July 22, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಬಿಡದಿ ಟೌನ್ ಶಿಪ್: ಬಲವಂತವಾಗಿ ಒಬ್ಬೇ ಒಬ್ಬರ ಜಮೀನನ್ನೂ ಪಡೆದುಕೊಳ್ಳುವುದಿಲ್ಲ; ಸಿಎಂ ಡಿ.ಕೆ.ಶಿವಕುಮಾರ್ ಖಚಿತ ನುಡಿ

ಬೆಂಗಳೂರು : ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ, ರೈತ ತಾಯಂದಿರ ಜಮೀನನ್ನೂ ಪಡೆದುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಖಚಿತವಾಗಿ ನುಡಿದರು. ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳ ಸಮೇತ ಸತ್ಯ ಸಂಗತಿಗಳನ್ನು ವಿವರಿಸಿದರು. ಜಮೀನು ಕೊಡಲು ಇಷ್ಟವಿಲ್ಲದವರು ಕೃಷಿ ಮುಂದುವರೆಸಬಹುದು. ಇಷ್ಟವಿದ್ದವರು ಸರ್ಕಾರಕ್ಕೆ ಜಮೀನು ಕೊಡಬಹುದು. ಆದರೆ, ಬಲವಂತವಾಗಿ ಒಂದು ಗುಂಟೆ ಜಮೀನನ್ನೂ ಪಡೆದುಕೊಳ್ಳುವುದಿಲ್ಲ ಎಂದರು.

ನಿನ್ನೆ ಬಿಡದಿಯಲ್ಲಿ ನಡೆದ ಘಟನೆ ಮನಸ್ಸಿಗೆ ನೋವಾಗಿದೆ. ರಾಜಕೀಯ ಪ್ರೇರಿತ ಕುಮ್ಮಕ್ಕಿನಿಂದ ಅಧಿಕಾರಿಗಳಿಗೆ ತೊಂದರೆ ನೀಡಿದ್ದಾರೆ. ರೈತರನ್ನು ತಪ್ಪು ದಾರಿಗೆ ಎಳೆಯುವ ಸಂಚು ನಡೆಯುತ್ತಿದೆ. ಎಲ್ಲರ ಮನಸ್ಸಿಗೆ ನೋವುಂಟು ಮಾಡುವುದು ನನಗೆ ಇಷ್ಟವಿಲ್ಲ. ಈ ಯೋಜನೆ ನನ್ನ ಕನಸಿನ ಪ್ರಾಜೆಕ್ಟ್ ಅಲ್ಲ. ಇದು ನನ್ನ ಕನಸಿನ ಯೋಜನೆ ಎಂದು ಯಾವತ್ತೂ ಹೇಳಿಲ್ಲ. ನಾನು ಅದಕ್ಕೆ ಶಂಕುಸ್ಥಾಪನೆ ಸಹ ನೆರವೇರಿಸಿಲ್ಲ. ಈ ಯೋಜನೆಯ ಪಿತಾಮಹ ಆಗಲು ಸಹ ನನಗೆ ಇಷ್ಟವಿಲ್ಲ. ಹಿರಿಯರು ನೀಡಿದ ಮಾರ್ಗದರ್ಶನದ ಪ್ರಕಾರ ಮುನ್ನಡೆಯುವ ಕೆಲಸ ಮಾತ್ರ ಮಾಡುತ್ತಿದ್ದೇನೆ. ಹಿಂದಿನ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಿ ಎಂದು ಹೇಳಿದ್ದೇನೆ. ನಾನು ಹುಟ್ಟಾ ರೈತನ ಮಗ. ರೈತನ ಶ್ರಮದ ಬಗ್ಗೆ ನನಗೆ ವೈಯಕ್ತಿಕ ಅನುಭವಿದೆ.

ನಾನು ಸಿಎಂ ಅಗಿರುವುದು ಕೆಲವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಅವರಿಗೆ ನಿದ್ರೆ ಬರುತ್ತಿಲ್ಲ. ನನ್ನನ್ನು ಜೈಲಿಗೆ ಕಳುಹಿಸಲು ಎಷ್ಟು ವರ್ಷದಿಂದ ಸಂಚು ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಡಿಕೆಶಿ ಜೈಲಿಗೆ ಹೋಗುವ ದಿನ ಬಂದೇ ಬರುತ್ತದೆ ಎಂದು ಕುಮಾರಣ್ಣ ಅವರು ಇಂದೂ ಹೇಳಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ನನಗೆ ಜೈಲು ಹೊಸದೇನಲ್ಲ. ಬೆಂಗಳೂರಿನ ಸುತ್ತಮುತ್ತಲು ಹಲವಾರು ಸಾವಿರ ಎಕ್ರೆ ಜಮೀನು ಹಲವು ಯೋಜನೆಗಳಿಗೆ ಸ್ವಾಧೀನ ಆಗಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಸಾವಿರಾರು ಎಕ್ರೆ ಸ್ವಾಧೀನ ಮಾಡಲಾಗಿದೆ. ಇಂದು ಸುತ್ತಮುತ್ತಲಿನ ಜಮೀನಿನ ಬೆಲೆ ಏನೆಂದು ಎಲ್ಲರಿಗೂ ಗೊತ್ತು ಎಂದರು.

23-09-2006 ರಂದು ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಐದು ಉಪನಗರಗಳ ಸಮಗ್ರ ಅಭಿವೃದ್ಧಿಗೆ ಯೋಜನೆಗೆ ತೀರ್ಮಾನಿಸಿದ್ದರು. ಅಲ್ಲಿಂದ ಇದು ಆರಂಭವಾಗಿದೆ. ಇದನ್ನು ಬಳಿಕ ಬಿಎಂಆರ್ಡಿ ಯಿಂದ ಪಿಪಿಪಿ ಮಾದರಿಯಲ್ಲಿ ಸಮಗ್ರ ಉಪ ನಗರ ಅಭಿವೃದ್ಧಿ ಪಡಿಸಲು ಅಧಿಕೃತ ಪಾಲುದಾರರನ್ನು ಗುರುತಿಸಲು ಜಾಗತಿಕ ಟೆಂಡರ್ ಕರೆಯಲು ತೀರ್ಮಾನ ಕೈಗೊಂಡಿದ್ದರು.

ಅಶೋಕ್ ಅವರು ಸಹ ಅಂದು ಸಚಿವ ಸಂಪುಟದಲ್ಲಿದ್ದರು. 2007ರಲ್ಲಿ ಮತ್ತೆ ಹೆಚ್ಚುವರಿಯಾಗಿ ಮಾರಂಡಹಳ್ಳಿ, ಒಡೆಯರಳ್ಳಿ ಸೇರಿದಂತೆ ಹೊಸದಾಗಿ ಗ್ರಾಮಗಳನ್ನು ಟೌನ್ಶಿಪ್ ನಲ್ಲಿ ಸೇರಿಸಲು ನಿರ್ಧರಿಸಿದ್ದರು. ದಿನಾಂಕ 20-11-2006 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಎಲ್ಲಾ ಖಾಸಗಿ ಜಮೀನಿನಲ್ಲಿ , ಯಾವುದೇ ಪ್ರಾಧಿಕಾರವಾಗಲಿ, ವ್ಯಕ್ತಿಯಾಗಲಿ, ಬಿಡಿಎ ವತಿಯಿಂದ ಪೂರ್ವಾನುಮತಿ ಪಡೆಯದೆ ಅಭಿವೃದ್ಧಿಗೆ ಅನುಮತಿ ನೀಡತಕ್ಕದಲ್ಲ ಎಂದು ಗೆಜೆಟ್ ನೋಟಿಫಿಕೇಶನ್ ಹೊರಡಿಸಿ ರೆಡ್ ಝೋನ್ ಎಂದು ಗುರುತಿಸಿದ್ದರು ಎಂದು ದಾಖಲೆಗಳನ್ನು ತೋರಿಸಿದರು.

ಇಷ್ಟು ಮಾತ್ರವಲ್ಲದೆ, ಗ್ರಾಮಠಾಣಾದಲ್ಲಿರುವ ಆಸ್ತಿ, ಮನೆಗಳು ಸೇರಿದಂತೆ ಒಕ್ಕಲೆಬ್ಬಿಸಲು, ಪರಿಹಾರ ಮೊತ್ತ ಘೋಷಿಸಿ ಆದೇಶ ಹೊರಡಿಸಿದ್ದರು. ಖಾಸಗಿ ಡೆವಲಪರ್ ಡಿಎಲ್ಎಫ್ ಗೆ ಪತ್ರ ಬರೆದು ರೂ. 400 ಕೋಟಿ ಸೆಕ್ಯುರಿಟಿ ಡೆಪಾಸಿಟಿ ದುಡ್ಡು ಕಟ್ಟಿಸಿಕೊಂಡು ರಿಯಲ್ ಎಸ್ಟೇಟ್ಗೆ ಅವಕಾಶ ಕೊಟ್ಟಿದ್ದರು. ಈಗ ಹೇಳಿ ಕುಮಾರಣ್ಣಾ, ರಿಯಲ್ ಎಸ್ಟೇಟ್ ದಂಧೆ ಯಾರು ಮಾಡಿದ್ದು, ನಾನು ಮಾಡಿದ್ದಾ? ಎಂದು ಸಿಎಂ ಪ್ರಶ್ನಿಸಿದರು.

2010 ರಲ್ಲಿ ಯಡಿಯೂರಪ್ಪ ಅವರು ಸಮಗ್ರವಾದ ಉಪನಗರ ಯೋಜನೆ ಮುಂದುವರೆಸಲು ಎರಡನೇ ಬಾರಿ ಜಾಗತಿಕ ಟೆಂಡರ್ ಕರೆದು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಕ್ಕೆ ಮುಂದಾದರು. ಆಗ ಸಹ ಅಶೋಕ್ ಅವರು ಸಚಿವರಾಗಿದ್ದರು. ರೈತರ ಆಸ್ತಿಯನ್ನು ಕಬಳಿಸಲು ನೀವು ನಡೆಸಿರುವ ಸಂಚನ್ನು ಎಷ್ಟು ದಿನ ಮುಚ್ಚಿಕೊಳ್ಳಲು ನಿಮಗೆ ಸಾಧ್ಯವಿದೆ? ರೈತ ಮಹಿಳೆಯರ ಬದುಕನ್ನು ಕಸಿದುಕೊಳ್ಳುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಿಲ್ಲ. ಬಲವಂತವಾಗಿ ನಿಮ್ಮ ಜಮೀನು ತೆಗೆದುಕೊಳ್ಳುವ ಅವಶ್ಯಕತೆ ನಮ್ಮ ಸರ್ಕಾರಕ್ಕಿಲ್ಲ. ಇದರಲ್ಲಿ ಯಾರಿಗೂ ಬಲವಂತವಿಲ್ಲ. ಇಷ್ಟವಿದ್ದರೆ ರೈತರು ಪರಿಹಾರ ಪಡೆದು ತಮ್ಮ ಜಮೀನು ನೀಡಬಹುದಾಗಿದೆ.

ಕುಮಾರಸ್ವಾಮಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರಾರಂಭಿಸಿದ್ದ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಅಷ್ಟೆ. ಬಿಡದಿ ಟೌನ್ ಶಿಪ್‌ ಅನುಷ್ಠಾನ ಬಗ್ಗೆ ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸುವ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಈ ಸಮಿತಿಯ ವರದಿಯ ಆಧಾರದಲ್ಲಿ ಯೋಜನೆಯ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಸಚಿವರಾದ ಎಂ.ಬಿ.ಪಾಟೀಲ್, ಶಾಸಕ ಬಾಲಕೃಷ್ಣ, ರಾಜಕೀಯ ಸಲಹೆಗಾರ ಜಿ.ಸಿ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ : 17ರಂದು ಫ್ರೀಡಂ ಪಾರ್ಕಿನಲ್ಲಿ ಬಿಜೆಪಿ ಜನಪ್ರತಿನಿಧಿಗಳ ಧರಣಿ, ರಿಯಲ್ ಎಸ್ಟೇಟ್ ಆದ್ಯತೆಯ ಸಿಎಂ – ವಿಜಯೇಂದ್ರ

Related posts

ಟೀಂ ಇಂಡಿಯಾದ ಅಂಡರ್-19 ವಿಶ್ವಕಪ್ ವಿಜೇತ ಸ್ಟಾರ್‌ ಅರೆಸ್ಟ್‌…!

Kalpana Editor

ಜೆಡಿಎಸ್‌ನಿಂದ ಡಮ್ಮಿ ಅಭ್ಯರ್ಥಿ ನಿಲ್ಲಿಸಲು ಫಿಕ್ಸಿಂಗ್ ಮಾಡ್ತಿದ್ದವರಿಗೆ ಭ್ರಷ್ಟಾಚಾರದ ಬಗ್ಗೆ ಮಾತಾಡೋ ನೈತಿಕತೆ ಎಲ್ಲಿದೆ; ಚೆಲುವರಾಯಸ್ವಾಮಿ ವಾಗ್ದಾಳಿ..!

Kalpana Editor

ರಾಮ ಮಂದಿರ ದೇಣಿಗೆ ಅಕ್ರಮ; ಸಿಎಂ ಯೋಗಿ ಯಾರನ್ನೂ ಬಿಡಲ್ಲ – ಸಿ.ಟಿ.ರವಿ

Kalpana Editor