26.4 C
ಬೆಂಗಳೂರು
August 3, 2026
kranthikidi.com
ತಾಜಾಸುದ್ದಿರಾಜ್ಯ

ಪೌರಕಾರ್ಮಿಕ ದಂಪತಿಯ ಪುತ್ರನಿಗೂ ಸಿಕ್ತು; ಸಚಿವ ಸ್ಥಾನ..!

ದಾವಣಗೆರೆ : ಪೌರಕಾರ್ಮಿಕ ದಂಪತಿಯ ಕುಟುಂಬದಿಂದ ಬಂದ ಕೆಎಸ್ ಬಸವಂತಪ್ಪ, ಇದೀಗ ಕರ್ನಾಟಕ ಸಚಿವ ಸಂಪುಟಕ್ಕೆ ಸೇರುವ ಅವಕಾಶ ಪಡೆದಿದ್ದಾರೆ. ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವಂತಪ್ಪ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಳಿಕ ಸಚಿವರಾಗುತ್ತಿರುವುದು ವಿಶೇಷ. ದೀರ್ಘ ರಾಜಕೀಯ ಹೋರಾಟದ ಬಳಿಕ ಸಚಿವ ಸ್ಥಾನದ ಅವಕಾಶ ಪಡೆದಿರುವ ಬಸವಂತಪ್ಪ ಅವರ ಹಿನ್ನೆಲೆ ಇದೀಗ ಗಮನ ಸೆಳೆದಿದೆ.

ದಾವಣಗೆರೆಯ ಗಾಂಧಿನಗರದಲ್ಲಿ ಬೆಳೆದ ಕೆಎಸ್ ಬಸವಂತಪ್ಪ ಅವರು ಪೈಲ್ವಾನ್ ಸಂಗಪ್ಪ ಹಾಗೂ ಹನಮಕ್ಕ ದಂಪತಿಯ ಐದು ಮಕ್ಕಳಲ್ಲಿ ಮೂರನೇ ಪುತ್ರ. ಬಸವಂತಪ್ಪ ಅವರ ತಂದೆ-ತಾಯಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಸ್ವತಃ ಬಸವಂತಪ್ಪ ಕೂಡ ಕೆಲಕಾಲ ಪೌರಕಾರ್ಮಿಕರಾಗಿ ಕೆಲಸ ಮಾಡಿದ್ದು, ಬಳಿಕ ಸೈಕಲ್ ಸ್ಟ್ಯಾಂಡ್ ಹಾಗೂ ಬಾತ್‌ರೂಂ ಟೆಂಡರ್‌ಗಳನ್ನು ಪಡೆದು ಜೀವನ ಸಾಗಿಸಿದ್ದರು ಎನ್ನಲಾಗಿದೆ.

ಪಿಯುಸಿ ಶಿಕ್ಷಣ ಪಡೆದಿರುವ ಬಸವಂತಪ್ಪ ಅವರು ಬಳಿಕ ಸ್ಥಳೀಯ ರಾಜಕೀಯದಲ್ಲಿ ಸಕ್ರಿಯರಾದರು. ದಾವಣಗೆರೆ ತಾಲೂಕಿನ ಅನಗೋಡು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದರು. ಮಾಯಕೊಂಡ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, 2018ರ ಚುನಾವಣೆಯಲ್ಲಿ ಬಸವಂತಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಆದರೆ, ಅಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದರು. ಸೋಲಿನಿಂದ ಹಿಂದೆ ಸರಿಯದೆ ಮತ್ತೆ ಚುನಾವಣಾ ಕಣಕ್ಕಿಳಿದ ಅವರು 2023ರಲ್ಲಿ ಮಾಯಕೊಂಡ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ 34 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಬಸವಂತಪ್ಪ ಅವರು ಮಾಜಿ ಸಚಿವ ಎಚ್. ಆಂಜನೇಯ ಅವರ ಅಳಿಯರಾಗಿದ್ದಾರೆ. ಆಂಜನೇಯ ಅವರ ಸಹೋದರಿ ಹನಮಕ್ಕ ಅವರ ಪುತ್ರ ಬಸವಂತಪ್ಪ. ಮಾಯಕೊಂಡ ಕ್ಷೇತ್ರದಲ್ಲಿ ಮಾದಿಗ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿರುವ ಅವರು, ಕ್ಷೇತ್ರದ ರಾಜಕೀಯದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ.

ದಾವಣಗೆರೆ ನಗರದ ಎಸ್‌ಎಸ್ ಬಡಾವಣಿಯ ಬಿ ಬ್ಲಾಕ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಬಸವಂತಪ್ಪ ಅವರ ರಾಜಕೀಯ ಪಯಣ, ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ವ್ಯಕ್ತಿಯೊಬ್ಬರು ರಾಜ್ಯದ ಸಚಿವ ಸಂಪುಟಕ್ಕೆ ಪ್ರವೇಶಿಸುವ ಹಾದಿಯನ್ನೂ ತೋರಿಸುತ್ತದೆ. ಅವರ ಸಹೋದರ ಕೆಎಸ್ ಗೋವಿಂದರಾಜ್ ಅವರು ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾಗಿದ್ದಾರೆ. ಇದೀಗ ಬಸವಂತಪ್ಪ ಅವರಿಗೆ ಸಚಿವ ಸ್ಥಾನದ ಅವಕಾಶ ಸಿಕ್ಕಿರುವುದರಿಂದ ದಾವಣಗೆರೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ಇದನ್ನೂ ಓದಿ : ಬಹಿರಂಗವಾಗಿ ಪಕ್ಷ ವಿರೋಧಿ ಚಟುವಟಿಕೆ, ನಡೆಸಿದವರಿಗೆ ಸಚಿವ ಸ್ಥಾನ; ತನ್ವೀರ್ ಸೇಠ್

Related posts

ಕೆಪಿಎಸ್‌ಸಿ ಅಧ್ಯಕ್ಷರ ಅಮಾನತು, ಹೊಸ ಕಾನೂನು, ವಿದೇಶಾಂಗ ನೀತಿ ಹಾಗೂ ಆರ್‌ಎಸ್‌ಎಸ್‌-ವಿಎಚ್‌ಪಿ ವಿವಾದ ಕುರಿತು ಪ್ರತಿಕ್ರಿಯೆ – ಗೃಹ ಸಚಿವ ಪ್ರಿಯಾಂಕ್ ಖರ್ಗೆ

Kalpana Editor

ಜೂ.12 ರಂದು ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ತಮಿಳುನಾಡು ಸಿಎಂ ವಿಜಯ್‌ ಭೇಟಿ..!

Kalpana Editor

ನಿರ್ಮಾಪಕನ ಜೊತೆ ನಟಿ ಶರ್ಮಿಳಾ ಮಾಂಡ್ರೆ ಮದುವೆ ಫಿಕ್ಸ್‌..!

Kalpana Editor