ಹಾಸನ : ಜನರ ಅಚ್ಚುಮೆಚ್ಚಿನ ಕಾಡಾನೆ ಭೀಮನ ಮೇಲೆ ಅಸ್ಸಾಂ ಮೂಲದ ಕಾರ್ಮಿಕನೊಬ್ಬ ಕಲ್ಲು ತೂರಾಟ ನಡೆಸಿದ ಘಟನೆ ಸಕಲೇಶಪುರದ ಒಸ್ಸೂರು ಎಸ್ಟೇಟ್‌ನಲ್ಲಿ ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ಭೀಮ ಘೀಳಿಟ್ಟು ಕಾರ್ಮಿಕನತ್ತ ನುಗ್ಗಲು ಯತ್ನಿಸಿದೆ.
ಅಸ್ಸಾಂನಿಂದ ಬಂದ ಕಾರ್ಮಿಕ ನೆಲೆಸಿದ್ದ ಲೈನ್ ಮನೆಗಳ ಬಳಿ ಇಂದು (ಜು.14) ಬೆಳಿಗ್ಗೆ ಕಾಡಾನೆ ಭೀಮ ಸಾಗುತ್ತಿತ್ತು. ಈ ವೇಳೆ ಕಾಡಾನೆಗೆ ಕಲ್ಲುಗಳಿಂದ ಹೊಡೆದು ಹುಚ್ಚಾಟ ಪ್ರದರ್ಶಿಸಿದ್ದಾನೆ. ಪದೇ ಪದೇ ಕಲ್ಲು ತೂರಿ ಕೀಟಲೆ ಮಾಡಿದ್ದಕ್ಕೆ ಘೀಳಿಡುತ್ತಾ ತಿರುಗಿ ತಿರುಗಿ ನೋಡುತ್ತ ಭೀಮ ಓಡಿ ಹೋಗಿದೆ.
ಅಸ್ಸಾಂ ಕಾರ್ಮಿಕನ ನಡೆಗೆ ಸ್ಥಳೀಯರು ಹಾಗೂ ಪ್ರಾಣಿ ಪ್ರಿಯರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರಿಗೂ ತೊಂದರೆ ಕೊಡದ ಸೌಮ್ಯ ಸ್ವಭಾವದ ಕಾಡಾನೆ ಭೀಮನಿಗೆ ಕಲ್ಲಿನಿಂದ ಹೊಡೆದು ಹಿಂಸಿಸಿರುವ ದುರುಳನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಹಾಗೂ ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ.
ಕಾಡಾನೆ ಭೀಮನಿಗೆ ಪುಂಡ ಕಲ್ಲಿನಿಂದ ಹೊಡೆಯುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಹಾಸನ ಜಿಲ್ಲೆಯ ಮಲೆನಾಡು ಭಾಗದ ಜನರ ಪ್ರೀತಿಗೆ ಪಾತ್ರವಾಗಿರುವ ಕಾಡಾನೆ ಭೀಮ ಗ್ರಾಮದೊಳಗೆ, ವಾಹನ ದಟ್ಟನೆ ಇರುವ ರಸ್ತೆಗಳಲ್ಲಿ ಸಲಿಸಾಗಿ ಓಡಾಡುತ್ತದೆ ಎಂದು ಹೇಳಲಾಗಿದೆ. ಇದನ್ನೂ ಓದಿ : ಮಾವಿನಹಣ್ಣು ಕೆಲವು ಆರೋಗ್ಯ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ..!
