ರಾಮನಗರ : ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಗದ್ದಲ – ಗಲಾಟೆ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಸರ್ಕಾರದ ನಿರ್ಧಾರಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದು, ಜಮೀನು ಒತ್ತುವರಿ ವಿರುದ್ಧ ತಿರುಗಿಬಿದ್ದಿದ್ದಾರೆ. ವಿರೋಧದ ನಡುವೆಯೂ ಬಿಡದಿ ತಾಲೂಕಿನ ಮಂಡಲಹಳ್ಳಿ ಗ್ರಾಮದಲ್ಲಿ ಜೆಎಂಸಿ ಸರ್ವೆಗೆ ಮುಂದಾದ ಜಿಬಿಡಿಎ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.
ಯಾವುದೇ ಕಾರಣಕ್ಕೂ ಜೆಎಂಸಿ ಸರ್ವೇ ನಡೆಸದಂತೆ ಮಂಡಲಹಳ್ಳಿ ಗ್ರಾಮದ ರೈತರು ಒತ್ತಾಯಿಸಿದ್ದಾರೆ. ಬಲವಂತವಾಗಿ ಸರ್ವೇ ಕಾರ್ಯ ನಡೆಸಿದ್ರೆ ಅಧಿಕಾರಿಗಳಿಗೆ ಪೊರಕೆ ಏಟು ಕೊಡುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದರ ಹೊರತಾಗಿಯೂ ಸರ್ವೆಗೆ ಮುಂದಾದ ಅಧಿಕಾರಿಗಳಿಗೆ ರೈತ ಮಹಿಳೆಯರು ಪೊರಕೆ ಏಟು ಕೊಟ್ಟಿದ್ದಾರೆ.
ಜೆಎಂಸಿ ಸರ್ವೇ ಮಾಡಲು ಅಧಿಕಾರಿಗಳು ಗ್ರಾಮಕ್ಕೆ ಬಂದಿದ್ದರು. ಆದರೆ ರೈತರು ಯಾವುದೇ ಕಾರಣಕ್ಕೂ ಸರ್ವೇ ಮಾಡಲು ಅನುಮತಿ ನೀಡಲಿಲ್ಲ. ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ರೈತರು ಕೇಳಲಿಲ್ಲ. ರೈತರು ಸರ್ವೆಗೆ ಬಂದ ಅಧಿಕಾರಿಗಳ ಕಾರನ್ನು ಸುತ್ತುವರಿದು, ಪೊರಕೆಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮಹಿಳೆಯರೂ ಈ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಸ್ಥಳದಲ್ಲಿ ಪೊಲೀಸರು ಇದ್ದರೂ ರೈತರ ಆಕ್ರೋಶ ತಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ. ಪೊಲೀಸರನ್ನು ಲೆಕ್ಕಿಸದೇ ರೈತರು ಅಧಿಕಾರಿಗಳ ಕಾರಿಗೆ ಮುತ್ತಿಗೆ ಹಾಕಿ ಪೊರಕೆಯಲ್ಲಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬೆನ್ನಲ್ಲೇ ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಶ್ರೀನಿವಾಸ ಗೌಡ ಅವರು ರೈತರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಎಎಸ್ಪಿ ರಾಮಚಂದ್ರಯ್ಯ, ಡಿವೈಎಸ್ಪಿ ಗಿರೀಶ್, ಶ್ರೀನಿವಾಸ್ ರಿಂದ ಮಾಹಿತಿ ಪಡೆದು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಬೇಡಿ, ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ರೆ ನಾವು ಸುಮ್ಮನೆ ನೋಡ್ತಾ ಕೂರಲ್ಲ. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬೇಡಿ ಎಂದು ರೈತರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ : ಆರಾಮವಾಗಿ ನಿದ್ರಿಸಲು ರಾತ್ರಿ ಸಮಯದಲ್ಲಿ ಈ ಅಭ್ಯಾಸಗಳನ್ನು ಪಾಲಿಸಿ..!
