26.5 C
ಬೆಂಗಳೂರು
October 8, 2026
kranthikidi.com
ತಾಜಾಸುದ್ದಿರಾಜ್ಯ

ಯಾರು ಬರಲಿ, ಬಿಡಲಿ ಕಾವೇರಿಗಾಗಿ ಬಂದ್‌ ಮಾಡೇ ಮಾಡ್ತೀವಿ: ವಾಟಾಳ್ ನಾಗರಾಜ್

ಹುಬ್ಬಳ್ಳಿ : ಕಾವೇರಿ ವಿಚಾರವಾಗಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್‌ಗೆ ದಿನಗಣನೆ ಶುರುವಾಗುತ್ತಿದ್ದಂತೆ ಗೊಂದಲವೂ ಹೆಚ್ಚಾಗಿದೆ. ಕಾವೇರಿ ನೀರಿನ ಸಮಸ್ಯೆ ಸದ್ಯಕ್ಕೆ ಬಗೆಹರಿದಿದೆ, ಬಂದ್ ಅಗತ್ಯವಿಲ್ಲ ಎಂದು ಕೆಲ ಸಂಘಟನೆಗಳು ಹಿಂದೆ ಸರಿದಿವೆ. ಮತ್ತೊಂದೆಡೆ, ಯಾರು ಬೆಂಬಲ ನೀಡಲಿ, ಬಿಡಲಿ ಬಂದ್ ಮಾಡೇ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಪಟ್ಟು ಹಿಡಿದಿದ್ದಾರೆ.

ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡಿನ ನಡೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ಈ ಹಿಂದೆ ತೀವ್ರ ಹೋರಾಟ ನಡೆಸಿದ್ದವು. ಇದರ ಮುಂದುವರಿದ ಭಾಗವಾಗಿ ಇದೇ 13ರಂದು ರಾಜ್ಯ ಬಂದ್‌ಗೆ ಕರೆ ನೀಡಲಾಗಿತ್ತು. ಆದರೆ, ಸದ್ಯ ಮಳೆಯಾಗಿರುವ ಹಿನ್ನೆಲೆ ಕಾವೇರಿ ನೀರಿನ ಸಮಸ್ಯೆ ಕೊಂಚ ತಗ್ಗಿದ್ದು, ಎರಡೂ ರಾಜ್ಯಗಳ ರೈತರಿಗೆ ನೆಮ್ಮದಿ ಮೂಡಿದೆ. ಈ ನಡುವೆ ಹುಬ್ಬಳ್ಳಿಯಲ್ಲೇ ಬಂದ್ ವಿರುದ್ಧ ಬಹಿರಂಗ ಅಪಸ್ವರ ಕೇಳಿಬಂದಿದೆ.

ಸಮಸ್ಯೆ ಕೊಂಚ ತಗ್ಗಿದರೂ ಬಂದ್ ನಿರ್ಧಾರದಿಂದ ಹಿಂದೆ ಸರಿಯದ ವಾಟಾಳ್ ನಾಗರಾಜ್, ಕಾವೇರಿ ಮಾತ್ರವಲ್ಲದೆ ಮೇಕೆದಾಟು ಮತ್ತು ಮಹದಾಯಿ ವಿಚಾರಗಳಿಗೂ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಬೆಂಗಳೂರು ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು, ಖಾಸಗಿ ಶಾಲೆಗಳು ಹಾಗೂ ವ್ಯಾಪಾರ ವಹಿವಾಟುದಾರರು ಬಂದ್‌ಗೆ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.

ಇದೇ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ ವಾಟಾಳ್ ನಾಗರಾಜ್, ಮಹದಾಯಿ ಹೋರಾಟಗಾರರು ಹಾಗೂ ರೈತಪರ ಸಂಘಟನೆಗಳ ಬೆಂಬಲ ಕೋರಿದರು. ಚೆನ್ನಮ್ಮ ವೃತ್ತದಲ್ಲಿ ಸಾಂಕೇತಿಕ ಹೋರಾಟ ನಡೆಸಿ, ಸಭೆ ನಡೆಸಿದ ಅವರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್‌, ಯಾರು ಬೆಂಬಲ ನೀಡಲಿ, ಬಿಡಲಿ ಬಂದ್ ಮಾಡೇ ಮಾಡುತ್ತೇವೆ. ವಿಭಿನ್ನ ರೀತಿಯಲ್ಲಿ ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತೇವೆ. ಬೆಳಗಾವಿಯಿಂದ ಚಾಮರಾಜನಗರದವರೆಗೂ ಬಂದ್‌ಗೆ ಬೆಂಬಲವಿದೆ ಎಂದು ಹೇಳಿದ್ದಾರೆ.

ಇದೇ ಸಭೆಯಲ್ಲಿ ಉತ್ತರ ಕರ್ನಾಟಕ ಆಟೋಚಾಲಕರ ಸಂಘದ ಸದಸ್ಯರು ಸಭೆಗೆ ನುಗ್ಗಿ ಬಂದ್ ವಿರೋಧಿಸಿ ಘೋಷಣೆ ಕೂಗಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕೆಲ ಆಟೋಚಾಲಕರನ್ನು ವಶಕ್ಕೆ ಪಡೆದರು. ರಾಜ್ಯದಲ್ಲಿ ಸದ್ಯ ನೀರಿನ ಸಮಸ್ಯೆ ಇಲ್ಲ. ಮಹದಾಯಿ ಮತ್ತು ಮೇಕೆದಾಟು ಹೋರಾಟಕ್ಕೆ ನೈತಿಕ ಬೆಂಬಲವಿದೆ. ಆದರೆ ಬಂದ್ ಹೆಸರಿನಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಜನಸಾಮಾನ್ಯರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದು ಆಟೋಚಾಲಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ : ಸರ್ಜರಿ ಮಾಡಿಸಿಕೊಳ್ಳುವಾಗ ಹಾಡು ಹಾಡಿದ ಗಾಯಕ ಸೋನು ನಿಗಮ್

Related posts

ಹೊಳೆನರಸೀಪುರದಲ್ಲಿ ಇಂದು ಚೆನ್ನಮ್ಮ ಅಂತ್ಯಕ್ರಿಯೆ – ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿ ವಿಧಿವಿಧಾನ ಪ್ರಕಾರ..!

Kalpana Editor

ಐಪಿಎಲ್​ ಆಟಗಾರರಿಗೆ ಎಚ್ಚರಿಕೆ: ಸ್ಮಾರ್ಟ್​ ಗ್ಲಾಸ್ ನಿಷೇಧ..!

Kalpana Editor

ಉಡುಪಿ, ಮಂಗಳೂರು ಸೇರಿ ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್…!

Kalpana Editor