ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ ನಿಧನದ ಹಿನ್ನೆಲೆಯಲ್ಲಿ, ಜೈಲಿನಲ್ಲಿರುವ ಮೊಮ್ಮಗ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪೆರೋಲ್ ಕೋರಿ ಯಾವುದೇ ಅರ್ಜಿ ಸಲ್ಲಿಸಿಲ್ಲ. ತಂದೆ ಹೆಚ್.ಡಿ. ರೇವಣ್ಣ ಅವರ ಸೂಚನೆಯಂತೆ ಪ್ರಜ್ವಲ್ ರೇವಣ್ಣ ಪೆರೋಲ್‌ಗೆ ಅರ್ಜಿ ಸಲ್ಲಿಸದೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ವೀಡಿಯೊ ಕಾನ್ಫರೆನ್ಸ್ ಮೂಲಕ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ವೀಕ್ಷಿಸಲಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಒಳಗಿರುವುದರಿಂದ, ಈ ಸಂದರ್ಭದಲ್ಲಿ ಹೊರಬಂದರೆ ಕುಟುಂಬಕ್ಕೆ ಹಾಗೂ ಸಾರ್ವಜನಿಕವಾಗಿ ಇರಿಸುಮುರಿಸು ಉಂಟಾಗಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ಪೆರೋಲ್‌ಗೆ ಅರ್ಜಿ ಸಲ್ಲಿಸದಂತೆ ತಂದೆ ಹೆಚ್.ಡಿ. ರೇವಣ್ಣ ನೀಡಿದ ಸಲಹೆಯಂತೆ ಪ್ರಜ್ವಲ್ ಅರ್ಜಿ ಹಾಕಿಲ್ಲ. ಸಾಮಾನ್ಯವಾಗಿ ಸಜಾ ಕೈದಿಗೆ ಪೆರೋಲ್ ಸಿಗಬೇಕಾದರೆ ಕನಿಷ್ಠ ಎರಡು ವರ್ಷಗಳ ಕಾಲ ಶಿಕ್ಷೆ ಅನುಭವಿಸಿರಬೇಕಾಗುತ್ತದೆ. ಜೊತೆಗೆ ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ಕೋರ್ಟ್ ಹಾಗೂ ಜೈಲು ಆಡಳಿತ ಮಂಡಳಿಯಿಂದ ಪೆರೋಲ್ ಅಥವಾ ತುರ್ತು ಜಮೀನು ಸಿಗುವುದು ಅತ್ಯಂತ ವಿರಳವಾಗಿದೆ.
ಪ್ರಜ್ವಲ್ ರೇವಣ್ಣ ಇದುವರೆಗೆ ಪೆರೋಲ್ ಅಥವಾ ತಾತ್ಕಾಲಿಕ ಜಮೀನಿಗಾಗಿ ಯಾವುದೇ ಮನವಿ ಸಲ್ಲಿಸಿಲ್ಲ ಎಂದು ಪರಪ್ಪನ ಅಗ್ರಹಾರ ಜೈಲು ಮುಖ್ಯ ಅಧೀಕ್ಷಕ ಅಂಶುಕುಮಾರ್ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ. ಅಂತ್ಯಕ್ರಿಯೆಯ ಸ್ಥಳಕ್ಕೆ ತೆರಳಲು ಅವಕಾಶವಿಲ್ಲದ ಕಾರಣ, ಮಾನವೀಯತೆಯ ಆಧಾರದ ಮೇಲೆ ತಮ್ಮ ಸೆಲ್‌ನಲ್ಲಿರುವ ಟಿವಿ ಅಥವಾ ಜೈಲು ಆಡಳಿತ ಒದಗಿಸುವ ವೀಡಿಯೊ ಕಾನ್ಫರೆನ್ಸ್ ವ್ಯವಸ್ಥೆಯ ಮೂಲಕ ಅಂತ್ಯಕ್ರಿಯೆಯ ನೇರ ಪ್ರಸಾರವನ್ನು ವೀಕ್ಷಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ಹೊಳೆನರಸೀಪುರದಲ್ಲಿ ಇಂದು ಚೆನ್ನಮ್ಮ ಅಂತ್ಯಕ್ರಿಯೆ – ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿ ವಿಧಿವಿಧಾನ ಪ್ರಕಾರ..!
