August 26, 2026
kranthikidi.com
ತಾಜಾಸುದ್ದಿಸಿನಿಮಾ

ಹಿರಿಯ ನಿರ್ದೇಶಕ ಕೆ. ಭಾಗ್ಯರಾಜ್ ನಿಧನ; ಡಾ. ರಾಜ್​ಕುಮಾರ್ ರೀತಿ ನೇತ್ರದಾನ..!

ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಹಾಗೂ ಚಿತ್ರಕಥೆಗಾರ ಕೆ. ಭಾಗ್ಯರಾಜ್ ಅವರು ಶನಿವಾರ (ಜೂನ್ 27) ಚೆನ್ನೈನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ತಮ್ಮ ವಿಶಿಷ್ಟ ಕಥಾಹಂದರ ಹಾಗೂ ಚಿತ್ರಕಥೆಯ ಮೂಲಕ ಚಿತ್ರರಂಗದಲ್ಲಿ ‘ಚಿತ್ರಕಥೆಯ ರಾಜ’ ಎಂದೇ ಖ್ಯಾತರಾಗಿದ್ದ, ಭಾಗ್ಯರಾಜ್ ಅವರ ಅಗಲಿಕೆ ಚಿತ್ರರಂಗ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ಡಾ. ರಾಜ್​ಕುಮಾರ್ ರೀತಿ ಕೆ. ಭಾಗ್ಯರಾಜ್ ಕೂಡ ನೇತ್ರದಾನ ಮಾಡಿದ್ದಾರೆ.

ಭಾಗ್ಯರಾಜ್ ಅವರು ತಮ್ಮ ನೇತ್ರಗಳನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರು. ಅವರ ನಿಧನದ ಬೆನ್ನಲ್ಲೇ ಕುಟುಂಬಸ್ಥರು ಆ ಆಸೆಯನ್ನು ತಕ್ಷಣವೇ ಈಡೇರಿಸಿದ್ದಾರೆ. ಭಾಗ್ಯರಾಜ್ ಅವರ ಮರಣದ ನಂತರ ಕುಟುಂಬಸ್ಥರು ಕಣ್ಣಿನ ಆಸ್ಪತ್ರೆಗೆ ಮಾಹಿತಿ ನೀಡಿದ್ದು, ವೈದ್ಯರ ತಂಡವು ಅವರ ನಿವಾಸಕ್ಕೆ ಆಗಮಿಸಿ ಕಾರ್ನಿಯಾ ನೇತ್ರದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಭಾಗ್ಯರಾಜ್ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. ‘ಕೆ. ಭಾಗ್ಯರಾಜ್ ಅವರ ಅಂತಿಮ ದರ್ಶನಕ್ಕೆ ಹೋದಾಗ ಅವರು ನೇತ್ರದಾನ ಮಾಡಿರುವ ವಿಷಯ ತಿಳಿಯಿತು. ತಾನು ಮರಣ ಹೊಂದಿದ ಮೇಲೆಯೂ ಮತ್ತೊಬ್ಬರ ಬಾಳಿಗೆ ಬೆಳಕಾಗಬೇಕು ಎಂಬ ಅವರ ಆಲೋಚನೆ ಎಷ್ಟು ಶ್ಲಾಘಿಸಿದರೂ ಸಾಲದು. ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿರುವ ಇಂತಹ ಪ್ರಮುಖ ವ್ಯಕ್ತಿಗಳು ನೇತ್ರದಾನ ಮಾಡಿದಾಗ, ಅದು ಸಾರ್ವಜನಿಕರಲ್ಲಿ ದೊಡ್ಡ ಜಾಗೃತಿ ಮೂಡಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ, ಭಾರತದಲ್ಲಿ ವಾರ್ಷಿಕವಾಗಿ 1 ಲಕ್ಷದಿಂದ 2 ಲಕ್ಷ ಜನರಿಗೆ ಕಾರ್ನಿಯಾ ನೇತ್ರದಾನದ ಅಗತ್ಯವಿರುತ್ತದೆ, ಆದರೆ ಪ್ರಸ್ತುತ ದೇಶದಲ್ಲಿ ಕೇವಲ 45ರಿಂದ 50 ಸಾವಿರ ಕಾರ್ನಿಯಾಗಳು ಮಾತ್ರ ಲಭ್ಯವಾಗುತ್ತಿವೆ ಎಂದು ಅವರು ದೇಶದ ನೇತ್ರದಾನದ ಕೊರತೆಯ ಕುರಿತು ಕಳಕಳಿ ವ್ಯಕ್ತಪಡಿಸಿದ್ದಾರೆ. ಭಾಗ್ಯರಾಜ್ ಅವರು ನೇತ್ರದಾನ ಮಾಡಿರುವುದು ಇತರರಿಗೂ ಮಾದರಿ ಆಗಿದೆ.

Related posts

ಪಿಡಿಓ, ಕಾರ್ಯದರ್ಶಿ, ಲೆಕ್ಕ ಸಹಾಯಕರ ಕೌನ್ಸೆಲಿಂಗ್‌ಗೆ ಈಶ್ವರ ಖಂಡ್ರೆ ಚಾಲನೆ..!

Kalpana Editor

ಬಸವರಾಜ ಹೊರಟ್ಟಿ ಅವರ ಹೃದಯ ವೈಶಾಲ್ಯತೆ ಮಶ್ಲಾಘನೀಯ; ಸಿಎಂ ಡಿಕೆ ಶಿವಕುಮಾರ್

kknewskannada1987@gmail.com

ಖಮೇನಿ ಅಂತ್ಯಕ್ರಿಯೆಗೂ ಮುನ್ನವೇ ಇರಾನ್‌ ಮೇಲೆ ವಿನಾಶಕಾರಿ ದಾಳಿ; ಇನ್ನೂ ಪರಿಸ್ಥಿತಿ ಕೆಟ್ಟದಾಗಿರಲಿದೆ – ಟ್ರಂಪ್‌

Kalpana Editor