ನವದೆಹಲಿ : ʻರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಅಕಾಡೆಮಿ, ಹೈದರಾಬಾದ್‌ನಿಂದ 2026ರಲ್ಲಿ ಕಾನೂನು ಪದವಿ ಪಡೆಯುವ ಯಾವುದೇ ವಿದ್ಯಾರ್ಥಿಯನ್ನು ಮುಂದಿನ ಆದೇಶದವರೆಗೆ ವಕೀಲರಾಗಿ ನೋಂದಾಯಿಸಬಾರದುʼ ಎಂಬ ಭಾರತೀಯ ಬಾರ್ ಕೌನ್ಸಿಲ್ ಆದೇಶಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದು ನನ್ನ ಮತ್ತು ವಿದ್ಯಾರ್ಥಿಗಳ ನಡುವಿನ ಮಾತುಕತೆ, ಮಧ್ಯಪ್ರವೇಶ ಮಾಡೋದಕ್ಕೆ ಅವರು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಸುಪ್ರೀಂ ಕೋರ್ಟ್ ವಿದ್ಯಾರ್ಥಿಗಳಿಗೆ ಕಾನೂನುಬದ್ಧವಾಗಿ ಪ್ರತಿಭಟಿಸುವ ಹಕ್ಕು ನೀಡಿದೆ. ಬಾರ್‌ಕೌನ್ಸಿಲ್ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದಿತ್ತು ಎಂದು ಒತ್ತಿ ಹೇಳಿದ್ದಾರೆ. ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿರುವ ಸುಪ್ರೀಂ ಕೋರ್ಟ್, ಬಾರ್ ಕೌನ್ಸಿಲ್ ಆದೇಶದ ಬಗ್ಗೆ ಉತ್ತರವನ್ನೂ ಪಡೆದಿಕೊಂಡಿದೆ. ಜೊತೆಗೆ NALSAR ನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳಬಾರದು ಎಂದು ಕೂಡ ತಾಕೀತು ಮಾಡಿದೆ.
ಇದಕ್ಕೂ ಬಿಸಿಐಗೂ ಯಾವುದೇ ಸಂಬಂಧವಿಲ್ಲ, ನಾವು ನಿಮ್ಮೊಂದಿಗಿದ್ದೇವೆ. ವಿದ್ಯಾರ್ಥಿಗಳು ನನಗೆ ಪತ್ರ ಬರೆದಿದ್ದಾರೆ. ಇದು ವಿದ್ಯಾರ್ಥಿಗಳು ಮತ್ತು ನನ್ನ ನಡುವಿನ ಸಂವಾದ. ಅನಗತ್ಯವಾಗಿ ಸುತ್ತೋಲೆ ಹೊರಡಿಸಲು ಅವರು ಯಾರು? ನಾನು ಕಾಲೇಜಿನಲ್ಲಿದ್ದಾಗ, ನಾನು ವಿದ್ಯಾರ್ಥಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಕೆಲವೊಮ್ಮೆ ಅವರು ತಪ್ಪು ಹೇಳುತ್ತಿದ್ದರೂ, ಕಾನೂನುಬದ್ಧವಾಗಿ ಧ್ವನಿ ಎತ್ತುತ್ತಿದ್ದರೆ, ಅದನ್ನ ಗೌರವಿಸಬೇಕು ಎಂದು ಸಿಜೆಐ ಹೇಳಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಬಿಸಿಐ ಆದೇಶದ ಕುರಿತು ಹಿರಿಯ ವಕೀಲ ಕೆ. ಪರಮೇಶ್ವರ್ ಸಲ್ಲಿಸಿದ ಅರ್ಜಿಯನ್ನ ಆಲಿಸಲು ತ್ರಿಸದಸ್ಯ ಪೀಠ ಒಪ್ಪಿಕೊಂಡ ನಂತರ ಸೂರ್ಯಕಾಂತ್ ಅವರ ಹೇಳಿಕೆಗಳು ಹೊರಬಂದಿವೆ. ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ ಮೋಹನ ಅವರನ್ನೂ ಒಳಗೊಂಡ ಪೀಠವು 2 ವಾರಗಳ ನಂತರ ಈ ವಿಷಯವನ್ನು ಮತ್ತೆ ವಿಚಾರಣೆ ನಡೆಸಲಿದೆ.
NALSAR ಘಟಿಕೋತ್ಸವಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನ ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದನ್ನ ಕೆಲ ವಿದ್ಯಾರ್ಥಿಗಳು ವಿರೋಧಿಸಿದ್ದರು. ಇದರಿಂದ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಅಕಾಡೆಮಿ, ಹೈದರಾಬಾದ್‌ನಿಂದ 2026ರಲ್ಲಿ ಕಾನೂನು ಪದವಿ ಪಡೆಯುವ ಯಾವುದೇ ವಿದ್ಯಾರ್ಥಿಯನ್ನ ಮುಂದಿನ ಆದೇಶದವರೆಗೆ ವಕೀಲರಾಗಿ ನೋಂದಾಯಿಸಬಾರದು ಎಂದು ಭಾರತೀಯ ಬಾರ್ ಕೌನ್ಸಿಲ್ ಎಲ್ಲಾ ರಾಜ್ಯ ಬಾರ್ ಕೌನ್ಸಿಲ್‌ಗಳಿಗೆ ನಿರ್ದೇಶನ ನೀಡಿದೆ. ಇದನ್ನೂ ಓದಿ : ವಿಜಯ್ ಸರ್ಕಾರದ ನಿರ್ಧಾರ ರದ್ದುಗೊಳಿಸಿದ್ದ, ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ..!
