June 13, 2026
kranthikidi.com
ತಾಜಾಸುದ್ದಿದೇಶ

ಮೇಕೆದಾಟುಗೆ ಅಡ್ಡಗಾಲು ಹಾಕಲು ಮುಂದಾದ ತಮಿಳುನಾಡಿಗೆ ಹಿನ್ನಡೆ..!

ನವದೆಹಲಿ : ಕರ್ನಾಟಕದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕಲು ಮುಂದಾಗಿದ್ದ ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌ ಸುಪ್ರೀಂಕೋರ್ಟ್ ಶಾಕ್ ಕೊಟ್ಟಿದೆ. ಕರ್ನಾಟಕದ ಪ್ರಸ್ತಾವಿತ ಮೇಕೆದಾಟು ಯೋಜನೆ ವಿರುದ್ಧದ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದ 2025ರ ತೀರ್ಪನ್ನು ಮರುಪರಿಶೀಲನೆಗೆ ಕೋರಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಇದರೊಂದಿಗೆ ಕರ್ನಾಟಕದ ವಿರುದ್ಧ ಹೆಜ್ಜೆ ಇಟ್ಟಿದ್ದ ತಮಿಳುನಾಡು ಸಿಎಂ ವಿಜಯ್​​ಗೆ ಮೊದಲ ಶಾಕ್ ಇದಾಗಿದೆ.

ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಯೋಜನೆಗೆ ತಡೆ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ 2025 ನವೆಂಬರ್​​ ನಲ್ಲಿ ವಜಾಗೊಳಿಸಿತ್ತು. ಆದ್ರೆ, ಇದೀಗ ಈ ತೀರ್ಪನ್ನು ಮರುಪರಿಶೀಲನೆ ಮಾಡಬೇಕೆಂದು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಜಾಯ್ ಮಾಲ್ಯ ಬಾಗ್ಚಿ, ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠ ವಜಾ ಮಾಡಿ ಆದೇಶ ಹೊರಡಿಸಿದೆ.

ಮರು ಪರಿಶೀಲನಾ ಅರ್ಜಿಯ ವಿಷಯಗಳು ಮತ್ತು ಅದರೊಂದಿಗೆ ಲಗತ್ತಿಸಲಾದ ದಾಖಲೆಗಳನ್ನು ನಾವು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ. ತೀರ್ಪಿನ ಪುನರ್ ಪರಿಶೀಲನೆ ಅಗತ್ಯ ಇಲ್ಲ ಎಂದು ಪೀಠ ತಿಳಿಸಿದೆ. ಮೇಕೆದಾಟು ಯೋಜನೆಯ ಪ್ರಸ್ತಾವನೆಯು ಇನ್ನೂ ತಜ್ಞ ಸಂಸ್ಥೆಗಳ ಪರಿಶೀಲನಾ ಹಂತದಲ್ಲಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಸೇರಿದಂತೆ ಹಲವಾರು ಸಮಿತಿಗಳು ಇದರ ಬಗ್ಗೆ ಚರ್ಚೆ ನಡೆಸುತ್ತಿವೆ. ಹೀಗಾಗಿ, ಈ ಹಂತದಲ್ಲಿ ನ್ಯಾಯಾಲಯವು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು 2025ರಲ್ಲೇ ಸುಪ್ರೀಂಕೋರ್ಟ್ ಹೇಳಿತ್ತು.

ಕರ್ನಾಟಕ ಸರ್ಕಾರವು ಮೇಕೆದಾಟು ಯೋಜನೆಗಾಗಿ ಶೀಘ್ರದಲ್ಲೇ ‘ಭೂಮಿ ಪೂಜೆ’ ನೆರವೇರಿಸಲು ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ಈ ತುರ್ತು ಸಭೆ ಕರೆದಿದ್ದು, ಕರ್ನಾಟಕವು ಮೇಕೆದಾಟು ಅಣೆಕಟ್ಟು ನಿರ್ಮಿಸುವುದನ್ನು ತಡೆಯಲು ಮತ್ತು ತಮಿಳುನಾಡಿನ ಕಾವೇರಿ ನೀರಿನ ಹಕ್ಕನ್ನು ರಕ್ಷಿಸಲು ಕಾನೂನು ಹೋರಾಟವನ್ನು ತೀವ್ರಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು ಎನ್ನಲಾಗಿದೆ. ಇದರ ಮಧ್ಯೆ ಇದೀಗ ಸುಪ್ರೀಂಕೋರ್ಟ್ ಶಾಕ್ ಕೊಟ್ಟಿದೆ.

Related posts

ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು; ಡಿಕೆಶಿ ಪಟ್ಟಾಭಿಷೇಕಕ್ಕೆ ಟೈಂ ಫಿಕ್ಸ್‌..!

Kalpana Editor

ಆರೋಗ್ಯವಾಗಿದ್ದೇನೆ, ಸುಳ್ಳು ಸುದ್ದಿ ಹಬ್ಬಿಸಿದವರನ್ನು ಸುಮ್ನೆ ಬಿಡಲ್ಲ – ನಟ ದೊಡ್ಡಣ್ಣ

Kalpana Editor

ಮಳೆಗಾಲದ ಮುನ್ನೆಚ್ಚರಿಕೆ ಕ್ರಮವಾಗಿ ಉಪಕರಣಗಳು ಹಾಗೂ ಸಿಬ್ಬಂದಿ ಸನ್ನದ್ಧತಾ ಕಾರ್ಯಕ್ರಮ..!

Kalpana Editor