July 23, 2026
kranthikidi.com
ತಾಜಾಸುದ್ದಿದೇಶ

ಹಠಾತ್ ಪ್ರವಾಹಕ್ಕೆ ಜಮ್ಮು-ಕಾಶ್ಮೀರ ತತ್ತರ; 11 ಮಂದಿ ಬಲಿ, 7 ಮಂದಿ ನಾಪತ್ತೆ..!

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಭೂಕುಸಿತ ಮತ್ತು ಹಠಾತ್ ಪ್ರವಾಹ ಉಂಟಾಗಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಗಡಿ ಜಿಲ್ಲೆಗಳಾದ ಪೂಂಚ್ ಮತ್ತು ರಾಜೌರಿಯಲ್ಲಿ ನಡೆದ ದುರಂತದಲ್ಲಿ ಇದುವರೆಗೆ 11 ಮಂದಿ ಮೃತಪಟ್ಟಿದ್ದು, 7 ಮಂದಿ ನಾಪತ್ತೆಯಾಗಿದ್ದಾರೆ. ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ರಕ್ಷಣಾ ಸಿಬ್ಬಂದಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

ಅತಿ ಹೆಚ್ಚು ಹಾನಿ ಪೂಂಚ್ ಜಿಲ್ಲೆಯ ಸುರಂಕೋಟ್ ಪ್ರದೇಶದಲ್ಲಿ ಸಂಭವಿಸಿದೆ. ಲೋವರ್ ಮುರ್ರಾ ಗ್ರಾಮದಲ್ಲಿ ಭೂಕುಸಿತದಿಂದ ಮನೆ ಕುಸಿದು ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಎರಡು ವರ್ಷದ ಮಗು ಕೂಡ ಸೇರಿದೆ. ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಸಾಂಗ್ಲಾ ಗ್ರಾಮದಲ್ಲಿ ಹಠಾತ್ ಪ್ರವಾಹಕ್ಕೆ ಮನೆ ಕೊಚ್ಚಿ ಹೋಗಿದ್ದು, ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿದ್ದಾರೆ. ನೂನಬಂದಿ ಗ್ರಾಮದಲ್ಲಿ ಮನೆ ಕುಸಿದು 28 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಅವರ ಪತಿ ಮತ್ತು ಮೂವರು ಮಕ್ಕಳನ್ನು ಗಾಯಗೊಂಡ ಸ್ಥಿತಿಯಲ್ಲಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜೌರಿ ಜಿಲ್ಲೆಯಲ್ಲೂ ಪರಿಸ್ಥಿತಿ ಗಂಭೀರವಾಗಿದೆ. ನದಿಗಳು ಉಕ್ಕಿ ಹರಿದ ಪರಿಣಾಮ ಹಲವು ಮನೆಗಳು ಮತ್ತು ರಸ್ತೆಗಳು ಜಲಾವೃತವಾಗಿವೆ. ಪ್ರವಾಹದ ನೀರಿಗೆ ವಾಹನಗಳು ಕೊಚ್ಚಿಹೋಗಿದ್ದು, ಮಹಿಳೆಯೊಬ್ಬರ ಮೃತದೇಹವೂ ಪತ್ತೆಯಾಗಿದೆ. ಹಲವಾರು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ದೆಹಲಿ ಪ್ರವಾಸವನ್ನು ಮೊಟಕುಗೊಳಿಸಿ ಜಮ್ಮುವಿಗೆ ಮರಳಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಸ್ವತಃ ಪರಿಶೀಲಿಸುತ್ತಿದ್ದು, ಸಂತ್ರಸ್ತರಿಗೆ ಸರ್ಕಾರದಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಪರಿಸ್ಥಿತಿ ಕುರಿತು ಮಾಹಿತಿ ಪಡೆದು, ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಜುಲೈ 23ರವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಮಧ್ಯಮದಿಂದ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಇದರಿಂದ ಅಧಿಕಾರಿಗಳು ಮತ್ತಷ್ಟು ಎಚ್ಚರಿಕೆ ವಹಿಸಿದ್ದು, ಜನರು ಅಗತ್ಯವಿಲ್ಲದಿದ್ದರೆ ಅಪಾಯದ ಪ್ರದೇಶಗಳಿಗೆ ತೆರಳದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ : ಚೆನ್ನಮ್ಮ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಲು ಎರಡು ಟ್ರ್ಯಾಕ್ಟರ್ ಹೂ ತಂದ ಶಾಸಕ ಸ್ವರೂಪ್‌ ಪ್ರಕಾಶ್

Related posts

ತಿರುಪತಿ ತಿಮ್ಮಪ್ಪನ ಆರತಿಯಲ್ಲಿ ಇನ್ಮುಂದೆ ಕರ್ನಾಟಕ ವಿಐಪಿಗಳಿಗೂ ಚಾನ್ಸ್ – ಸಿಎಂ ಮಹತ್ವದ ಘೋಷಣೆ..!

Kalpana Editor

ಕೆಎಸ್ ಈಶ್ವರಪ್ಪಗೆ ಸಂಕಷ್ಟ ತಂದಿಟ್ಟ, ಆದಾಯ ಮೀರಿ ಆಸ್ತಿ ಗಳಿಕೆ ಕೇಸ್..!

Kalpana Editor

15 ದಿನದಲ್ಲಿ ಕೇಂದ್ರಕ್ಕೆ ಸಲ್ಲಿಸಲು ಬರ ಪರಿಸ್ಥಿತಿ ವರದಿ ಸಿದ್ಧಪಡಿಸಿ: ಅಧಿಕಾರಿಗಳಿಗೆ ಸಿಎಂ ಡಿಕೆಶಿ ನಿರ್ದೇಶನ

Kalpana Editor