July 12, 2026
kranthikidi.com
ತಾಜಾಸುದ್ದಿರಾಜ್ಯ

ಎಲಿವೇಟೆಡ್ ಕಾರಿಡಾರ್ ಹೆಸರಿನಲ್ಲಿ ಬೆಂಗಳೂರಿಗರ ಮೇಲೆ ಮತ್ತೊಂದು ತೆರಿಗೆ ದರೋಡೆ; ಜನವಿರೋಧಿ ನಿರ್ಧಾರವನ್ನು ತಕ್ಷಣ ಹಿಂಪಡೆಯಿರಿ – ಆಮ್ ಆದ್ಮಿ ಪಕ್ಷ ಆಗ್ರಹ..!

ಬೆಂಗಳೂರು : ಬೆಂಗಳೂರು ನಗರದ ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕಾಗಿ ಆಸ್ತಿ ತೆರಿಗೆಯನ್ನು ಹೆಚ್ಚಿಸುವ ಪ್ರಸ್ತಾವನೆ ಸಂಪೂರ್ಣ ಜನವಿರೋಧಿ ಕ್ರಮವಾಗಿದ್ದು, ಸರ್ಕಾರವೇ ತೆರಿಗೆ ರೂಪದಲ್ಲಿ ಸಾರ್ವಜನಿಕರ ದರೋಡೆಗೆ ಇಳಿದಿದೆ ಎಂದು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸಿದೆ. ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಅವರ ಹೇಳಿಕೆಯಾಗಿದೆ.

ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಮಾತನಾಡಿ, ” ಈಗಾಗಲೇ ಬೆಂಗಳೂರಿನ ಜನರು ಆಸ್ತಿ ತೆರಿಗೆ, ಕಸ ನಿರ್ವಹಣಾ ಶುಲ್ಕ, ನೀರು, ವಿದ್ಯುತ್ ಸೇರಿದಂತೆ ವಿವಿಧ ರೀತಿಯ ತೆರಿಗೆಗಳನ್ನು ಕಟ್ಟುತ್ತಿದ್ದಾರೆ. ಅದರ ಮೇಲೂ ಎಲಿವೇಟೆಡ್ ಕಾರಿಡಾರ್ ಹೆಸರಿನಲ್ಲಿ ಮತ್ತೊಂದು ತೆರಿಗೆ ವಿಧಿಸುವುದು ಸರ್ಕಾರದ ಆಡಳಿತ ವೈಫಲ್ಯವನ್ನು ಜನರ ಮೇಲೆ ಹೊರಿಸುವ ಪ್ರಯತ್ನ ಹಾಗೂ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ “

” ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 2015 ಹಾಗೂ 2030ರ ಮಾಸ್ಟರ್ ಪ್ಲಾನ್‌ಗಳಲ್ಲಿ ರಸ್ತೆ ಜಾಲ, ರಿಂಗ್ ರಸ್ತೆಗಳು, ಸಾರ್ವಜನಿಕ ಸಾರಿಗೆ, ಮಳೆನೀರು ನಿರ್ವಹಣೆ, ಕೆರೆಗಳ ಸಂರಕ್ಷಣೆ, ಹಸಿರು ವಲಯ, ಪಾದಚಾರಿ ಮಾರ್ಗಗಳು ಹಾಗೂ ಸೈಕಲ್ ಟ್ರ್ಯಾಕ್‌ಗಳಂತಹ ಅನೇಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿತ್ತು. ಆದರೆ ಸರ್ಕಾರವು ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸದೆ ನಿರ್ಲಕ್ಷ್ಯ ವಹಿಸಿದೆ.”

” ಇದೀಗ ಸುಮಾರು 126 ಕಿ.ಮೀ. ಉದ್ದದ 11 ಎಲಿವೇಟೆಡ್ ಕಾರಿಡಾರ್‌ಗಳನ್ನು ಟೋಲ್ ಮುಕ್ತ ರಸ್ತೆ ಎಂದು ಘೋಷಿಸಿದ ನಂತರ, ಟೋಲ್ ಸಂಗ್ರಹಿಸಲು ಸಾಧ್ಯವಿಲ್ಲ ಎಂಬ ನೆಪದಲ್ಲಿ ಆಸ್ತಿ ತೆರಿಗೆಯನ್ನು ಹೆಚ್ಚಿಸುವುದು ಜನರನ್ನು ವಂಚಿಸುವ ಕ್ರಮವಾಗಿದೆ. ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುವ ನಗರಗಳಲ್ಲಿ ಒಂದಾಗಿದೆ. ಜಿಎಸ್‌ಟಿ, ಸ್ಟಾಂಪ್ ಡ್ಯೂಟಿ, ನೋಂದಣಿ ಶುಲ್ಕ, ಮೋಟಾರು ವಾಹನ ತೆರಿಗೆ ಹಾಗೂ ಆಸ್ತಿ ತೆರಿಗೆಯ ಮೂಲಕ ಸಾವಿರಾರು ಕೋಟಿ ರೂಪಾಯಿ ಸರ್ಕಾರದ ಖಜಾನೆಗೆ ಹರಿದು ಬರುತ್ತಿದ್ದರೂ, ಮೂಲಸೌಕರ್ಯ ಅಭಿವೃದ್ಧಿಗೆ ಅದನ್ನು ಸಮರ್ಪಕವಾಗಿ ಬಳಸದೆ ಮತ್ತೆ ಜನರ ಜೇಬಿಗೆ ಕೈ ಹಾಕುತ್ತಿರುವುದು ಖಂಡನೀಯ,” ಎಂದು ಹೇಳಿದರು. ಇದನ್ನೂ ಓದಿ : ಶಿವನಸಮುದ್ರದ ಮೇಲ್ಭಾಗದಲ್ಲಿ ಮಿನಿ ಜಲವಿದ್ಯುತ್ ಯೋಜನೆಗೆ ವಿರೋಧ..!

ಡಾ. ಸತೀಶ್ ಕುಮಾರ್ ಅವರು ಸರ್ಕಾರವನ್ನು ಒತ್ತಾಯಿಸಿ ಕೆಳಕಂಡ ಬೇಡಿಕೆಗಳನ್ನು ಮುಂದಿಟ್ಟರು. ಎಲಿವೇಟೆಡ್ ಕಾರಿಡಾರ್ ಹೆಸರಿನಲ್ಲಿ ಆಸ್ತಿ ತೆರಿಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ತಕ್ಷಣ ಹಿಂಪಡೆಯಬೇಕು. ಬಿಡಿಎ 2015 ಹಾಗೂ 2030ರ ಮಾಸ್ಟರ್ ಪ್ಲಾನ್‌ನಲ್ಲಿರುವ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಜಾರಿಗೊಳಿಸಬೇಕು. ಎಲಿವೇಟೆಡ್ ಕಾರಿಡಾರ್ ಯೋಜನೆಗಳ ಡಿಪಿಆರ್, ವೆಚ್ಚ, ಟೆಂಡರ್ ಹಾಗೂ ಹಣಕಾಸಿನ ಮೂಲಗಳನ್ನು ಸಂಪೂರ್ಣ ಪಾರದರ್ಶಕವಾಗಿ ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು.

ಆಮ್ ಆದ್ಮಿ ಪಕ್ಷದ ರಾಜ್ಯ ವಕ್ತಾರೆ ಉಷಾ ಮೋಹನ್ ಮಾತನಾಡಿ, “ಬೆಂಗಳೂರು ಅಭಿವೃದ್ಧಿ ಎಂದರೆ ಜನರ ಮೇಲೆ ತೆರಿಗೆಗಳ ಹೊರೆ ಹಾಕುವುದಲ್ಲ; ಉತ್ತಮ ಯೋಜನೆ, ಪಾರದರ್ಶಕ ಆಡಳಿತ ಮತ್ತು ಜನಪರ ನೀತಿಗಳ ಮೂಲಕ ಅಭಿವೃದ್ಧಿ ಸಾಧಿಸಬೇಕು. ಇಲ್ಲಿಯವರೆಗೂ ಸಾಧ್ಯವಾದ ಎಲ್ಲಾ ರೀತಿಯ ತೆರಿಗೆಗಳನ್ನು ವಿಧಿಸಿದ ಸರ್ಕಾರ, ಈಗ ಯಾವುದೇ ಮಾರ್ಗ ಕಾಣದೆ ಬೆಂಗಳೂರಿಗರ ರಕ್ತ ಹೀರುವಂತಹ ದರೋಡೆ ತೆರಿಗೆಗೆ ಇಳಿದಿರುವುದು ನಗರದ ದುರ್ದೈವಕ್ಕೆ ಹಿಡಿದ ಕನ್ನಡಿಯಾಗಿದೆ.

ನಗರದ ಅಭಿವೃದ್ಧಿಯ ಹೆಸರಿನಲ್ಲಿ ನಾಗರಿಕರ ರಕ್ತವನ್ನು ಹೀರುವ ಬದಲು, ಪ್ರತಿಯೊಬ್ಬರ ಬಳಿಯೂ ಒಂದೊಂದು ಬಾಟಲಿ ರಕ್ತವನ್ನು ಸಂಗ್ರಹಿಸಿ ಮಾರಾಟ ಮಾಡಿ ಸರ್ಕಾರದ ಖಜಾನೆ ತುಂಬಿಸಿಕೊಳ್ಳಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವುದು ಅತ್ಯಂತ ದುಃಖದ ಸಂಗತಿ.ಇನ್ನೂ ಆತಂಕಕಾರಿ ಸಂಗತಿಯೆಂದರೆ, ಜನತೆ ಪ್ರಶ್ನಿಸುವ ಮನೋಭಾವವನ್ನು ಕಳೆದುಕೊಳ್ಳುತ್ತಿರುವುದರ ಬೆಲೆಯನ್ನು ಜನರೇ ಕಟ್ಟಬೇಕೆಂಬ ಧೋರಣೆಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿದೆ. ಪ್ರಜಾಪ್ರಭುತ್ವದಲ್ಲಿ ಜನರ ಅಭಿಪ್ರಾಯವನ್ನು ಗೌರವಿಸದೇ, ಏಕಪಕ್ಷೀಯವಾಗಿ ತೆರಿಗೆಗಳನ್ನು ಹೇರಲಾಗುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಷಾ ಮೋಹನ್ ಅವರು ಸರ್ಕಾರವನ್ನು ಒತ್ತಾಯಿಸಿ ಕೆಳಕಂಡ ಬೇಡಿಕೆಗಳನ್ನು ಮುಂದಿಟ್ಟರು. ಬೆಂಗಳೂರಿನ ಸಂಚಾರ ಸಮಸ್ಯೆಗೆ ವೈಜ್ಞಾನಿಕ, ಸಮಗ್ರ ಹಾಗೂ ಸಾರ್ವಜನಿಕ ಸಾರಿಗೆ ಆಧಾರಿತ ಶಾಶ್ವತ ಪರಿಹಾರವನ್ನು ಜಾರಿಗೆ ತರಬೇಕು. ಯಾವುದೇ ಹೊಸ ತೆರಿಗೆ ವಿಧಿಸುವ ಮೊದಲು ಸಾರ್ವಜನಿಕ ಸಮಾಲೋಚನೆ ನಡೆಸಿ ನಾಗರಿಕರ ಅಭಿಪ್ರಾಯವನ್ನು ಕಡ್ಡಾಯವಾಗಿ ಪಡೆಯಬೇಕು.

ಬೆಂಗಳೂರಿನ ಅಭಿವೃದ್ಧಿಯನ್ನು ತೆರಿಗೆಗಳ ಮೂಲಕವಲ್ಲ, ಸಮರ್ಥ ಆಡಳಿತ, ಪಾರದರ್ಶಕ ಯೋಜನೆ ಹಾಗೂ ಸಾರ್ವಜನಿಕರ ವಿಶ್ವಾಸದ ಆಧಾರದ ಮೇಲೆ ಕೈಗೊಳ್ಳಬೇಕು. ಸರ್ಕಾರವು ಈ ಕೂಡಲೇ ತನ್ನ ದರೋಡೆ ನೀತಿಯನ್ನು ಕೈ ಬಿಡದಿದ್ದಲ್ಲಿ, ಬೆಂಗಳೂರಿಗರೊಂದಿಗೆ ಬೃಹತ್ ಜನಾಂದೋಲನ ನಡೆಸಲಾಗುವುದು. ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಭಾಗವಹಿಸಿದ್ದರು. ಇದನ್ನೂ ಓದಿ : NCERT ಹೊಸ ಪಠ್ಯದಲ್ಲಿ ಮೊದಲ ಬಾರಿಗೆ SIR ಸೇರ್ಪಡೆ..!

Related posts

ಉಜ್ವಲ ಯೋಜನೆ; ವಾರ್ಷಿಕ ಸಿಲಿಂಡರ್‌ ಸಂಖ್ಯೆ 9 ರಿಂದ 4ಕ್ಕೆ ಇಳಿಕೆ..!

Kalpana Editor

ಮೈಸೂರು ದಸರಾ 2026; ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ, ಆನೆಗಳಿಗೆ ಇಸಿಜಿ

Kalpana Editor

ಹೈಕೋರ್ಟ್​​ನಲ್ಲಿ ಡಿ ಬಾಸ್‌ – ಜೂನ್ 30ಕ್ಕೆ ಭವಿಷ್ಯ ನಿರ್ಧಾರ..!

Kalpana Editor