August 26, 2026
kranthikidi.com
ತಾಜಾಸುದ್ದಿದೇಶ

ಕಾಶ್ಮೀರದಲ್ಲಿ ಮೇಘಸ್ಫೋಟ; ಹಠಾತ್ ಪ್ರವಾಹದಿಂದ ಅಪಾರ ಪ್ರಮಾಣದ ಆಸ್ತಿ ಹಾನಿ..!

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಉಂಟಾದ ಮೇಘಸ್ಫೋಟದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಠಾತ್ ಪ್ರವಾಹದಿಂದ ಕೃಷಿ ಭೂಮಿ, ತೋಟಗಳು, ಮನೆಗಳು ಹಾಗೂ ಖಾಸಗಿ ಆಸ್ತಿಗೆ ವ್ಯಾಪಕ ಹಾನಿಯಾಗಿದೆ. ಸ್ಥಳೀಯ ಆಡಳಿತ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.

ದೋಡಾ ಜಿಲ್ಲೆಯ ಭಲೇಶಾ ಪ್ರದೇಶದ ಖಲ್ಜುಗಸರ್‌ನಲ್ಲಿ ಎರಡು ಮೇಘಸ್ಫೋಟಗಳು ಸಂಭವಿಸಿವೆ. ಇದರಿಂದ ಉಂಟಾದ ಪ್ರವಾಹದಲ್ಲಿ ರೈತರ ಬೆಳೆದು ನಿಂತ ಬೆಳೆಗಳು ಮತ್ತು ಹಣ್ಣಿನ ತೋಟಗಳು ಕೊಚ್ಚಿಹೋಗಿವೆ. ಹಲವು ಮನೆಗಳು ಹಾಗೂ ಇತರೆ ಖಾಸಗಿ ಆಸ್ತಿಗಳಿಗೂ ಹಾನಿಯಾಗಿದೆ.

ಭಾರೀ ಮಳೆಯಿಂದ ಜಿಲ್ಲೆಯ ಹಲವು ಪ್ರಮುಖ ರಸ್ತೆಗಳು ಬಂದ್ ಆಗಿದ್ದು, ಭಲೇಶಾದ ಭಾಟ್ಯಾಸ್ ಪ್ರದೇಶವು ಹಲವು ಗಂಟೆಗಳ ಕಾಲ ಹೊರ ಜಗತ್ತಿನ ಸಂಪರ್ಕದಿಂದ ಕಡಿತಗೊಂಡಿತ್ತು. ಇದರಿಂದ ಸ್ಥಳೀಯ ನಿವಾಸಿಗಳು ಸಂಕಷ್ಟ ಎದುರಿಸಿದ್ದಾರೆ. ಇದೇ ವೇಳೆ, ದೋಡಾ ಜಿಲ್ಲೆಯ ಕಾಶ್ಟಿಗಢ ಪ್ರದೇಶದಲ್ಲೂ ಧಾರಾಕಾರ ಮಳೆಯ ಪರಿಣಾಮ ಹಠಾತ್ ಪ್ರವಾಹ ಉಂಟಾಗಿದೆ. ಆದರೆ ಈ ಪ್ರದೇಶದಲ್ಲಿ ಯಾವುದೇ ಸಾವುನೋವು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ವಿಪತ್ತು ನಿರ್ವಹಣಾ ತಂಡಗಳನ್ನು ಸಕ್ರಿಯಗೊಳಿಸಿದೆ. ಪೀಡಿತ ಪ್ರದೇಶಗಳಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಿಲುಕಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದೆ.

ನಿರಂತರ ಮಳೆಯು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದ್ದರೂ, ಅಧಿಕಾರಿಗಳು ಪರ್ಯಾಯ ಮಾರ್ಗಗಳ ಮೂಲಕ ಪ್ರವಾಹ ಪೀಡಿತ ಪ್ರದೇಶಗಳನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಹವಾಮಾನ ಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದ್ದು, ಜನರು ಅನಗತ್ಯವಾಗಿ ಹೊರಗೆ ತೆರಳದಂತೆ ಆಡಳಿತ ಎಚ್ಚರಿಕೆ ನೀಡಿದೆ. ಇದನ್ನೂ ಓದಿ : “ಗ್ಯಾರಂಟಿ ಮೋಸ” – ಗೃಹಜ್ಯೋತಿ ಮರು ಪರಿಶೀಲನೆಗೆ ಜೆಡಿಎಸ್ ಕಿಡಿ..!

Related posts

ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಚೀನಾ ರಾಕೆಟ್‌ ಪತನ..!

kknewskannada1987@gmail.com

ನಟ ರವಿ-ಆರತಿ ವಿಚ್ಛೇದನ ಪ್ರಕರಣ; ಜೀವನಾಂಶ ಬೇಡಿಕೆಗೆ ನಿರಾಕರಣೆ..!

Kalpana Editor

ಕಾವೇರಿ ವಿವಾದ – ಕುಡಿಯುವ ನೀರು ರಕ್ಷಿಸುವುದು, ನಮ್ಮ ಮೊದಲ ಆದ್ಯತೆ; ಬೊಮ್ಮಾಯಿ

Kalpana Editor