25.3 C
ಬೆಂಗಳೂರು
September 20, 2026
kranthikidi.com
ಕ್ರೈಂತಾಜಾಸುದ್ದಿರಾಜ್ಯ

ಎಂಟು ವರ್ಷದಿಂದ ಜೊತೆಯಲ್ಲಿದ್ದ ಅಂಧ ಮಹಿಳೆಯನ್ನೇ ದೋಚಿದ ದಂಪತಿ..!

ಬೆಂಗಳೂರು : ಜೊತೆಯಲ್ಲೇ ಇದ್ದು ನಂಬಿಸಿ ದ್ರೋಹ ಬಗೆಯುವ ಕಲಿಗಾಲ ಇದು ಎನ್ನುವುದಕ್ಕೆ ಬೆಂಗಳೂರಿನಲ್ಲೊ ನಡೆದ ಈ ಘಟನೆಯೇ ಸಾಕ್ಷಿ. ಕಳೆದ 8 ವರ್ಷಗಳಿಂದ ಜೊತೆಯಲ್ಲಿ, ಒಂದೇ ಸೂರಿನಡಿ ವಾಸವಿದ್ದ ಅಂಧ ಮಹಿಳೆಯ ಮನೆಯಲ್ಲೇ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದ ದಂಪತಿಯನ್ನು ಬೆಂಗಳೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಎಂಬಿಎ ಪದವೀಧರೆ ಶರ್ಮಿಳಾ ಶೇಷಾದ್ರಿ (50) ಮತ್ತು ಆಕೆಯ ಪತಿ ಡಿಪ್ಲೊಮಾ ಪದವೀಧರ ಗಣೇಶ್ ಕುಮಾರ್ (52) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ದೃಷ್ಟಿ ದೋಷವಿರುವ ಸಂತ್ರಸ್ತೆ ಕಳೆದ ಎಂಟು ವರ್ಷಗಳಿಂದ ಬಿಇಎಂಎಲ್ ಲೇಔಟ್ನ ಈ ದಂಪತಿಯ ಮನೆಯಲ್ಲೇ ವಾಸವಿದ್ದರು. ಜೂನ್ 2024 ರಲ್ಲಿ ಸಂತ್ರಸ್ತೆ ತನ್ನ ಚಿನ್ನಾಭರಣಗಳನ್ನು ಒಂದು ಬ್ಯಾಂಕ್ ಲಾಕರ್‌ನಿಂದ ಮತ್ತೊಂದು ಲಾಕರ್‌ಗೆ ವರ್ಗಾಯಿಸುವ ಸಲುವಾಗಿ ಮನೆಗೆ ತಂದಿದ್ದರು. ಒಟ್ಟು ಚಿನ್ನಾಭರಣಗಳ ಜೊತೆಗೆ ಭಾರಿ ಮೊತ್ತದ 49.50 ಲಕ್ಷ ರೂಪಾಯಿ ನಗದನ್ನು ಮನೆಯ ಕಪಾಟಿನಲ್ಲಿ ಸುರಕ್ಷಿತವಾಗಿ ಇಟ್ಟಿದ್ದರು.

ಕೆಲ ದಿನಗಳ ನಂತರ ಸಂತ್ರಸ್ತೆ ತನ್ನ ಒಡವೆಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾದಾಗ ಕಪಾಟಿನ ಕೀ ಕಾಣೆಯಾಗಿತ್ತು. ಗಾಬರಿಗೊಂಡ ಆಕೆ ಕೀ ತಯಾರಿಸುವವರನ್ನು ಕರೆಯಿಸಲು ದಂಪತಿಗೆ ಕೇಳಿಕೊಂಡಿದ್ದಾರೆ. ಆದರೆ, ದಂಪತಿ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅನುಮಾನಗೊಂಡ ಸಂತ್ರಸ್ತೆ ತಾವೇ ಸ್ವತಃ ಕೀ ತಯಾರಕನನ್ನು ಕರೆಯಿಸಿ ಕಪಾಟು ಓಪನ್ ಮಾಡಿಸಿದಾಗ ಒಳಗಿದ್ದ ನಗದು ಮತ್ತು ಚಿನ್ನಾಭರಣಗಳೆಲ್ಲವೂ ಮಾಯವಾಗಿದ್ದವು.

ಹಣದ ಬಗ್ಗೆ ಸಂತ್ರಸ್ತೆ ದಂಪತಿಯನ್ನು ಪ್ರಶ್ನಿಸಿದಾಗ, ನಾವು ಆರ್ಥಿಕ ಸಂಕಷ್ಟದಲ್ಲಿದ್ದೆವು, ಹಾಗಾಗಿ ನಿನ್ನ ಹಣವನ್ನು ನಮ್ಮ ಬಿಸಿನೆಸ್‌ಗೆ ಬಳಸಿಕೊಂಡಿದ್ದೇವೆ. ನಿನಗೆ ನಗದು ಅಥವಾ ಚಿನ್ನ ಯಾವುದನ್ನೂ ವಾಪಸ್ ಕೊಡುವುದಿಲ್ಲ ಎಂದು ಉದ್ಧಟತನದ ಉತ್ತರ ನೀಡಿದ್ದಾರೆ. ಇದರಿಂದ ನೊಂದ ಅಂಧ ಮಹಿಳೆ ತಕ್ಷಣ ಪೊಲೀಸರ ಮೊರೆ ಹೋಗಿ ದೂರು ದಾಖಲಿಸಿದ್ದಾರೆ.

ಈ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಕಳವು ಮಾಡಿದ ಚಿನ್ನದ ಒಂದು ಭಾಗವನ್ನು ಹಲಸೂರಿನ ಪರಿಚಯಸ್ಥನಿಗೆ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಪೊಲೀಸರು ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 232 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ನಗದು ಪತ್ತೆಗಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತನಿಖೆಯನ್ನು ಚುರುಕುಗೊಳಿಸಲು ಸೂಚಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Related posts

7ನೇ ತರಗತಿ ಪಾಸಾಗಿದ್ರೂ ಸಾಕು, ನಿಮಗಿದೆ ಸರ್ಕಾರಿ ಸಂಸ್ಥೆಯಲ್ಲಿ ದುಡಿಯುವ ಅವಕಾಶ..!

Kalpana Editor

ಬಿಎಸ್‌ವೈ ನಿವಾಸಕ್ಕೆ ಡಿಕೆಶಿ ಭೇಟಿ; ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ..!

Kalpana Editor

ಸಚಿವ ಸ್ಥಾನಕ್ಕಾಗಿ ದಿಲ್ಲಿಯಲ್ಲಿ ಕೋಲಾರ ಜಿಲ್ಲೆಯ ಶಾಸಕರಿಂದ ಲಾಬಿ

Kalpana Editor