ಬೆಂಗಳೂರು : ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರ್ ಸಾಹುಕಾರ್ ಅಮಾನತು, ಕೆಪಿಎಸ್‌ಸಿಗೆ ಹೊಸ ಕಾನೂನು ತರಬೇಕಿರುವ ಪ್ರಸ್ತಾವನೆ, ಅಮೆರಿಕಾ–ಇರಾನ್ ಉದ್ವಿಗ್ನತೆ ಹಾಗೂ ರಾಮಮಂದಿರಕ್ಕೆ ಸಂಬಂಧಿಸಿದ ವಿವಾದಾತ್ಮಕ ಹೇಳಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅಧಿಕಾರಿಗಳು ಅಥವಾ ಸಂಸ್ಥೆಗಳ ವಿರುದ್ಧ ಅನುಮಾನ ವ್ಯಕ್ತವಾದರೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿ ತನಿಖೆಗೆ ಅವಕಾಶ ಮಾಡಿಕೊಡಬೇಕು. ಆರೋಪಗಳಿಂದ ಮುಕ್ತರಾದ ಬಳಿಕ ಅವರು ಮತ್ತೆ ತಮ್ಮ ಹುದ್ದೆಯಲ್ಲಿ ಮುಂದುವರಿಯಬಹುದು. ಕೆಪಿಎಸ್‌ಸಿ ಸದಸ್ಯರನ್ನೂ ವಜಾಗೊಳಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದ್ದಾಗ ಹುದ್ದೆಯಲ್ಲಿ ಮುಂದುವರಿಯುವುದನ್ನು ಸಮರ್ಥಿಸಲಾಗದು. ರಾಜ್ಯಪಾಲರು ಪ್ರಕ್ರಿಯೆಯಂತೆ ಅಮಾನತು ಆದೇಶ ನೀಡಿದ್ದಾರೆ.
ಯುವಕರ ಭವಿಷ್ಯಕ್ಕಾಗಿ ಕೆಪಿಎಸ್‌ಸಿಯನ್ನು ಮತ್ತಷ್ಟು ಬಲಪಡಿಸಬೇಕು. ಪರೀಕ್ಷಾ ವ್ಯವಸ್ಥೆಯಲ್ಲಿ ಯಾವುದೇ ಲೋಪಗಳನ್ನು ಸಹಿಸಲಾಗದು. ಉದ್ಯೋಗಾಕಾಂಕ್ಷಿಗಳು ಪರೀಕ್ಷೆಗಾಗಿ ಸಾಕಷ್ಟು ಹಣ, ಸಮಯ ಮತ್ತು ಶ್ರಮ ಹೂಡುತ್ತಾರೆ; ಅವರ ಭವಿಷ್ಯಕ್ಕೆ ಧಕ್ಕೆಯಾಗಬಾರದು. ಕೆಪಿಎಸ್‌ಸಿಗೆ ಹೊಸ ಕಾನೂನು, ಈ ವಿಚಾರವಾಗಿ ವಿಧಾನಸಭೆಯಲ್ಲಿ ಮೂರು ದಿನಗಳ ಚರ್ಚೆ ನಡೆದಿದೆ.
ಆಡಳಿತ ಹಾಗೂ ಪ್ರತಿಪಕ್ಷ ಎರಡೂ ಕಡೆಯಿಂದ ಸುಧಾರಣೆಗೆ ಒಲವು ವ್ಯಕ್ತವಾಗಿದೆ. ಅಗತ್ಯವಿದ್ದರೆ ಸಂವಿಧಾನ ತಿದ್ದುಪಡಿ ಕುರಿತು ಕೇಂದ್ರ ಸರ್ಕಾರಕ್ಕೆ ಜಂಟಿಯಾಗಿ ಮನವಿ ಮಾಡಬೇಕು.
ಕಾನೂನು ತಿದ್ದುಪಡಿ ಮಾಡುವಾಗ ಅದರ ಸಾಧಕ–ಬಾಧಕಗಳನ್ನು ಪರಿಶೀಲಿಸಬೇಕು. ಪರೀಕ್ಷಾ ಸಂಸ್ಥೆಗಳ ಬಗ್ಗೆ ಸಾರ್ವಜನಿಕರಲ್ಲಿ ಉಂಟಾಗಿರುವ ಅನುಮಾನ ನಿವಾರಣೆಯಾಗಬೇಕು. ಸಿಬಿಎಸ್‌ಇ, ನೀಟ್ ಹಾಗೂ ರೈಲ್ವೆ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಘಟನೆಗಳಿಂದ ವಿಶ್ವಾಸ ಕುಂದಿದೆ ಎಂದು ಹೇಳಿದರು. ಅಮೆರಿಕಾ–ಇರಾನ್ ಉದ್ವಿಗ್ನತೆ – ದೇಶದ ವಿದೇಶಾಂಗ ನೀತಿಯ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದರು. ಇಂಧನ ಬೆಲೆ ಏರಿಕೆ ಮತ್ತು ಇಳಿಕೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ಕ್ರಮಗಳನ್ನು ಪ್ರಶ್ನಿಸಿದರು. ವಿದೇಶಾಂಗ ನೀತಿಯಿಂದ ದೇಶದ ಜನರಿಗೆ ಸ್ಪಷ್ಟ ಲಾಭವಾಗಿಲ್ಲ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ಮೇಲೆ ಯಾವುದೇ ನಿರೀಕ್ಷೆ ಇಲ್ಲ ಎಂದು ಹೇಳಿದರು.
ಆರ್‌ಎಸ್‌ಎಸ್, ವಿಎಚ್‌ಪಿ ಹಾಗೂ ರಾಮಮಂದಿರ ವಿವಾದ, ರಾಮಮಂದಿರಕ್ಕೆ ಸಂಬಂಧಿಸಿದ ಹೇಳಿಕೆಗಳ ಬಗ್ಗೆ ವಿಷಾದ ವ್ಯಕ್ತಪಡಿಸುವುದಷ್ಟೇ ಸಾಲದು ಎಂದರು. ಸಾರ್ವಜನಿಕರ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ವಿಎಚ್‌ಪಿ ಮತ್ತು ಆರ್‌ಎಸ್‌ಎಸ್ ನಡುವಿನ ಸಂಬಂಧವನ್ನು ಉಲ್ಲೇಖಿಸಿ, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು. ಜನಸಂಖ್ಯೆ ನಿಯಂತ್ರಣ ಹಾಗೂ ಇತರೆ ವಿಚಾರಗಳಲ್ಲಿ ಆರ್‌ಎಸ್‌ಎಸ್ ನಿಲುವುಗಳಲ್ಲಿ ಗೊಂದಲವಿದೆ ಎಂದು ಟೀಕಿಸಿದರು. ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ಸ್ಪಷ್ಟನೆ ಹಾಗೂ ಕ್ಷಮೆಯಾಚನೆ ಅಗತ್ಯ ಎಂದು ಹೇಳಿದರು. ಇದನ್ನೂ ಓದಿ : ಪ್ರೀತಿಸಿ ಮದುವೆಯಾಗಿದ್ದವಳನ್ನ ರಹಸ್ಯವಾಗಿಟ್ಟಿದ್ದ ಪತಿ; ಮನನೊಂದು ನವವಿವಾಹಿತೆ ಆತ್ಮಹತ್ಯೆ…!
