ಬೆಂಗಳೂರು : ಮುಂಗಾರು ಮಳೆಯ ಕೊರತೆ ನಡುವೆಯೂ ರಾಜ್ಯದಲ್ಲಿ ಜೂನ್ 28ರವರೆಗೂ ವರುಣಾರ್ಭಟದ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಕರ್ನಾಟದಲ್ಲಿ ಜೂನ್ 23 ರಿಂದ 28ರ ವರೆಗೆ ಕೆಲ ಭಾಗಗಳಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿದ್ದು, ಒಳನಾಡು ಭಾಗದಲ್ಲಿ ಜೂನ್ 23ರಿಂದ 25ರವರೆಗೆ ಮತ್ತು ಜೂನ್ 27ರಂದು ಮಳೆ ಅಂದಾಜಿಸಲಾಗಿದೆ.
ರಾಜ್ಯದ ಕೆಲವೆಡೆ ಬಿಸಿ ಗಾಳಿ ಮತ್ತು ತೇವಾಂಶ ಎಚ್ಚರಿಕೆಯನ್ನೂ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಗುಡುಗು ಸಹಿತ ಭಾರಿ ಮಳೆಯ ಸಾಧ್ಯತೆ ಇದೆ. ಉತ್ತರ ಒಳನಾಡು ಭಾಗದಲ್ಲಿಯೂ ಗಡುಗು ಸಹಿತ ಸಾಧಾರಣ ಮಳೆ ಅಂದಾಜಿಸಲಾಗಿದೆ.
ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ದಾವಣಗೆರೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಾಳಿ ಜೊತೆಗೆ ಸಾಧಾರಣ ಅಥವಾ ಮಧ್ಯಮ ಪ್ರಮಾಣದ ಮಳೆ ನಿರೀಕ್ಷಿಸಲಾಗಿದೆ.
ಗಾಳಿಯ ವೇಗ ಗಂಟೆಗೆ 30-40 ಕಿಲೋ ಮೀಟರ್ನಷ್ಟು ಇರಬಹುದೆಂದು ಇಲಾಖೆ ತಿಳಿಸಿದೆ. ಬೆಂಗಳೂರು ನಗರದಲ್ಲಿಯೂ ಮಳೆಯ ಸಾಧ್ಯತೆ ಇದ್ದು, ಗುಡುಗು ಸಹಿತ ಮಳೆಯ ಬಗ್ಗೆ ಎಚ್ಚರಿಸಲಾಗಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ ನಡುವೆಯೂ ಉತ್ತರ ಒಳನಾಡಿನ ಕೆಲವೆಡೆ ಮುಂದಿನ ಎರಡು ದಿನಗಳ ಅವಧಿಗೆ ಬಿಸಿ ಗಾಳಿ ಮತ್ತು ತೇವಾಂಶ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇದನ್ನೂ ಓದಿ : ‘ಸಮಂತಾ ತಾಯಿ ಆಗುತ್ತಿರುವುದು ನಿಜ’ ಕೊನೆಗೂ ಗುಡ್ ನ್ಯೂಸ್..!
