರೋನ್‌, ಯುದ್ಧ ವಿಮಾನ ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಗಡಿಯ ಆಚೆಗೇ ಪತ್ತೆಹಚ್ಚಿ, ಕ್ಷಣಮಾತ್ರದಲ್ಲಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ : ದ್ವೇಷ ಭಾಷಣ ಆರೋಪ; ಬಿಜೆಪಿ ಮಾಜಿ ಶಾಸಕ ವಿರುದ್ಧ ಎಫ್‌ಐಆರ್..!

ಏನಿದು ಎಸ್‌-400? – ವಿಶ್ವದ ಅತ್ಯಂತ ಸುಧಾರಿತ ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಒಂದಾದ ಎಸ್‌-400 ಅನ್ನು ಭಾರತೀಯ ಸೇನೆಯಲ್ಲಿ ಪ್ರೀತಿಯಿಂದ ‘ಸುದರ್ಶನ ಚಕ್ರ’ ಎಂದು ಕರೆಯಲಾಗುತ್ತದೆ. ಇದು ಬರೋಬ್ಬರಿ 400 ಕಿಲೋಮೀಟರ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ನೂರಾರು ಶತ್ರು ಯುದ್ಧ ವಿಮಾನಗಳು, ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಪತ್ತೆಹಚ್ಚಬಲ್ಲದು.

ಭಾರತವು 2018ರ ಅಕ್ಟೋಬರ್‌ನಲ್ಲಿ ರಷ್ಯಾದೊಂದಿಗೆ 5.42 ಬಿಲಿಯನ್ ಡಾಲರ್ ವೆಚ್ಚದಲ್ಲಿ ಒಟ್ಟು 5 ಘಟಕಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಈಗಾಗಲೇ 3 ಘಟಕಗಳು ಭಾರತದ ಪೂರ್ವ ಮತ್ತು ಉತ್ತರ ಗಡಿಭಾಗಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದಾಗಿ 2023ರಲ್ಲೇ ಮುಗಿಯಬೇಕಿದ್ದ ಈ ಪೂರೈಕೆ ಪ್ರಕ್ರಿಯೆ ತಡವಾಗಿತ್ತು. ಇದೀಗ 5ನೇ ಘಟಕವು 2026ರ ಅಂತ್ಯದೊಳಗೆ ಭಾರತಕ್ಕೆ ತಲುಪಲಿದ್ದು, ಒಪ್ಪಂದ ಪೂರ್ಣಗೊಳ್ಳಲಿದೆ ಎಂದು ರಷ್ಯಾ ಭರವಸೆ ನೀಡಿದೆ.

2025ರ ಏಪ್ರಿಲ್‌ನಲ್ಲಿ ಬೈರಸಾನ್ ಕಣಿವೆಯಲ್ಲಿ ನಡೆದಿದ್ದ ಭೀಕರ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಸಮಯದಲ್ಲಿ ಎಸ್‌-400 ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿತ್ತು. ಪಾಕಿಸ್ತಾನದ ವಾಯುದಾಳಿಯ ಯತ್ನಗಳನ್ನು ಇದು ಅತ್ಯಂತ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು.

ಈ ಅದ್ಭುತ ಕಾರ್ಯಕ್ಷಮತೆಯನ್ನು ನೋಡಿರುವ ಭಾರತ ಸರ್ಕಾರ, ಈಗ ಮತ್ತೊಂದು ಬೃಹತ್ ನಿರ್ಧಾರ ಕೈಗೊಂಡಿದೆ. ಆರಂಭಿಕ 5 ಘಟಕಗಳ ಜೊತೆಗೆ, ಹೆಚ್ಚುವರಿಯಾಗಿ ಇನ್ನೂ 5 ಎಸ್‌-400 ಘಟಕಗಳನ್ನು ಖರೀದಿಸಲು ರಕ್ಷಣಾ ಇಲಾಖೆ ಅನುಮೋದನೆ ನೀಡಿದೆ. ಇದರಿಂದಾಗಿ ಭಾರತದ ಬಳಿ ಇರುವ ಎಸ್‌-400 ಸಂಖ್ಯೆ ಭವಿಷ್ಯದಲ್ಲಿ 10ಕ್ಕೆ ಏರಿಕೆಯಾಗಲಿದ್ದು, ದೇಶದ ಆಕಾಶಕ್ಕೆ ಅಭೇದ್ಯ ಕೋಟೆ ನಿರ್ಮಾಣವಾಗಲಿದೆ. ಇದನ್ನೂ ಓದಿ : ನಟಿ ಶುಭಾ ಪೂಂಜಾ ವೈವಾಹಿಕ ಜೀವನದಲ್ಲಿ ಬಿರುಗಾಳಿ; ವಿಚ್ಛೇದನಕ್ಕೆ ಮೊರೆ ಹೋದ ದಂಪತಿ

ಈ ಎಸ್‌-400 ವ್ಯವಸ್ಥೆಯು ಭಾರತೀಯ ವಾಯುಪಡೆಯ ಪ್ರಮುಖ ನಿಯಂತ್ರಣ ವ್ಯವಸ್ಥೆಯಾದ ‘ಇಂಟಿಗ್ರೇಟೆಡ್ ಏರ್ ಕಮಾಂಡ್ ಅಂಡ್ ಕಂಟ್ರೋಲ್ ಸಿಸ್ಟಮ್’ ಜೊತೆಗೆ ಸಂಪೂರ್ಣವಾಗಿ ಲಿಂಕ್ ಆಗಿರುತ್ತದೆ. ಇದು ಭಾರತದಲ್ಲೇ ತಯಾರಾದ ಸ್ವದೇಶಿ ನಿರ್ಮಿತ ಆಕಾಶ್ ಮತ್ತು ಎಮ್‌ಆರ್‌ಸ್ಯಾಮ್ ನಂತಹ ಕ್ಷಿಪಣಿ ವ್ಯವಸ್ಥೆಗಳೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸಲಿದ್ದು, ಭಾರತದ ವಾಯು ರಕ್ಷಣಾ ವ್ಯವಸ್ಥೆಯನ್ನು ಅತ್ಯಂತ ಬಲಿಷ್ಠವಾಗಿಸಲಿದೆ.

ಪಂಜಾಬ್ ವಲಯ (ಪಠಾಣ್‌ಕೋಟ್ ಪ್ರದೇಶ) : ಮೊದಲ ಸ್ಕ್ವಾಡ್ರನ್ ಅನ್ನು ಇಲ್ಲಿ ನಿಯೋಜಿಸಲಾಗಿದ್ದು, ಇದು ಪಾಕಿಸ್ತಾನದ ಗಡಿ ಹಾಗೂ ಜಮ್ಮು-ಕಾಶ್ಮೀರ ವಲಯದ ಮೇಲೆ ನಿಗಾ ಇಡುತ್ತದೆ.

ರಾಜಸ್ಥಾನ ಗಡಿ ವಲಯ : ಪಶ್ಚಿಮ ಭಾರತವನ್ನು ಭದ್ರಪಡಿಸಲು ಮತ್ತೊಂದು ಸ್ಕ್ವಾಡ್ರನ್ ಅನ್ನು ಇಲ್ಲಿ ಸನ್ನದ್ಧಗೊಳಿಸಲಾಗಿದೆ. ಇತ್ತೀಚೆಗೆ ಭಾರತಕ್ಕೆ ತಲುಪಿರುವ ನಾಲ್ಕನೇ ಹೊಸ ಎಸ್‌-400 ಸ್ಕ್ವಾಡ್ರನ್ ಅನ್ನು ಸಹ ಇದೇ ರಾಜಸ್ಥಾನ ವಲಯದಲ್ಲೇ ನಿಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ.

ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ವಲಯ (ಸಿಲಿಗುರಿ ಕಾರಿಡಾರ್) : ಚೀನಾ ಗಡಿಗೆ ಹೊಂದಿಕೊಂಡಿರುವ ಆಯಕಟ್ಟಿನ ಚಿಕನ್ಸ್ ನೆಕ್ ಕಾರಿಡಾರ್ ಹಾಗೂ ಈಶಾನ್ಯ ಭಾರತದ ರಕ್ಷಣೆಗಾಗಿ ಇಲ್ಲಿ ಒಂದು ಸ್ಕ್ವಾಡ್ರನ್ ಅನ್ನು ನಿಯೋಜಿಸಲಾಗಿದೆ.

Related posts

ರಾಜ್ಯಸಭಾ ಟಿಕೆಟ್​​ ಕೈತಪ್ಪಿದ ಬಗ್ಗೆ ಮೌನ ಮುರಿದ ದೇವೇಗೌಡರು

Kalpana Editor

ಐಪಿಎಲ್ ಫೈನಲ್ ಸೋಲಿನ ಬೆನ್ನಲ್ಲೇ ಬೆಂಕಿ ಅವಘಡ – ಪಾರಾದ ಜಿಟಿ ತಂಡ

Kalpana Editor

ಸೂರಜ್‌ ಹೆಗ್ಡೆ ನಿಧನ – ಅಂತಿಮ ನಮನ ಸಲ್ಲಿಸಿದ ರಾಹುಲ್‌ ಗಾಂಧಿ

Kalpana Editor