July 22, 2026
kranthikidi.com
ತಾಜಾಸುದ್ದಿರಾಜ್ಯ

ಹೊಳೆನರಸೀಪುರದಲ್ಲಿ ಇಂದು ಚೆನ್ನಮ್ಮ ಅಂತ್ಯಕ್ರಿಯೆ – ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿ ವಿಧಿವಿಧಾನ ಪ್ರಕಾರ..!

ಹಾಸನ : ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ನಿಧನರಾಗಿದ್ದು, ಅವರ ಪಾರ್ಥಿವ ಶರೀರ ಹೊಳೆನರಸೀಪುರ ಪಟ್ಟಣದ ಹೆಚ್.ಡಿ.ರೇವಣ್ಣ ಅವರ ನಿವಾಸಕ್ಕೆ ಆಗಮಿಸಿದೆ. ಇಂದು ಮಧ್ಯಾಹ್ನ 2 ಗಂಟೆ ನಂತರ ಹರದನಹಳ್ಳಿ ಬಳಿಯ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನೆರವೇರಲಿದ್ದು, ಈಗಾಗಲೇ ಸಿದ್ಧತೆಗಳು ಮುಗಿದಿವೆ.

ಚೆನ್ನಮ್ಮ ದೊಡ್ಡಗೌಡರ ಕುಟುಂಬದ ಯಜಮಾನಿ. ಕರುಣೆಯ ಮೂರ್ತಿಯಾಗಿದ್ದ ಕ್ಷಮೆಯಾಧರಿತ್ರಿ. ಮನೆ ಬಾಗಿಲಿಗೆ ಬಂದವರಿಗೆ ಬರಿಗೈಯಲ್ಲಿ ಕಳುಹಿಸದ ಅನ್ನಪೂರ್ಣೇಶ್ವರಿ. ರಾಜಕೀಯ ಕುಟುಂಬದ ಸಿಮೀತ ಹೆಣ್ಣು ಮಗಳು ಆಗಿರಲಿಲ್ಲ. ಅವರು ದೊಡ್ಡಗೌಡ ಕುಟುಂಬಕ್ಕೆ ಬರುವ ಪ್ರತಿಯೊಬ್ಬರಿಗೂ ಅಮ್ಮ ಆಗಿದ್ದರು. ಯಾರೇ ಆಗಲಿ ದೇವೇಗೌಡರ ಭೇಟಿ ಬಳಿಕ ಅಮ್ಮನ ಭೇಟಿ ಮಾಡದೇ ತೆರಳುತ್ತಿರಲಿಲ್ಲ. ಊಟ ಮಾಡದೆ ಆ ತಾಯಿಯ ಮನೆಯಿಂದ ಯಾರು ಹೋಗುತ್ತಿರಲಿಲ್ಲ. ರಾಜಕೀಯ ಮನೆತನ ಹೆಣ್ಣು ಮಗಳಾಗಿದ್ದರೂ ಅವರಲ್ಲಿ ಹಳ್ಳಿಯ ಸೊಗಡಿನ ಪ್ರೀತಿ, ಬಾಂಧವ್ಯವಿತ್ತೇ ಹೊರತು ಅಹಂಗೆ ಜಾಗವೇ ಇರಲಿಲ್ಲ. ಸಾಕ್ಷಾತ್ ಅನ್ನಪೂರ್ಣೇಶ್ವರಿಯಾಗಿದ್ದ ಚೆನ್ನಮ್ಮ ಅವರ ಹುಟ್ಟೂರಿನಲ್ಲಿ ಇಂದು ಅಂತ್ಯಸಂಸ್ಕಾರ ನೆರವೇರಲಿದೆ.

ಶಿವೈಕ್ಯರಾದ ಚೆನ್ನಮ್ಮ ಅವರ ಅಂತ್ಯಕ್ರಿಯೆ ಹೊಳೆನರಸೀಪುರ ತಾಲೂಕಿನ, ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿರುವ ಜಮೀನಿನಲ್ಲಿ ನಡೆಯಲಿದೆ. ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಬೃಹತ್ ಜರ್ಮನ್ ಟೆಂಟ್ ನಿರ್ಮಿಸಲಾಗಿದ್ದು, ಮೂವತ್ತು ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ವಾಸ್ತು ತಜ್ಞ ಹರಿಪ್ರಸಾದ್ ವಾಸ್ತು ಪ್ರಕಾರ ಜಾಗ ಗುರುತು ಮಾಡಿದ್ದು, ಮಧ್ಯಾಹ್ನ ಎರಡು ಗಂಟೆ ನಂತರ ಬೆಂಗಳೂರಿನ ಜೆ.ಪಿ ನಗರದ ಕನಕಗಿರಿ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ಕಣ್ಣನ್ ಸ್ವಾಮಿ ನೇತೃತ್ವದಲ್ಲಿ ವಿಧಿ ವಿಧಾನಗಳು ನಡೆಯಲಿದೆ. ಅದರಂತೆ 4:30ರೊಳಗೆ ಅಂತ್ಯಕ್ರಿಯೆ ನೆರವೇರಲಿಸಲು ನಿರ್ಧರಿಸಲಾಗಿದೆ.

ಹರದನಹಳ್ಳಿ ಗ್ರಾಮದ ಸಮೀಪ ವಿರುವ ಕ್ಯಾತನಹಳ್ಳಿ ಗ್ರಾಮದ ಬೆಟ್ಟದ ರಂಗನಾಥಸ್ವಾಮಿ ತಪ್ಪಲು ಆಯ್ಕೆ ಮಾಡಿರುವುದಕ್ಕೆ ಅನೇಕ ಕಾರಣಗಳಿವೆ. ಚೆನ್ನಮ್ಮ ಅವರು ದೀರ್ಘಕಾಲ ಹೊಳೆನರಸೀಪುರ ಭಾಗದಲ್ಲೇ ಇದ್ದವರು. ಹಳೆಕೋಟೆ, ಮುತ್ತಿಗೆ ಹಿರೀಹಳ್ಳಿ, ಹರದನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮಗಳು ಹಾಗೂ ಗ್ರಾಮಸ್ಥರೊಂದಿಗೆ ಅವಿನಾಭಾವ ಸಂಬAಧ ಹೊಂದಿದ್ದರು. ಕುಟುಂಬದ ಸದಸ್ಯರೆಲ್ಲರೂ ಸೇರಿ ಈ ಜಾಗವನ್ನು ಆಯ್ಕೆ ಮಾಡಿದ್ದು, ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲೇ ಅಂತ್ಯಕ್ರಿಯೆ ನೆರವೇರಿಸಲು ತೀರ್ಮಾನ ಮಾಡಿದ್ದೇವೆ. ಈ ಜಾಗದಲ್ಲಿ ಸ್ಮಾರಕ ಮಾಡಲು ಚಿಂತಿಸಲಾಗಿದೆ ಎಂದು ಸಂಸದ ಹಾಗೂ ಚೆನ್ನಮ್ಮ ಅವರ ಅಳಿಯ ಸಿ.ಎನ್.ಮಂಜುನಾಥ್ ಹೇಳಿದ್ದಾರೆ.

ಹರದನಹಳ್ಳಿಯು ದೇವೇಗೌಡರ ತವರೂರು ಮತ್ತು ಚೆನ್ನಮ್ಮನವರು ಪತಿಯೊಂದಿಗೆ ತಮ್ಮ ಬೇರುಗಳನ್ನು ಗಟ್ಟಿಯಾಗಿರಿಸಿಕೊಂಡಿದ್ದ ಸ್ಥಳವಾಗಿದೆ. ಅವರ ಒಡೆತನದ 32 ಎಕರೆ ವಿಶಾಲವಾದ ಕೃಷಿ ಜಮೀನು ಬೆಟ್ಟದ ತಪ್ಪಲಿನಲ್ಲಿದೆ. ಮಾವಿನಕೆರೆ ರಂಗನಾಥಸ್ವಾಮಿ ಬಗ್ಗೆ ಚೆನ್ನಮ್ಮನವರಿಗೆ ಅಪಾರವಾದ ಭಕ್ತಿ ಇತ್ತು. ಇಡೀ ಕುಟುಂಬದ ಒಳಿತಿಗಾಗಿ ಹಾಗೂ ರೈತರ ಏಳಿಗೆಗಾಗಿ ನಿರಂತರವಾಗಿ ಪ್ರಾರ್ಥಿಸುತ್ತಿದ್ದ ಅವರು, ದೈವ ಸನ್ನಿಧಿಯ ನೈಸರ್ಗಿಕ ವಾತಾವರಣದ ತಪ್ಪಲಿನಲ್ಲಿ ತಮ್ಮ ವಿಶ್ರಾಂತಿ ಪಡೆಯಬೇಕೆಂಬುದು ಅವರ ಕುಟುಂಬದ ಆಶಯವಾಗಿದೆ.

ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಮುಂಜಾನೆ 4:45ರ ಸುಮಾರಿಗೆ ಹೊಳೆನರಸೀಪುರದ ರೇವಣ್ಣ ಮನೆಗೆ ತರಲಾಯಿತು. ಇದಕ್ಕೂ ಮುನ್ನ ಚೆನ್ನಮ್ಮ ಮೃತದೇಹವನ್ನು ಹುಟ್ಟೂರು ಮುತ್ತಿಗೆಹಿರಿಹಳ್ಳಿಗೂ ಕೊಂಡೊಯ್ಯಲಾಯಿತು. ಈ ವೇಳೆ ಗ್ರಾಮಸ್ಥರು ಚೆನ್ನಮ್ಮಗೆ ಮುತ್ತೈದೆ ಮಡಿಲು ತುಂಬಿಸುವ ಶಾಸ್ತ್ರ ಮಾಡಿದರು. ಮೃತದೇಹಕ್ಕೆ ಹೂವಿನ ಹಾರ ಹಾಕಿ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಇನ್ನು ರೇವಣ್ಣ ಮನೆಗೆ ಚೆನ್ನಮ್ಮ ಪಾರ್ಥಿವ ಶರೀರ ತರುತ್ತಿದ್ದಂತೆ ಸೊಸೆ ಭವಾನಿ ರೇವಣ್ಣ ಮೃತದೇಹಕ್ಕೆ ಆರತಿ ಮಾಡಿದರು. ಬಳಿಕ ಮನೆಯೊಳಗೆ ಚೆನ್ನಮ್ಮ ಮೃತದೇಹವನ್ನು ಕೊಂಡೊಯ್ಯಲಾಯಿತು. ಮನೆಯೊಳಗೆ ಕುಟುಂಬಸ್ಥರ ಪೂಜೆ ಬಳಿಕ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಇದನ್ನೂ ಓದಿ : ದಾರಿಯುದ್ದಕ್ಕೂ ನಿಂತು ಚೆನ್ನಮ್ಮನ ಅಂತಿಮ ದರ್ಶನ ಪಡೆದ ಜನ್ರು – ಕೈಮುಗಿದ ದೇವೇಗೌಡ್ರು

Related posts

ಕಮಲಾ ಗಂಗಹನುಮಯ್ಯನವರ ನಿಧನ ನೋವುಂಟು ಮಾಡಿದೆ – ಡಿಸಿಎಂ ಡಾ. ಜಿ. ಪರಮೇಶ್ವರ್‌

Kalpana Editor

ಭೈರತಿ ಸುರೇಶ್​​ ರಿಯಾಲಿಟಿ ಚೆಕ್: ಬಿಎಂಟಿಸಿ ಬಸ್ ಕಂಡಕ್ಟರ್ ಅಮಾನತು

Kalpana Editor

ರೇವಣ್ಣ ಸಲಹೆಯಂತೆ ಅಜ್ಜಿಯ ಅಂತ್ಯಸಂಸ್ಕಾರಕ್ಕೆ ಪೆರೋಲ್ ಸಲ್ಲಿಸದ ಪ್ರಜ್ವಲ್ ರೇವಣ್ಣ

Kalpana Editor