ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಬಹುದಿನಗಳಿಂದ ಸದ್ದು ಮಾಡುತ್ತಿದ್ದ ಕಾಂಗ್ರೆಸ್ ನಾಯಕತ್ವ ಬದಲಾವಣೆ ಸಮರ ಕೊನೆಗೂ ಕ್ಲೈಮಾಕ್ಸ್ ಹಂತಕ್ಕೆ ತಲುಪಿದ್ದು, ಸಿಎಂ ಸ್ಥಾನ ತ್ಯಜಿಸಲು ಸಿದ್ದರಾಮಯ್ಯ ಅವರನ್ನು ಮನವೊಲಿಸುವಲ್ಲಿ ಹೈಕಮಾಂಡ್ ನಾಯಕರು ಯಶಸ್ವಿಯಾಗಿದ್ದು, ನಾಳೆ ರಾಜೀನಾಮೆ ನೀಡಲಿದ್ದಾರೆ. ರಾಜ್ಯಪಾಲರ ಭೇಟಿಗೂ ಅವರು ಸಮಯ ಕೇಳಿರುವ ಮಾಹಿತಿ ಇದೆ. ಅಷ್ಟಕ್ಕೂ ಮುಖ್ಯಮಂತ್ರಿ ಸ್ಥಾನ ಬಿಡಲು ಸಿದ್ದರಾಮಯ್ಯ ಅವರನ್ನು ವರಿಷ್ಠರು ಮನವೊಲಿಸಿದ್ದು, ಹೇಗೆ ಎಂಬುದೇ ಇಂಟರೆಸ್ಟಿಂಗ್ ಆಗಿದೆ.
ಅಷ್ಟಕ್ಕೂ ಹಾಲಿ ಸಿಎಂ ಸಿದ್ದರಾಮಯ್ಯ ಅವರರಿಗೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಂತೆ ಹೇಳುವುದು ಕಾಂಗ್ರೆಸ್ ಹೈಕಮಾಂಡ್ಗೂ ಸುಲಭದ ಕೆಲಸವೇನೂ ಆಗಿರಲಿಲ್ಲ. ವರಿಷ್ಠರ ತಂತ್ರಗಳಿಗೆ ಪ್ರತಿತಂತ್ರವನ್ನು ಹೆಣೆದುಕೊಂಡೇ ಸಿದ್ದರಾಮಯ್ಯ ದೆಹಲಿ ವಿಮಾನ ಹತ್ತಿದ್ದರು. ಒಂದೊಮ್ಮೆ ಸಭೆಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಾದರೆ ತಾನು ಯಾವ ದಾಳ ಉರುಳಿಸಬೇಕು ಎಂಬ ಪಕ್ಕಾ ಪ್ಲ್ಯಾನ್ ಸಿದ್ಧಮಾಡಿಕೊಂಡೇ ತೆರಳಿದ್ದರು.
ಆದರೆ ಸಿಎಂ ಭೇಟಿಗೂ ಮುನ್ನ ರಾಹುಲ್ ಗಾಂಧಿ ಎಲ್ಲಾ ವಿವರ ಪಡೆದುಕೊಂಡಿದ್ದು, 2023ರ ಮಾತುಕತೆ ಬಗ್ಗೆ ಎಐಸಿಸಿ ನಾಯಕರು ರಾಹುಲ್ಗೆ ವಿವರಿಸಿದ್ದರು. ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ಈ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟಿದ್ದರು. ಈ ವೇಳೆ ಭರವಸೆ ನೀಡಿದ್ದರೆ ಹಾಗೆ ನಡೆದುಕೊಳ್ಳೋದು ಸೂಕ್ತ ಎಂದು ರಾಹುಲ್ ಗಾಂಧಿಯೂ ಹೇಳಿದ್ದು, ಸಿಎಂ ಜೊತೆಗೆ ಸಭೆ ನಡೆದಾಗಲೂ ಅದನ್ನೇ ರಾಹುಲ್ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಇನ್ನು ಎರಡು ಅವಧಿಯಲ್ಲಿ ಪಕ್ಷ ತಮ್ಮನ್ನು ಗೌರವದಿಂದ ನಡೆಸಿಕೊಂಡಿದೆ, ಹೀಗೆಯೇ ಮುಂದೆಯೂ ಗೌರವದಿಂದ ನಡೆಸಿಕೊಳ್ಳಲಿದೆ. ತಾವು ಮುಂದಿನ ಬೆಳವಣಿಗೆಗೆ ಅವಕಾಶ ಮಾಡಿಕೊಡಿ ಎಂದು ಸಿದ್ದರಾಮಯ್ಯನವರಿಗೆ ರಾಹುಲ್ ಗಾಂಧಿ ತಿಳಿಸಿದ್ದಾರೆ. ಈ ವೇಳೆ ಅಹಿಂದ ಮತ ಹಿಡಿದಿಟ್ಟುಕೊಳ್ಳಲು ತನ್ನ ಮುಂದುವರಿಕೆ ಅಗತ್ಯ ಎಂದು ಸಿದ್ದರಾಮಯ್ಯ ಮನವರಿಕೆ ಯತ್ನ ಮಾಡಿದ್ದರಾದರೂ ಅದನ್ನು ಬ್ಯಾಲೆನ್ಸ್ ಮಾಡಲು ಎಲ್ಲಾ ನಾಯಕರಿಗೂ ಜವಾಬ್ದಾರಿ ಹಂಚಿಕೆ ಮಾಡುವ ಭರವಸೆಯನ್ನು ಈ ವೇಳೆ ರಾಹುಲ್ ನೀಡಿದ್ದಾರೆ.
ಹೀಗಾಗಿ ರಾಹುಲ್ ಗಾಂಧಿ ಮಾತಿಗೆ ಕಟ್ಟುಬಿದ್ದು ಸಿಎಂ ಸ್ಥಾನ ತ್ಯಜಿಸಲು ನಿರ್ಧರಿಸಿರೋದಾಗಿ ಆಪ್ತ ಸಚಿವರ ಬಳಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರಂತೆ. ಜೊತೆಗೆ ಸಿದ್ದರಾಮಯ್ಯಗೆ ರಾಜ್ಯಸಭಾ ಸ್ಥಾನ ಮತ್ತು ಅವರ ಪುತ್ರ, ಎಂಎಲ್ಸಿ ಯತೀಂದ್ರಗೆ ಡಿಸಿಎಂ ಸ್ಥಾನದ ಭರವಸೆಯೂ ನಾಯಕರಿಂದ ಸಿಕ್ಕಿದೆ ಎಂಬ ಮಾಹಿತಿಯೂ ಇದೆ.
