July 11, 2026
kranthikidi.com
ತಾಜಾಸುದ್ದಿದೇಶ

NCERT ಹೊಸ ಪಠ್ಯದಲ್ಲಿ ಮೊದಲ ಬಾರಿಗೆ SIR ಸೇರ್ಪಡೆ..!

ನವದೆಹಲಿ : ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು ಪ್ರಸಕ್ತ ಶೈಕ್ಷಣಿಕ ವರ್ಷಕ್ಕಾಗಿ ಬಿಡುಗಡೆ ಮಾಡಿರುವ ಪಠ್ಯಪುಸ್ತಕದಲ್ಲಿ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಮೊದಲ ಬಾರಿಗೆ ವಿವರವಾಗಿ ಅಳವಡಿಸಲಾಗಿದೆ. 9ನೇ ತರಗತಿಯ ಹೊಸ ಸಾಮಾಜಿಕ ವಿಜ್ಞಾನ ಅಂಡರ್‌ಸ್ಟ್ಯಾಂಡಿಂಗ್ ಸೊಸೈಟಿ: ಇಂಡಿಯಾ ಆಂಡ್ ಬಿಯಾಂಡ್ ಹೆಸರಿನ ಈ ಹೊಸ ಪುಸ್ತಕದಲ್ಲಿ, ಭಾರತೀಯ ಪ್ರಜಾಪ್ರಭುತ್ವ ಎದುರಿಸಿದ ತುರ್ತು ಪರಿಸ್ಥಿತಿ ಮತ್ತು ವಿಶೇಷ ತೀವ್ರ ಪರಿಷ್ಕರಣೆ ಪಠ್ಯವನ್ನು ಸೇರಿಸಲಾಗಿದೆ.

ಚುನಾವಣೆಗಳು ಎಂಬ ಅಧ್ಯಾಯದಲ್ಲಿ ವಿಶೇಷ ತೀವ್ರ ಪರಿಷ್ಕರಣೆಯ ಬಗ್ಗೆ ಉಲ್ಲೇಖಿಸಲಾಗಿದೆ. ಚುನಾವಣಾ ಆಯೋಗವು ಈ ಪ್ರಕ್ರಿಯೆಯ ಮೂಲಕ ಯಾವೊಬ್ಬ ಅರ್ಹ ನಾಗರಿಕನೂ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಮತ್ತು ಯಾವುದೇ ಅನರ್ಹ ವ್ಯಕ್ತಿ ಪಟ್ಟಿಯಲ್ಲಿ ಸೇರದಂತೆ ನೋಡಿಕೊಳ್ಳುತ್ತದೆ. ವಿಶೇಷವಾಗಿ 18 ವರ್ಷ ತುಂಬಿದ, ಜಾಗೃತಿಯ ಕೊರತೆಯಿಂದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸದ ಯುವ ಮತದಾರರನ್ನು ಗುರುತಿಸಿ ಸೇರ್ಪಡೆಗೊಳಿಸಲು ಈ ವ್ಯವಸ್ಥೆ ಸಹಕಾರಿಯಾಗಿದೆ.

ಮರಣ ಹೊಂದಿದವರು, ವಾಸಸ್ಥಳ ಬದಲಾಯಿಸಿದವರು, ನಕಲಿ ಹೆಸರುಗಳು ಹಾಗೂ ಪತ್ತೆಯಾಗದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಇದು ನೆರವಾಗುತ್ತದೆ. ಸಾರ್ವಜನಿಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಿ, ನಂತರವೇ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಭಾರತೀಯ ಚುನಾವಣಾ ಆಯೋಗವು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಬಳಸುತ್ತಿರುವುದನ್ನು ಉಲ್ಲೇಖಿಸಲಾಗಿದೆ. 2024ರ ಸಾರ್ವತ್ರಿಕ ಚುನಾವಣೆಯ ವೇಳೆಗೆ ಭಾರತದಲ್ಲಿ 96.8 ಕೋಟಿಗೂ ಹೆಚ್ಚು ನೋಂದಾಯಿತ ಮತದಾರರಿದ್ದರು ಎಂಬ ಅಂಕಿ-ಅಂಶಗಳನ್ನು ನೀಡಲಾಗಿದೆ.

ಭಾರತದಲ್ಲಿ ಮಹಿಳೆಯರಿಗೆ ಮೊದಲಿನಿಂದಲೇ ಸಮಾನ ಮತದಾನದ ಹಕ್ಕು ನೀಡಲಾಗಿರುವುದನ್ನು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಹಾಗೂ ಗುಜರಾತ್-ಮಹಾರಾಷ್ಟ್ರದ ‘ಮಹಿಳಾ ಸ್ನೇಹಿ ಪಂಚಾಯತ್’ಗಳ ಉದಾಹರಣೆಗಳನ್ನು ನೀಡಲಾಗಿದೆ. ಎಲೆಕ್ಟ್ರಾನಿಕ್ ಮತ ಯಂತ್ರಗಳು (ಇವಿಎಂಗಳು), ಮತದಾರರ ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಸ್ಲಿಪ್‌ಗಳು, ಮಾದರಿ ನೀತಿ ಸಂಹಿತೆ ಮತ್ತು ಮತದಾರರ ಜಾಗೃತಿ ಅಭಿಯಾನಗಳ ಬಗ್ಗೆ ಉಲ್ಲೇಖಿಸಲಾಗಿದೆ.

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿ 50 ವರ್ಷಗಳು ಪೂರೈಸುತ್ತಿರುವ ಸಂದರ್ಭದಲ್ಲೇ ಎನ್‌ಸಿಇಆರ್‌ಟಿ ಪುಸ್ತಕದಲ್ಲಿ ತುರ್ತು ಪರಿಸ್ಥಿತಿ ವಿಷಯ ಸೇರ್ಪಡೆಯಾಗಿದೆ. ಈ ಹಿಂದೆ 12ನೇ ತರಗತಿಯ ರಾಜ್ಯಶಾಸ್ತ್ರ ಪುಸ್ತಕಕ್ಕೆ ಮಾತ್ರ ಸೀಮಿತವಾಗಿದ್ದ ಈ ವಿಷಯವನ್ನು, ಈಗ 9ನೇ ತರಗತಿಯ ‘ಪ್ರಜಾಪ್ರಭುತ್ವ’ ಅಧ್ಯಾಯದ ಅಡಿಯಲ್ಲಿ ‘ಭಾರತದಲ್ಲಿ ಪ್ರಜಾಸತ್ತಾತ್ಮಕ ಆಚರಣೆಗಳಿಗೆ ಇರುವ ಸವಾಲುಗಳು’ ಎಂಬ ವಿಷಯದಡಿ ಸೇರಿಸಲಾಗಿದೆ.

1970ರ ದಶಕದ ಆರಂಭದಲ್ಲಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರದ ವಿರುದ್ಧ ಹೆಚ್ಚಿದ ನಿರುದ್ಯೋಗ, ಹಣದುಬ್ಬರ ಮತ್ತು ದುರಾಡಳಿತದ ಆರೋಪಗಳಿಂದಾಗಿ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡವು. ಇದರ ಬೆನ್ನಲ್ಲೇ ಜೂನ್ 1975 ರಲ್ಲಿ ಆಂತರಿಕ ಅಶಾಂತಿಯ ನೆಪದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು ಎಂದು ಪಠ್ಯದಲ್ಲಿ ವಿವರಿಸಲಾಗಿದೆ. ಈ 21 ತಿಂಗಳ ಅವಧಿಯಲ್ಲಿ ಬಹುತೇಕ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಯಿತು, ಪತ್ರಿಕಾ ಮಾಧ್ಯಮಗಳ ಮೇಲೆ ಸೆನ್ಸಾರ್‌ಶಿಪ್ ಹೇರಲಾಯಿತು ಮತ್ತು ಅನೇಕ ರಾಜಕೀಯ ನಾಯಕರು ಹಾಗೂ ಕಾರ್ಯಕರ್ತರನ್ನು ಬಂಧಿಸಲಾಯಿತು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

ಲೋಕನಾಯಕ ಜಯಪ್ರಕಾಶ್ ನಾರಾಯಣ್ (ಜೆಪಿ) ನೇತೃತ್ವದಲ್ಲಿ ಬಿಹಾರ ಮತ್ತು ಗುಜರಾತ್‌ನಲ್ಲಿ ನಡೆದ ವಿದ್ಯಾರ್ಥಿ ಹಾಗೂ ನಾಗರಿಕರ ಬೃಹತ್ ಜನಚಳವಳಿಯನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. 1977ರ ಚುನಾವಣೆಯಲ್ಲಿ ಅಂದಿನ ಆಡಳಿತ ಪಕ್ಷದ ಸೋಲು ಭಾರತೀಯ ಪ್ರಜಾಪ್ರಭುತ್ವದ ಶಕ್ತಿಯನ್ನು ಮತ್ತು ಸಾಂವಿಧಾನಿಕ ಹಕ್ಕುಗಳ ಮಹತ್ವವನ್ನು ಎತ್ತಿಹಿಡಿಯಿತು ಎಂದು ವಿವರಿಸಲಾಗಿದೆ. ಪ್ರಜಾಪ್ರಭುತ್ವಕ್ಕೆ ಕೇವಲ ತುರ್ತು ಪರಿಸ್ಥಿತಿಯಷ್ಟೇ ಅಲ್ಲದೆ ಪ್ರಸ್ತುತ ಕಾಲದಲ್ಲಿರುವ ಸುಳ್ಳು ಸುದ್ದಿ, ತಪ್ಪು ಮಾಹಿತಿ, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ, ಬಡತನ, ಪ್ರಾದೇಶಿಕತೆ ಮತ್ತು ಲಿಂಗ ಅಸಮಾನತೆಯೂ ದೊಡ್ಡ ಸವಾಲುಗಳಾಗಿವೆ ಎಂದು ವಿವರಿಸಲಾಗಿದೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಪ್ರತಿಕ್ರಿಯಿಸಿ, ಎನ್‌ಸಿಇಆರ್‌ಟಿ ಸರಿಯಾದ ನಿರ್ಧಾರವನ್ನೇ ಮಾಡಿದೆ. ನಮ್ಮ ಮುಂದಿನ ಪೀಳಿಗೆಯು ತುರ್ತು ಪರಿಸ್ಥಿತಿಯಂತಹ ಕರಾಳ ಕೃತ್ಯಗಳನ್ನು ಓದಿ ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರ ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ದೇಶದಲ್ಲಿ ಮರುಕಳಿಸದಂತೆ ತಡೆಯಲು ಸಾಧ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ : ಶಿವನಸಮುದ್ರದ ಮೇಲ್ಭಾಗದಲ್ಲಿ ಮಿನಿ ಜಲವಿದ್ಯುತ್ ಯೋಜನೆಗೆ ವಿರೋಧ..!

Related posts

ಮೇಕೆದಾಟುಗೆ ಅಡ್ಡಗಾಲು ಹಾಕಲು ಮುಂದಾದ ತಮಿಳುನಾಡಿಗೆ ಹಿನ್ನಡೆ..!

Kalpana Editor

RCB ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣವಿಲ್ಲ: ಫೇಕ್ ಪೋಸ್ಟ್‌ ವಿರುದ್ಧ BMRCL ಎಚ್ಚರಿಕೆ..!

Kalpana Editor

ಬೆನ್ನು ನೋವು ಎಂದಿದ್ದ ನಟ ದರ್ಶನ್‌ಗೆ ಅಲೋಕ್ ಕುಮಾರ್ ಸಲಹೆ – ಜೈಲಿನಲ್ಲಿ ಪ್ರಾಣಾಯಾಮ, ಶವಾಸನ..!

Kalpana Editor