August 1, 2026
kranthikidi.com
ತಾಜಾಸುದ್ದಿಸಿನಿಮಾ

ದಳಪತಿ ವಿಜಯ್ ಹಾದಿಯಲ್ಲಿ ನಟ ಧನುಷ್; ರಾಜಕೀಯ ಪ್ರವೇಶದ ಸುಳಿವು..!

ದಳಪತಿ ವಿಜಯ್ ಬಳಿಕ ತಮಿಳು ಚಿತ್ರರಂಗದ ಸ್ಟಾರ್ ನಟ ಧನುಷ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ..? ಇಂತಹದೊಂದು ಹೊಸ ಚರ್ಚೆ ಈಗ ಕಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿದೆ. ಭಾನುವಾರ ಚೆನ್ನೈನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಅವರು ಆಡಿದ ಮಾತುಗಳು ಈ ಅನುಮಾನಕ್ಕೆ ಕಾರಣವಾಗಿವೆ. ಕೇವಲ ಸಿನಿಮಾ ಅಷ್ಟೇ ಅಲ್ಲದೆ ಸಮಾಜ ಸೇವೆಗೆ ಒಟ್ಟಾಗುವಂತೆ ಧನುಷ್ ಕರೆ ನೀಡಿದ್ದಾರೆ. ಇದು ಅವರ ರಾಜಕೀಯ ಪ್ರವೇಶದ ಮುನ್ಸೂಚನೆ ಎನ್ನಲಾಗುತ್ತಿದೆ.

ಚೆನ್ನೈನಲ್ಲಿ ಧನುಷ್ ಅಭಿಮಾನಿ ಸಂಘ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಭಾರಿ ಜನಸಾಗರ ಹರಿದುಬಂದಿತ್ತು. ಈ ವೇದಿಕೆಯಲ್ಲಿ ಮಾತನಾಡಿದ ಧನುಷ್ ಅವರು ಅಭಿಮಾನಿ ಬಳಗದ ಒಗ್ಗಟ್ಟನ್ನು ಶ್ಲಾಘಿಸಿದರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಒಂದೆಡೆ ಸೇರಿರುವುದರ ಹಿಂದೆ ದೊಡ್ಡ ಶಕ್ತಿ ಇದೆ ಎಂದರು. ಈ ಒಗ್ಗಟ್ಟಿಗೆ ಸಿನಿಮಾ ಮೀರಿದ ಒಂದು ದೊಡ್ಡ ಉದ್ದೇಶ ಸಿಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಕೇವಲ ಸಿನಿಮಾಗಳ ಆಡಿಯೋ ಲಾಂಚ್ ಹಾಗೂ ಅಭಿಮಾನಿಗಳ ಭೇಟಿಗೆ ಮಾತ್ರ ಸೀಮಿತವಾಗಬೇಡಿ ಎಂದು ಧನುಷ್ ತಿಳಿಸಿದರು. ನಿಮ್ಮ ಸುತ್ತಮುತ್ತಲಿನ ಜನರ ಕಷ್ಟಗಳಿಗೆ ಸ್ಪಂದಿಸಿ ಎಂದರು. ಸ್ಥಳೀಯ ಪ್ರದೇಶಗಳ ಜನರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಿ ಎಂದು ಕರೆ ನೀಡಿದರು. ಜನರಿಗೆ ಸಾಧ್ಯವಾದಷ್ಟು ಸಹಾಯ ಮಾಡಲು ಅಭಿಮಾನಿಗಳಿಗೆ ಸೂಚಿಸಿದರು. ಇದೇ ಕಾರ್ಯಕ್ರಮದಲ್ಲಿ ಧನುಷ್ ಅವರು ತಮ್ಮ ಅಭಿಮಾನಿ ಸಂಘದ ಹೊಸ ಧ್ವಜವನ್ನು ಅನಾವರಣಗೊಳಿಸಿದರು. ಇದು ಸದ್ಯ ತಮಿಳುನಾಡಿನಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಧನುಷ್ ಅವರ ಈ ನಡೆ ತಮಿಳುನಾಡಿನ ಇಂದಿನ ಮುಖ್ಯಮಂತ್ರಿ ದಳಪತಿ ವಿಜಯ್ ಅವರ ಆರಂಭದ ದಿನಗಳನ್ನು ನೆನಪಿಸುತ್ತಿದೆ. ವಿಜಯ್ ಕೂಡ ತಮ್ಮ ರಾಜಕೀಯ ಪಕ್ಷ ‘ತಮಿಳಗ ವೆಟ್ರಿ ಕಳಗಂ’ ಸ್ಥಾಪಿಸುವ ಮುನ್ನ ಇದೇ ರೀತಿ ಅಭಿಮಾನಿ ಸಂಘಗಳ ಮೂಲಕ ತಳಮಟ್ಟದಲ್ಲಿ ಸಮಾಜ ಸೇವೆ ಮಾಡಿದ್ದರು. ಅದೇ ಹಾದಿಯನ್ನು ಧನುಷ್ ತುಳಿಯುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ತಮಿಳುನಾಡಿಗೆ ಧನುಷ್ ಅವರಂತಹ ಸುಶಿಕ್ಷಿತ ಹಾಗೂ ಧೈರ್ಯವಂತ ನಾಯಕರ ಅಗತ್ಯವಿದೆ ಎಂದು ಫ್ಯಾನ್ಸ್ ಅಭಿಪ್ರಾಯಪಡುತ್ತಿದ್ದಾರೆ. ಧನುಷ್ 2031ರ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನಟ ಧನುಷ್ ಅವರು ಇತ್ತೀಚಿನ ವರ್ಷಗಳಲ್ಲಿ ಕೇವಲ ಕಮರ್ಷಿಯಲ್ ಸಿನಿಮಾಗಳಿಗೆ ಸೀಮಿತವಾಗದೆ, ಸಮಾಜದಲ್ಲಿನ ತಾರತಮ್ಯ, ಶೋಷಣೆ ಮತ್ತು ಕೆಳವರ್ಗದ ಜನರ ಹಕ್ಕುಗಳನ್ನು ಪ್ರತಿಪಾದಿಸುವಂತಹ ಗಂಭೀರ ಕಥಾಹಂದರ ಹೊಂದಿರುವ ಚಿತ್ರಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ವೆಟ್ರಿಮಾರನ್ ನಿರ್ದೇಶನದ ‘ಅಸುರನ್’ ಚಿತ್ರದಲ್ಲಿ ಭೂಮಿ ಮತ್ತು ಶಿಕ್ಷಣದ ಹಕ್ಕಿಗಾಗಿ ಹೋರಾಡುವ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.

ಆ ಬಳಿಕ ಬಂದ ಮಾರಿ ಸೆಲ್ವರಾಜ್ ಅವರ ‘ಕರ್ಣನ್’ ಚಿತ್ರದಲ್ಲಿ ಹಳ್ಳಿಯ ಜನರ ಮೇಲಾಗುವ ಪೊಲೀಸ್ ದೌರ್ಜನ್ಯ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿ ಎತ್ತುವ ಮೂಲಕ ಗಮನ ಸೆಳೆದಿದ್ದರು. ಇತ್ತೀಚೆಗೆ ತೆರೆಕಂಡ ‘ಕ್ಯಾಪ್ಟನ್ ಮಿಲರ್’ ಚಿತ್ರದಲ್ಲೂ ಕೂಡ ಬ್ರಿಟಿಷರ ಮತ್ತು ಸ್ಥಳೀಯ ಜಮೀನ್ದಾರರ ದಬ್ಬಾಳಿಕೆಯ ವಿರುದ್ಧ ಹೋರಾಡುವ ಕ್ರಾಂತಿಕಾರಿಯ ಪಾತ್ರಕ್ಕೆ ಅವರು ಜೀವ ತುಂಬಿದ್ದರು. ಈ ಸಾಲು ಸಾಲು ಸಿನಿಮಾಗಳಲ್ಲಿ ಸಮಾಜ ಸೇವೆ, ಸಮಾನತೆ ಮತ್ತು ಜನಪರ ಹೋರಾಟದ ಸಂದೇಶಗಳಿರುವುದು, ಅವರು ತಳಮಟ್ಟದ ಜನರ ಮನಗೆದ್ದು ರಾಜಕೀಯ ಪ್ರವೇಶ ಮಾಡಲು ವ್ಯವಸ್ಥಿತವಾಗಿ ನಡೆಸುತ್ತಿರುವ ಪೂರ್ವ ಸಿದ್ಧತೆಯ ಸೂಚನೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದನ್ನೂ ಓದಿ : ಅಶ್ಲೀಲ ಟ್ರೋಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಧ್ರುವಂತ್

Related posts

ಅಭಿಮಾನಿಗಳಿಗೆ ಹೆಲ್ತ್ ಕಾರ್ಡ್ ಕೊಡಿಸಿದ ನಟ ಶಿವರಾಜ್ ಕುಮಾರ್

Kalpana Editor

ಚೆನ್ನಮ್ಮ ನಿಧನ; ಇಂದು, ನಾಳೆ ಹಾಸನ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ..!

Kalpana Editor

ಪಿಎಂ ಕಿಸಾನ್ ಸಮ್ಮಾನ್ ನಿಧಿಯ 23ನೇ ಕಂತು ಇಂದು ಬಿಡುಗಡೆ; ಅರ್ಹ ರೈತರ ಖಾತೆಗೆ ಹಣ ಜಮೆ

Kalpana Editor