August 2, 2026
kranthikidi.com
ತಾಜಾಸುದ್ದಿರಾಜ್ಯ

ಕೇರಳಂನ ಮಾಜಿ ಸಿಎಂ ಪಿಣರಾಯಿ ನಿವಾಸದ ಮೇಲೆ ಇಡಿ ದಾಳಿ..!

ತಿರುವನಂತಪುರ : ಕೇರಳಂನ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿವಾಸ ಸೇರಿ 10 ಕಡೆಗಳಲ್ಲಿ ಇಡಿ ಅಧಿಕಾರಿಗಳು ಏಕಕಾಲದಲ್ಲಿ ಶೋಧ ನಡೆಸಿದ್ದಾರೆ. ಕೊಚ್ಚಿ ಮಿನರಲ್ಸ್​ ಮತ್ತು ರೂಟೈಲ್ ಲಿಮಿಟೆಡ್ ಕಂಪನಿಗೆ ಸಂಬಂಧಿಸಿದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಭಾರಿ ಆ್ಯಕ್ಷನ್​ಗೆ ಇಳಿದಿದೆ. ಈ ಪ್ರಕರಣದ ಇಡಿ ತನಿಖೆಯನ್ನು ರದ್ದುಗೊಳಿಸಲು ಕೇರಳ ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಈ ದಾಳಿಗಳು ನಡೆದಿರುವುದು ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ.

ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಒಡೆತನದ ‘ಎಕ್ಸಲಾಜಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯು, ಸಿಎಂಆರ್‌ಎಲ್ ಕಂಪನಿಗೆ ಯಾವುದೇ ರೀತಿಯ ಸೇವೆಗಳನ್ನು ನೀಡದಿದ್ದರೂ ಸಹ ಅವರಿಂದ ದೊಡ್ಡ ಮೊತ್ತದ ಹಣವನ್ನು ಪಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಆರ್ಥಿಕ ಅಕ್ರಮಗಳ ಕುರಿತಾಗಿಯೇ ಇಡಿ ಈಗ ತನಿಖೆ ನಡೆಸುತ್ತಿದೆ. ಇದರ ಭಾಗವಾಗಿ, ಕೋಳಿಕ್ಕೋಡ್‌ನಲ್ಲಿರುವ ಮಾಜಿ ಸಚಿವ ಹಾಗೂ ಪ್ರಸ್ತುತ ಶಾಸಕರಾಗಿರುವ ಪಿ.ಎ. ಮುಹಮ್ಮದ್ ರಿಯಾಸ್ ಅವರ ಮನೆ ಮೇಲೆಯೂ ಇಡಿ ದಾಳಿ ನಡೆಸಿದೆ. ಇವರು ಟಿ. ವೀಣಾ ಅವರ ಪತಿಯಾಗಿದ್ದಾರೆ.

ಕೈಗಾರಿಕಾ ರಾಸಾಯನಿಕಗಳನ್ನು ತಯಾರಿಸುವ ಕೇರಳ ಮೂಲದ CMRL ಕಂಪನಿಯು ಲಂಚ ಮತ್ತು ಮನಿ ಲಾಂಡರಿಂಗ್ ಆರೋಪದಡಿಯಲ್ಲಿ ಸಿಲುಕಿದೆ. 2017 ಮತ್ತು 2020 ರ ನಡುವೆ ವೀಣಾ ಅವರ ಎಕ್ಸಾಲಾಜಿಕ್ ಸಂಸ್ಥೆಯು ಈ ಕಂಪನಿಯಿಂದ ಯಾವುದೇ ಕೆಲಸ ಮಾಡಿಕೊಡದಿದ್ದರೂ 1.72 ಕೋಟಿ ರೂ. ಪಡೆದಿದೆ ಎಂದು 2023 ರ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಬಹಿರಂಗವಾಗಿತ್ತು.

ನಂತರ ಕೇಂದ್ರ ಸರ್ಕಾರದ ಗಂಭೀರ ವಂಚನೆ ತನಿಖಾ ಕಚೇರಿ ನಡೆಸಿದ ವಿವರವಾದ ತನಿಖೆಯಲ್ಲಿ, ವೀಣಾ ಅವರ ಸಂಸ್ಥೆಯು ಒಟ್ಟಾರೆಯಾಗಿ 2.70 ಕೋಟಿ ರೂ.ಗಳನ್ನು ಪಡೆದಿರುವುದು ಪತ್ತೆಯಾಗಿದೆ. SFIO ತನ್ನ 160 ಪುಟಗಳ ದೂರಿನಲ್ಲಿ ಟಿ. ವೀಣಾ, ಸಿಎಂಆರ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಶಶಿಧರನ್ ಕರ್ತಾ ಸೇರಿದಂತೆ 25 ಜನರನ್ನು ಪ್ರಮುಖ ಆರೋಪಿಗಳೆಂದು ಹೆಸರಿಸಿದೆ.

ಕಳೆದ ಏಪ್ರಿಲ್ 2025 ರಲ್ಲಿ, ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಅಕ್ರಮ ಪಾವತಿಗಳಿಗೆ ಸಂಬಂಧಿಸಿದಂತೆ ಟಿ. ವೀಣಾ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮೋದನೆ ನೀಡಿತ್ತು. ಪ್ರಸ್ತುತ ವೀಣಾ ಅವರ ಮೇಲೆ ಕಾರ್ಪೊರೇಟ್ ವಂಚನೆಗೆ ಸಂಬಂಧಿಸಿದ ಕಂಪನಿ ಕಾಯ್ದೆ 2013 ರ ಸೆಕ್ಷನ್ 447 ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಈ ಅಪರಾಧ ಸಾಬೀತಾದರೆ ಕನಿಷ್ಠ ಆರು ತಿಂಗಳಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ವಂಚನೆಯ ಮೊತ್ತದ ಮೂರು ಪಟ್ಟು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಈ ಹಗರಣದಲ್ಲಿ ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರ ಹೆಸರನ್ನು ನೇರವಾಗಿ ಆರೋಪಿ ಎಂದು ಉಲ್ಲೇಖಿಸದಿದ್ದರೂ, ಅವರ ಮಗಳು ಮತ್ತು ಅಳಿಯ ಇಡಿ ತನಿಖೆಯ ವ್ಯಾಪ್ತಿಗೆ ಬಂದಿರುವುದು ಕೇರಳ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Related posts

ಭಗವಂತನ ದಯೆಯಿಂದ ಒಳ್ಳೆ ಕಾಲ; ಕೋಟಿ ಕೋಟಿ ನಮಸ್ಕಾರಗಳು – ಇಕ್ಬಾಲ್ ಹುಸೇನ್

Kalpana Editor

ಟಾಕ್ಸಿಕ್‌ ರಿಲೀಸ್ ಡೇಟ್ ಫೈನಲ್ – ಆಗಸ್ಟ್ 26ಕ್ಕೆ ವರ್ಲ್ಡ್ ವೈಡ್ ಎಂಟ್ರಿ..!

Kalpana Editor

ಹೃದಯಾಘಾತದಿಂದ ತಮಿಳಿನ ಖ್ಯಾತ ನಿರ್ದೇಶಕ ಕೆ. ಭಾಗ್ಯರಾಜ್ ನಿಧನ..!

Kalpana Editor