August 1, 2026
kranthikidi.com
ಕ್ರೀಡೆತಾಜಾಸುದ್ದಿ

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಪ್ಯಾರಾ ಅಥ್ಲಿಟ್‌ ಶರ್ಮಿಳಾ

ಗ್ಲಾಸ್ಗೋ : 2026ರ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಪಟ್ಟಿ ಏರುತ್ತಲೇ ಇದೆ. ಈ ಮಧ್ಯೆ ಪ್ಯಾರಾ ಅಥ್ಲಿಟ್‌ ಶರ್ಮಿಳಾ ಧಂಕರ್‌ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಗ್ಲ್ಯಾಸ್ಗೋದಲ್ಲಿ‌ ಮಂಗಳವಾರ ನಡೆದ ಮಹಿಳೆಯರ ಶಾಟ್‌ಪುಟ್ F57 ಸ್ಪರ್ಧೆಯಲ್ಲಿ 40 ವರ್ಷದ ಶರ್ಮಿಳಾ ಚಿನ್ನದ ಪದಕ ಗೆದ್ದು, ಇತಿಹಾಸ ಬರೆದಿದ್ದಾರೆ. ಈ ಮೂಲಕ ಭಾರತದ ಪರ ಚಿನ್ನದ ಪದಕ ಗೆದ್ದ ಮೊದಲ ಪ್ಯಾರಾ ಅಥ್ಲಿಟ್‌ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಲ್ಲದೇ, ಈ ಗೆಲುವಿನೊಂದಿಗೆ 2 ಚಿನ್ನ, 5 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನ ಒಳಗೊಂಡಂತೆ ದೇಶದ ಒಟ್ಟು ಪದಕಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಮಹಿಳೆಯರ ಶಾಟ್‌ಪುಟ್ F57 ಸ್ಪರ್ಧೆಯಲ್ಲಿ ಶರ್ಮಿಳಾ 9.81 ಮೀಟರ್‌ ದೂರ ಗುಂಡು ಎಸೆದು, ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ಘಾನಾದ ಜಿನಾಬು ಇಸ್ಸಾ 8.65 ಮೀಟರ್ ದೂರ ಎಸೆದು 2ನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು. ಇನ್ನೂ ನೈಜೀರಿಯಾದ ಯುಚಾರಿಯಾ ಇಯಾಜಿ, ಭಾರತದ ಶಿಲ್ಪಾ ಇಬ್ಬರೂ ಸಮವಾಗಿ 8.19 ಮೀಟರ್ ದೂರ ಗುಂಡು ಎಸೆದು ಕಂಚಿನ ಪದಕ ಹಂಚಿಕೊಂಡರು.

ಶರ್ಮಿಳಾ ಅವರು ಚಿನ್ನದ ಪದಕ ಗೆದ್ದ ಪರಿಶ್ರಮದ ಹಿಂದೆ ಕಣ್ಣೀರಿನ ಕಥೆಯೂ ಇದೆ. ಹರಿಯಾಣದ ಚಿತ್ರೌಲಿ ಗ್ರಾಮದಲ್ಲಿ ಜನಿಸಿದ ಧಂಕರ್‌ ಅವರು 2ನೇ ವಯಸ್ಸಿನಲ್ಲಿದ್ದಾಗಲೇ ಪೋಲಿಯೊಗೆ ತುತ್ತಾದರು, ಇದು ಅವರ ಒಂದು ಕಾಲನ್ನು ಶಾಶ್ವತವಾಗಿ ಬಾಧಿಸಿತು. ಆದಾಗ್ಯೂ ದೈಹಿಕ ಸವಾಲುಗಳನ್ನು ಮೆಟ್ಟಿ ನಿಂತ ಧಂಕರ್‌ ಜೀವನದ ಹೋರಾಟ ಮುಂದುವರಿಸಿದ್ರು.

18 ನೇ ವಯಸ್ಸಿನಲ್ಲಿ ವಿವಾಹವಾದ ಧಂಕರ್ ತನ್ನ ಮೊದಲ ಮದುವೆಯಲ್ಲಿ ವರ್ಷಗಳ ಕಾಲ ದೈಹಿಕ ಮತ್ತು ಭಾವನಾತ್ಮಕ ಕಿರುಕುಳ ಅನುಭವಿಸಿದ್ರು. ಮೊದಲೇ ವರದಕ್ಷಿಣೆ ಕಿರುಕುಳ ಅನುಭವಿಸುತ್ತಿದ್ದ ಧಂಕರ್‌, ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದು, ಮತ್ತಷ್ಟು ಹಿಂಸೆಗೆ ಒಳಗಾಗುವಂತೆ ಮಾಡಿತು. 26 ನೇ ವಯಸ್ಸಿನಲ್ಲಿ, ಅವರು ತಮ್ಮ ಹೆಣ್ಣುಮಕ್ಕಳೊಂದಿಗೆ ತಮ್ಮ ಗಂಡನ ಮನೆ ತೊರೆದು ತವರಿಗೆ ಮರಳಿದರು. ಜೀವನವೇ ಸಾಕು ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯನ್ನೂ ಮಾಡಿದ್ದರು. ಹೀಗಿರುವಾಗಲೇ ಅವರ ಜೀವನಕ್ಕೆ ಮತ್ತೊಂದು ತಿರುವು ಸಿಕ್ಕಿತು.

ಧಂಕರ್ 28 ನೇ ವಯಸ್ಸಿನಲ್ಲಿ ಅಜಿತ್ ಸಿಂಗ್ ಎಂಬವರೊಂದಿಗೆ 2ನೇ ವಿವಾಹವಾದರು, ಅಲ್ಲಿಂದ ಅವರ ಜೀವನ ಪಯಣ ಹೊಸ ಆರಂಭ ಪಡೆದುಕೊಂಡಿತು. ಈ ಕ್ರೀಡೆಯ ಬಗ್ಗೆ ಪತ್ರಿಕೆಯಲ್ಲಿ ಓದಿದ ನಂತರ ಅಜಿತ್, ಶರ್ಮಿಳಾರನ್ನ ಪ್ಯಾರಾ ಅಥ್ಲೆಟಿಕ್ಸ್‌ಗೆ ಪರಿಚಯಿಸಿದರು. ಅವರ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು, ವೃತ್ತಿಪರವಾಗಿ ಅಥ್ಲೆಟಿಕ್ಸ್ ಮುಂದುವರಿಸಲು ಪ್ರೋತ್ಸಾಹಿಸಿದರು. 2023 ರಲ್ಲಿ ಅವರ ತರಬೇತಿ ಮತ್ತು ಸ್ಪರ್ಧೆಗಳಿಗೆ ಹಣಕಾಸು ಒದಗಿಸಲು ಅವರು ತಮ್ಮ ಮನೆಯನ್ನೇ ಮಾರಿದರು. ಹೀಗೆ ಅನೇಕ ಕಷ್ಟ, ಸಾವಲುಗಳನ್ನು ಮೆಟ್ಟಿ ನಿಂತ ಶರ್ಮಿಳಾ ಧಂಕರ್‌ ಇಂದು ಚಿನ್ನದ ಪದಕ ಗೆದ್ದು, ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಇದನ್ನೂ ಓದಿ : ಮೊಟ್ಟೆ ದರ ಏರಿಕೆ; ಇದು ಸರ್ಕಾರಿ ಶಾಲೆಯ ʻಒಂದು ಮೊಟ್ಟೆಯ ಕಥೆʼ..!

Related posts

ಫುಟ್‌ಪಾತ್‌ ಒತ್ತುವರಿ ಕಾರ್ಯಾಚರಣೆ, ನಿಯಮ ಎಲ್ಲರಿಗೂ ಒಂದೇ – ನಂದಿನಿ, ಹಾಪ್‌ಕಾಮ್ಸ್ ಸರದಿ..!

Kalpana Editor

ಮತ್ತೆ ಸುಪ್ರೀಂ ಮೆಟ್ಟಿಲೇರಿದ ನಟ ದರ್ಶನ್ – ಜಾಮೀನು ಅರ್ಜಿ ಸಲ್ಲಿಸದಂತೆ ನೀಡಿದ್ದ, ಆದೇಶ ಮಾರ್ಪಾಡಿಗೆ ಮನವಿ..!

Kalpana Editor

ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ; ಎಂಟು ಮಸೂದೆಗಳ ಮಂಡನೆ ಸಾಧ್ಯತೆ..!

Kalpana Editor