ಮಂಡ್ಯ : ಶಿವನಸಮುದ್ರ ಜಲಪಾತದ ಮೇಲ್ಭಾಗದ ಜಾಗದಲ್ಲಿ 24.75 ಮೆಗಾವಾಟ್ ಸಾಮರ್ಥ್ಯದ ಮಿನಿ ಜಲವಿದ್ಯುತ್ ಯೋಜನೆ ಸ್ಥಾಪಿಸುವ ಕುರಿತ ಖಾಸಗಿ ಕಂಪನಿಯ ಪ್ರಸ್ತಾವನೆಗೆ ಅರಣ್ಯ ಇಲಾಖೆಯ ಮೂರನೇ ಹಂತದ ಪರಿಶೀಲನೆ ವೇಳೆಯೂ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಯೋಜನೆ ಜಾರಿಗೆ ಬಂದರೆ ವನ್ಯಜೀವಿ, ವಿಶೇಷವಾಗಿ ಆನೆಗಳ ಸಂಚಾರಕ್ಕೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ.
2005ರಲ್ಲಿ 20 ವರ್ಷಗಳ ಅವಧಿಗೆ ಪಯೋನಿಯರ್ ಪವರ್ ಕಾರ್ಪೊರೇಷನ್ ಲಿಮಿಟೆಡ್ಗೆ ಗುತ್ತಿಗೆ ನೀಡಲಾಗಿದ್ದ ಭೂಮಿಯ ಒಂದು ಭಾಗವನ್ನು ಮರುಹಂಚಿಕೆ ಮಾಡುವಂತೆ 2023ರಲ್ಲಿ ಬಾಲಾಜಿ ಕಾವೇರಿ ಪವರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಪ್ರಸ್ತಾವನೆ ಸಲ್ಲಿಸಿತ್ತು. ಈ ಭೂಮಿ ಎಂ.ಎಂ. ಹಿಲ್ಸ್ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ ಸತ್ತೇಗಾಲ ಪ್ರದೇಶದಲ್ಲಿನ ಶಿವನಸಮುದ್ರ ಜಲಪಾತದ ಮೇಲ್ಭಾಗದಲ್ಲಿದೆ ಎನ್ನಲಾಗಿದೆ.
ಇದೇ ವಿಚಾರ ಸಂಬಂಧ 2024ರ ಅಕ್ಟೋಬರ್ 16ರಂದು ಅಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಸಂತೋಷ್ ಕುಮಾರ್ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಆ ಪ್ರದೇಶದಲ್ಲಿ ಆನೆಗಳು ಮುಕ್ತವಾಗಿ ಸಂಚರಿಸುತ್ತಿವೆ ಎಂಬುದನ್ನು ಅವರು ವರದಿಯಲ್ಲಿ ಉಲ್ಲೇಖಿಸಿದ್ದರು. ಯೋಜನೆಗೆ ಅನುಮತಿ ನೀಡಿದರೆ ಮಾನವ-ಆನೆ ಸಂಘರ್ಷ ಹೆಚ್ಚುವ ಸಾಧ್ಯತೆ ಇದೆ. ಈಗಾಗಲೇ ವನ್ಯಜೀವಿ ಸಂಘರ್ಷ ಪ್ರಕರಣಗಳಲ್ಲಿ ಶೇ.65ರಷ್ಟು ಆನೆಗಳಿಗೆ ಸಂಬಂಧಿಸಿದ್ದಾಗಿವೆ ಎಂದು ಅವರು ಎಚ್ಚರಿಸಿದ್ದರು. ಆದರೆ ವರದಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿತ್ತು.
ನಂತರ ಹಿರಿಯ ಅಧಿಕಾರಿಯೊಬ್ಬರು ಮೊದಲ ವರದಿಯನ್ನು ಕಡೆಗಣಿಸಿ ಯೋಜನೆಯನ್ನು ಮರುಪರಿಶೀಲಿಸಲು ಸೂಚಿಸಿದ್ದರು. 2025ರ ಮಾರ್ಚ್‌ನಲ್ಲಿ ಸಂತೋಷ್ ಕುಮಾರ್ ಅವರ ಸ್ಥಾನಕ್ಕೆ ಬಂದ ವೈ. ಚಕ್ರಪಾಣಿ ಸಲ್ಲಿಸಿದ ಎರಡನೇ ವರದಿಯಲ್ಲಿ ಮೊದಲ ವರದಿಯಲ್ಲಿದ್ದ ಆಕ್ಷೇಪಗಳನ್ನು ಕೈಬಿಡಲಾಗಿತ್ತು. ಈ ಬೆಳವಣಿಗೆ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಬಳಿಕ ಇಲಾಖೆಯು ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಸೂಚಿಸಿತ್ತು. 2025ರ ಜುಲೈನಲ್ಲಿ ಡಿಸಿಎಫ್ ಆಗಿ ಅಧಿಕಾರ ವಹಿಸಿಕೊಂಡ ಭಾಸ್ಕರ್ ಬಿ. ಅವರು 2026ರ ಮಾರ್ಚ್‌ನಲ್ಲಿ ಸಲ್ಲಿಸಿದ ಮೂರನೇ ವರದಿಯಲ್ಲಿ ಯೋಜನೆಯನ್ನು ತಿರಸ್ಕರಿಸುವಂತೆ ಶಿಫಾರಸು ಮಾಡಿದ್ದಾರೆ.
ವರದಿ ಪ್ರಕಾರ, ಯೋಜನೆ ಪ್ರಸ್ತಾಪಿಸಿರುವ ಪ್ರದೇಶವು ಪರಿಸರ ಸೂಕ್ಷ್ಮ ವಲಯ ಹಾಗೂ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಸೇರಿದೆ. ಈ ಪ್ರದೇಶದಲ್ಲಿ ಆನೆ, ಜಿಂಕೆ, ಕಾಡುಹಂದಿ, ಮುಂಗುಸಿ ಸೇರಿದಂತೆ ಹಲವು ವನ್ಯಜೀವಿಗಳು ವಾಸಿಸುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯೋಜನೆಯ ಸ್ಥಳವು ಅಧಿಕೃತವಾಗಿ ಘೋಷಿತ ಆನೆ ಕಾರಿಡಾರ್ ವ್ಯಾಪ್ತಿಗೆ ಸೇರದಿದ್ದರೂ, ಆನೆಗಳಿಗೆ ಇದು ಅತ್ಯಂತ ಪ್ರಮುಖ ವಾಸಸ್ಥಳವಾಗಿದೆ. ಇಲ್ಲಿ ಯಾವುದೇ ಹೊಸ ನಿರ್ಮಾಣ ಚಟುವಟಿಕೆ ಕೈಗೊಂಡರೆ ಈಗಾಗಲೇ ಸೂಕ್ಷ್ಮವಾಗಿರುವ ಮಾನವ-ವನ್ಯಜೀವಿ ಸಂಘರ್ಷ ಪರಿಸ್ಥಿತಿಗೆ ಮತ್ತಷ್ಟು ಹಾನಿಯಾಗಲಿದೆ ಎಂದು ಮೂರನೇ ವರದಿಯಲ್ಲಿ ತಿಳಿಸಿರೋದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಇದನ್ನೂ ಓದಿ : ಬಿ.ವೈ.ವಿಜಯೇಂದ್ರ – ಡಿ.ಕೆ.ಶಿವಕುಮಾರ್ ಮಧ್ಯೆ ಯಾವುದೇ ಸಂಬಂಧವೂ ಇಲ್ಲ..!
