ಟಾಲಿವುಡ್‌ನ ಖ್ಯಾತ ನಟ ರಾಮ್ ಚರಣ್ ಬಲಗೈ ಮಣಿಕಟ್ಟಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ತಮಿಳುನಾಡಿನ ಕೊಯಮತ್ತೂರಿನ ಗಂಗಾ ಆಸ್ಪತ್ರೆಯಲ್ಲಿ ಈ ಆಪರೇಷನ್ ನಡೆದಿದೆ. ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ತಂದೆ ಚಿರಂಜೀವಿ, ತಾಯಿ ಸುರೇಖಾ ಮತ್ತು ಪತ್ನಿ ಉಪಾಸನಾ ಕೊನಿಡೇಲ ಅವರು ನಟನ ಜೊತೆಯಲ್ಲಿದ್ದಾರೆ. ರಾಮ್ ಚರಣ್ ಶೀಘ್ರವಾಗಿ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಹೀಗಿರುವಾಗಲೇ ಅವರ ಆಸ್ಪತ್ರೆ ಫೋಟೋ ವೈರಲ್ ಆಗಿದೆ.
ರಾಮ್ ಚರಣ್ ಅವರಿಗೆ ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ಖ್ಯಾತ ವೈದ್ಯ ಡಾ. ಎಸ್. ರಾಜಶೇಖರನ್ ನೇತೃತ್ವದಲ್ಲಿ ಸರ್ಜರಿ ನಡೆಸಲಾಯಿತು. ಇದಕ್ಕಾಗಿ ಮಿಯಾಮಿಯಿಂದ ಅಂತರರಾಷ್ಟ್ರೀಯ ಪ್ರಸಿದ್ಧ ಕೈ ಮತ್ತು ಮಣಿಕಟ್ಟು ತಜ್ಞ ಡಾ. ಅಲೆಜಾಂಡ್ರೋ ಬಾಡಿಯಾ ಅವರನ್ನು ಕರೆಸಲಾಗಿತ್ತು. ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದೆ ಎಂದು ಆಸ್ಪತ್ರೆ ಮಂಡಳಿ ತಿಳಿಸಿದೆ. ಚಿಕಿತ್ಸೆಯ ಫಲಿತಾಂಶದ ಬಗ್ಗೆ ವೈದ್ಯರ ತಂಡ ತೃಪ್ತಿ ವ್ಯಕ್ತಪಡಿಸಿದೆ. ಸದ್ಯ ರಾಮ್ ಚರಣ್ ಅವರಿಗೆ ಎಂಟು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ಅಲ್ಲಿಯವರೆಗೆ ಅವರು ಯಾವುದೇ ಶೂಟಿಂಗ್‌ನಲ್ಲಿ ಭಾಗವಹಿಸುವಂತಿಲ್ಲ.
ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಈ ಗಾಯವಾಗಿತ್ತು. ಕುಸ್ತಿ ದೃಶ್ಯದ ಶೂಟಿಂಗ್ ಸಮಯದಲ್ಲಿ ಚರಣ್ ಮಣಿಕಟ್ಟು ಜಖಂಗೊಂಡಿತ್ತು. ಆದರೂ ಅವರು ಶೂಟಿಂಗ್ ನಿಲ್ಲಿಸದೆ ನೋವಿನಲ್ಲೇ ನಟಿಸಿದ್ದರು. ಚಿತ್ರದ ಪ್ರಚಾರದ ಕೆಲಸಗಳನ್ನೂ ಮುಗಿಸಿಕೊಟ್ಟಿದ್ದರು. ನಟನ ಈ ವೃತ್ತಿಪರತೆಗೆ ‘ಪೆದ್ದಿ’ ನಿರ್ಮಾಣ ಸಂಸ್ಥೆ ವೃದ್ಧಿ ಸಿನಿಮಾಸ್ ಧನ್ಯವಾದ ತಿಳಿಸಿದೆ. ಚಿತ್ರರಂಗದ ಹಲವರು ರಾಮ್ ಚರಣ್ ಅವರ ಬದ್ಧತೆಯನ್ನು ಶ್ಲಾಘಿಸಿದ್ದಾರೆ.
ಈ ವರ್ಷದ ಆರಂಭದಲ್ಲೂ ‘ಪೆದ್ದಿ’ ಸೆಟ್‌ನಲ್ಲಿ ಚರಣ್ ಅವರ ಹಣೆಗೆ ಗಂಭೀರ ಗಾಯವಾಗಿತ್ತು. ಆಗ ಹೈದರಾಬಾದ್‌ನ ಅಪೊಲೊ ಆಸ್ಪತ್ರೆಯಲ್ಲಿ ಸರ್ಜರಿ ಮಾಡಲಾಗಿತ್ತು. ಆ ಸಮಯದಲ್ಲಿಯೇ ಮಣಿಕಟ್ಟಿಗೂ ಸರ್ಜರಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದರು. ಆದರೆ ರಾಮ್ ಚರಣ್ ಸಿನಿಮಾ ಬಿಡುಗಡೆಯಾಗುವವರೆಗೆ ಶಸ್ತ್ರಚಿಕಿತ್ಸೆಯನ್ನು ಮುಂದೂಡಿದ್ದರು. ಜೂನ್ 4 ರಂದು 350 ಕೋಟಿ ಬಜೆಟ್‌ನ ‘ಪೆದ್ದಿ’ ಸಿನಿಮಾ ಅದ್ಧೂರಿಯಾಗಿ ತೆರೆಕಂಡಿತ್ತು. ಚಿತ್ರದಲ್ಲಿ ಶಿವರಾಜ್‌ಕುಮಾರ್, ಜಾನ್ವಿ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಗುಣಮುಖರಾದ ಬಳಿಕ ಚರಣ್ ನಿರ್ದೇಶಕ ಸುಕುಮಾರ್ ಅವರ ‘RC17’ ಚಿತ್ರದ ಕೆಲಸ ಆರಂಭಿಸಲಿದ್ದಾರೆ. ಇದನ್ನೂ ಓದಿ : ನಟ ರವಿ-ಆರತಿ ವಿಚ್ಛೇದನ ಪ್ರಕರಣ; ಜೀವನಾಂಶ ಬೇಡಿಕೆಗೆ ನಿರಾಕರಣೆ..!
