ರಾಮನಗರ : ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ, ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ನಿಯಮಗಳನ್ನು ಗಾಳಿಗೆ ತೂರಿ, ಕಲ್ಯಾಣ ಮಂಟಪದಲ್ಲಿ ಅಕ್ರಮವಾಗಿ ದಾಖಲೆ ಸೃಷ್ಟಿ ಮಾಡುತ್ತಿರುವುದನ್ನು ಖಂಡಿಸಿ ಶುಕ್ರವಾರ ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳು ಮುಗಿಲುಮುಟ್ಟಿದವು. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿಗೆ ನಿಖಿಲ್ ಕುಮಾರಸ್ವಾಮಿ ನೇರ ಸವಾಲು : ದೆಹಲಿಯಲ್ಲಿ ಕುಳಿತು ವೋಟ್ ಚೋರಿ ಬಗ್ಗೆ ಮಾತನಾಡುವ ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ ಅವರೇ, ಕರ್ನಾಟಕದಲ್ಲಿ ನಿಮ್ಮದೇ ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಬಂದು ನೋಡಲಿ. ಈ ವಿಚಾರವನ್ನು ದೆಹಲಿಗೆ ತೆಗೆದುಕೊಂಡು ಹೋಗಿ, ರಾಹುಲ್ ಗಾಂಧಿಗೆ ಅರ್ಥವಾಗುವಂತೆ ಇಂಗ್ಲಿಷ್‌ನಲ್ಲೇ ಪ್ರೆಸ್‌ಮೀಟ್ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸವಾಲು ಹಾಕಿದರು.
ಸಿಎಂ ಸಿದ್ದರಾಮಯ್ಯ ಅವರು ಮಾಡುತ್ತಿರುವ ಎಲ್ಲಾ ಯೋಜನೆಗಳು 30 ಸಾವಿರ ಕೋಟಿ ದಾಟುತ್ತಿವೆ. ಇದನ್ನು ನೋಡಿದರೆ ದೆಹಲಿಯ ಗಾಂಧಿ ಕುಟುಂಬಕ್ಕೆ ಇವರು ಯಾವುದೋ ದೊಡ್ಡ ಕಮಿಟ್‌ಮೆಂಟ್ ಕೊಟ್ಟು ಬಂದ ಹಾಗೆ ಕಾಣುತ್ತಿದೆ. ಸುಮಾರು 9 ಸಾವಿರ ಕೋಟಿ ರೂಪಾಯಿ ಕೊಳ್ಳೆ ಹೊಡೆದು ಚುನಾವಣೆ ಮಾಡಲು ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ರಾಮನಗರ ಡಿಸಿ ವಿರುದ್ಧ ನಿಖಿಲ್ ಕೆಂಡಾಮಂಡಲ : ಮೂರು ದಿನಗಳ ಹಿಂದೆ ನಮ್ಮ ಬಿಎಲ್‌ಎ-2 ಗಳನ್ನು ಕರೆಸಿ ತಹಶೀಲ್ದಾರ್ ದಾರಿ ತಪ್ಪಿಸಿದ್ದಾರೆ. ಮುಸ್ಲಿಮರ ವಾರ್ಡ್ಗಳಾದ ಟಿಪ್ಪು ನಗರ, ಯಾರಬ್ ನಗರ, ಮೆಹಬೂಬ್ ನಗರಗಳಲ್ಲಿ ಅಕ್ರಮವಾಗಿ ಎಸ್‌ಐಆರ್ ನಡೆಯುತ್ತಿದೆ. ಅಲ್ಲಿಗೆ ಹೋಗಲು ಭಯದ ವಾತಾವರಣ ಸೃಷ್ಟಿಸಲಾಗಿದೆ. ಆದರೂ ನಮ್ಮ ಕಾರ್ಯಕರ್ತರು ಧೈರ್ಯ ಮಾಡಿ ಒಳಗೆ ಹೋಗಿ ವಿಡಿಯೋ ಸಾಕ್ಷ್ಯ ತಂದಿದ್ದಾರೆ. ಇದನ್ನು ನೋಡಿದರೆ ರಾಮನಗರ ಮುಂದೆ ‘ರಹೀಂ ನಗರ’ ಆಗುತ್ತೋ ಏನೋ ಎಂದು ನಿಖಿಲ್ ಕಿಡಿಕಾರಿದರು.
ಐಎಎಸ್ ಓದಿರುವ ಈ ಆಸಾಮಿಗೆ ಮೂಲ ನಿಯಮಗಳೇ ಗೊತ್ತಿಲ್ಲ. ಅರ್ಜಿ ಹಂಚುವಾಗ ಮೂರೂ ಪಕ್ಷಗಳ ಬಿಎಲ್‌ಒಗಳು ಇರಬೇಕು, ಮೂರು ಬಾರಿ ಮನೆಮನೆಗೆ ಹೋಗಿ ಹಂಚಬೇಕು. ಆದರೆ ರಾಮನಗರ ಡಿಸಿ ತಾನೇ ಹೊಸ ಕಾನೂನು ಬರೆದಂತೆ ವರ್ತಿಸುತ್ತಾ ನನ್ನನ್ನೇ ದಾರಿ ತಪ್ಪಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವಿರುದ್ಧ ನಿಖಿಲ್ ಅವರು ದೂರಿದರು. ಇದನ್ನೂ ಓದಿ : ಎಸ್‌ಐಆರ್ – ಮನೆ ಮನೆಗೆ ಭೇಟಿ ಕೊಡದೆ, ಫಾರಂ ಇಶ್ಯೂ; ಇದು ಸರಿಯಾದ ಪ್ರಕ್ರಿಯೆ ಅಲ್ಲ..!
ಈಗ ಪ್ರತಿಭಟನೆಗೆ ಹೆದರಿ ತಲೆಮರೆಸಿಕೊಂಡು, ಕನಕಪುರದಲ್ಲಿ ಸಿಎಂ ಭಾಗವಹಿಸುತ್ತಿರುವ ಮಠದ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಅದೇನು ಸರ್ಕಾರಿ ಕಾರ್ಯಕ್ರಮವೇ? ಅಲ್ಲಿಗೆ ಹೋಗಲು ಇವರಿಗೆ ಪ್ರೋಟೋಕಾಲ್ ಇದೆಯಾ? ಡಿಸಿಗೆ ಮಾನ-ಮರ್ಯಾದೆ ಇದೆಯಾ? ನೀವು ಸಿಎಂಗೆ ಮುಖ ತೋರಿಸಲು ಹೋಗಬೇಕಾ? ನೀವು ಟೂರಿಂಗ್ ಟಾಕೀಸ್ ಗಿರಾಕಿಗಳು, ಯಾರದ್ದೋ ಮುಲಾಜಿಗೆ ಕೆಲಸ ಮಾಡಬೇಡಿ ಎಂದು ನಿಖಿಲ್ ತರಾಟೆಗೆ ತೆಗೆದುಕೊಂಡರು.
ಶಾಸಕ ಡಾ.ರಂಗನಾಥ್ ವಿರುದ್ಧ ನಿಖಿಲ್ ಆಕ್ರೋಶ : ಕುಣಿಗಲ್‌ನಲ್ಲಿ ಒಂದು ಕೆಟ್ಟ ಜೀನ್ ಇದೆ. ಅವರು ಡಾಕ್ಟರ್ ಅಂತೆ, ಯಾವ ರೀತಿ ಆಪರೇಷನ್ ಮಾಡ್ತಾರೋ ಗೊತ್ತಿಲ್ಲ, ಅಲ್ಲೂ ಎಸ್‌ಐಆರ್ ಅಕ್ರಮ ಮಾಡ್ತಿದ್ದಾರೆ. ಇನ್ನು ಇಲ್ಲಿನ ಜನಪ್ರತಿನಿಧಿ ಪುಣ್ಯಾತ್ಮ ಆಸ್ಪತ್ರೆಯಲ್ಲೇ ಕೂತುಕೊಂಡು ಬಿಎಲ್‌ಒಗಳಿಗೆ ಫೋನ್ ಮಾಡಿ ನಮ್ಮಪ್ಪನ ಸರ್ಕಾರ ಇದೆ, ನಾನು ಹೇಳಿದ ಹಾಗೆ ಮಾಡು ಎಂದು ಬೆದರಿಸುತ್ತಿದ್ದಾರಂತೆ ಎಂದು ಕುಣಿಗಲ್ ಶಾಸಕರ ವಿರುದ್ಧ ಆರೋಪಿಸಿದರು.
ಕಳೆದ ಚುನಾವಣೆಯಲ್ಲೂ ನನ್ನ ವಿರುದ್ಧ ಹೊರರಾಜ್ಯದ ಜನರನ್ನು ತಂದು ಕಳ್ಳ ಮತದಾನ ಮಾಡಿಸಿ ಇವರು ಗೆದ್ದಿದ್ದರು. ರಾಮನಗರದ ಜನತೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ನಿಮ್ಮ ಮಕ್ಕಳ ಭವಿಷ್ಯ ಹಾಳಾಗಲಿದೆ. ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಒಂದು ದಿನವೂ ಅಧಿಕಾರ ದುರುಪಯೋಗಪಡಿಸಿಕೊಂಡಿರಲಿಲ್ಲ ಎಂದು ಅವರು ನೆನಪಿಸಿದರು.
ನಿಖಿಲ್ ಕುಮಾರಸ್ವಾಮಿ ಅವರ ಆಗ್ರಹ : ನಿನ್ನೆ ಕಲ್ಯಾಣ ಮಂಟಪದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ನಿಯಮ ಉಲ್ಲಂಘಿಸಿದ ಬಿಎಲ್‌ಒಗಳನ್ನು ತಕ್ಷಣವೇ ಸಸ್ಪೆಂಡ್ ಮಾಡಬೇಕು, ಕೇವಲ ನೋಟಿಸ್ ನೀಡಿ ನಾಟಕ ಮಾಡುತ್ತಿದ್ದಾರೆ. ರಾಮನಗರದ 35 ಸೂಕ್ಷ್ಮ ಮತಗಟ್ಟೆಗಳ ಎಸ್‌ಐಆರ್ ಪ್ರಕ್ರಿಯೆಯನ್ನು ರಾಜ್ಯ ಚುನಾವಣಾ ಆಯೋಗವೇ ಖುದ್ದಾಗಿ ಬಂದು ನಡೆಸಬೇಕು. ಎಲ್ಲಾ ವಿಡಿಯೋ ಸಾಕ್ಷ್ಯಗಳನ್ನು ಪೆನ್‌ಡ್ರೈವ್‌ನಲ್ಲಿ ಹಾಕಿ ರಾಜ್ಯ ಚುನಾವಣಾ ಆಯೋಗ ಹಾಗೂ ದೆಹಲಿಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗುವುದು.
ಅಗತ್ಯಬಿದ್ದರೆ, ಪಶ್ಚಿಮ ಬಂಗಾಳದಂತೆ ಸೆಂಟ್ರಲ್ ಫೋರ್ಸ್ ತಂದು ಎಸ್‌ಐಆರ್ ನಡೆಸಲು ಒತ್ತಾಯಿಸುತ್ತೇವೆ. ಸರ್ಕಾರ ಬರುತ್ತೆ ಹೋಗುತ್ತೆ, ಸಿಎಂ ಬರ್ತಾರೆ ಹೋಗ್ತಾರೆ. ನಿಮ್ಮ ಸಿಎಂ ಗೂಟ ಹೊಡೆದುಕೊಂಡು ಇರ್ತಾರಾ? ಅಧಿಕಾರಿಗಳು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಿ”* ಎಂದು ನಿಖಿಲ್ ಕುಮಾರಸ್ವಾಮಿ ಅವರು ಖಡಕ್ ಎಚ್ಚರಿಕೆ ನೀಡಿದರು. ಇದನ್ನೂ ಓದಿ : ಬೆಂಗಳೂರಿನ ಕೆಲವು ಭಾಗದಲ್ಲಿ ಜು. 04, 05 ರಂದು ವಿದ್ಯುತ್ ವ್ಯತ್ಯಯ..!
