August 26, 2026
kranthikidi.com
ತಾಜಾಸುದ್ದಿದೇಶ

ರಾಮ ಮಂದಿರ ಟ್ರಸ್ಟ್ ಅಧಿಕಾರಿಗಳ ವಿರುದ್ಧ ಮಾಜಿ ಸಿಬ್ಬಂದಿ ಗಂಭೀರ ಆರೋಪ…!

ಅಯೋಧ್ಯೆ : ಅಯೋಧ್ಯೆ ರಾಮ ಮಂದಿರದ ಕೋಟ್ಯಂತರ ರೂಪಾಯಿ ದೇಣಿಗೆ ಕಳ್ಳತನ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ವಿಶೇಷ ತನಿಖಾ ತಂಡ ಈ ದಂಧೆಯ ಆಳ ಜಾಲಾಡುತ್ತಿರುವ ಬೆನ್ನಲ್ಲೇ, ಮಂದಿರದಲ್ಲಿ ಸುಮಾರು 18 ತಿಂಗಳು ಕೆಲಸ ಮಾಡಿದ್ದ ಮಾಜಿ ಉದ್ಯೋಗಿಯೊಬ್ಬರು ನ್ಯೂಸ್ 18 ಇಂಡಿಯಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಟ್ರಸ್ಟ್‌ನ ಉನ್ನತ ಅಧಿಕಾರಿಗಳ ವಿರುದ್ಧ ಗಂಭೀರ ಕಿರುಕುಳ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಮಾಡಿರುವುದು ಹೊಸ ಸಂಚಲನ ಮೂಡಿಸಿದೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಆಪ್ತ ಚಾಲಕ ಹಾಗೂ ಸೇವದಾರನಾಗಿದ್ದ ಟಿನ್ನು ಯಾದವ್ ಎಂಬಾತ ದೇವಸ್ಥಾನದ ನೌಕರರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ. ಆತ ಮತ್ತು ಇತರೆ ಅಧಿಕಾರಿಗಳು ಮಂದಿರದ ನೌಕರರು ಹಾಗೂ ಸೇವಕರಿಂದ ತಮ್ಮ ಪಾದಗಳನ್ನು ಒತ್ತಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದಾರೆ. ಮಾಜಿ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಮತ್ತು ಅಧಿಕಾರಿ ಗೋಪಾಲ್ ರಾಯ್ ಮಂದಿರದ ಒಳಗಿನ ವ್ಯವಹಾರಗಳನ್ನು ತಮಗೆ ಬೇಕಾದಂತೆ ನಡೆಸುತ್ತಾ, ಸಾಮಾನ್ಯ ನೌಕರರಿಗೆ ತೀವ್ರ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಹಲವಾರು ಪ್ರಾಮಾಣಿಕ ಉದ್ಯೋಗಿಗಳು ಕೆಲಸ ಬಿಟ್ಟು ಹೋಗಿದ್ದಾರೆ.

ಮಂದಿರದಲ್ಲಿ ಉದ್ಯೋಗ ಭದ್ರತೆ ಎಂಬುದು ಇರಲಿಲ್ಲ. ಕೇವಲ ಪ್ರಭಾವಿ ವ್ಯಕ್ತಿಗಳ ಸಂಬಂಧಿಕರಿಗೆ ಮಾತ್ರ ಉದ್ಯೋಗ ನೀಡಲಾಗುತ್ತಿತ್ತು. ಅಲ್ಲದೆ, ಮಂದಿರದ ಸಣ್ಣಪುಟ್ಟ ಕಾಮಗಾರಿಗಳ ಕೆಲಸ ಹುಡುಕಿಕೊಂಡು ಬರುವ ಸಣ್ಣ ಕಂಪನಿಗಳಿಂದ ಶೇ. 10 ರಷ್ಟು ಕಮಿಷನ್ ವಸೂಲಿ ಮಾಡಲಾಗುತ್ತಿತ್ತು ಎಂದು ಅವರು ದೂರಿದ್ದಾರೆ. ಆದರೆ ಚಂಪತ್ ರಾಯ್ ವಿರುದ್ಧ ತನಗೆ ಯಾವುದೇ ವೈಯಕ್ತಿಕ ದೂರಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶೌಚಾಲಯದಲ್ಲಿ ಹಣ ಅಡಗಿಸಿಡುತ್ತಿದ್ದ ಖದೀಮರು ಜೈಲು ಸೇರಿರುವ, ದೇಣಿಗೆ ಕಳ್ಳತನದ ಆರೋಪಿಗಳ ಬಗ್ಗೆ ಮಾತನಾಡಿದ ಮಾಜಿ ಸಿಬ್ಬಂದಿ, ನಾನು ಅವರನ್ನು ದೇವಸ್ಥಾನದ ಒಳಗಿನ ಟೀ ಕ್ಯಾಂಟೀನ್‌ನಲ್ಲಿ ಆಗಾಗ ಭೇಟಿಯಾಗುತ್ತಿದ್ದೆ. ಅವರ ನಡವಳಿಕೆ ಮೊದಲಿನಿಂದಲೂ ಅತ್ಯಂತ ಅನುಮಾನಾಸ್ಪದವಾಗಿತ್ತು ಎಂದಿದ್ದಾರೆ. ಎಸ್‌ಐಟಿ ತನಿಖೆಯ ಪ್ರಕಾರ, ಆರೋಪಿಗಳು ಸಿಸಿಟಿವಿ ಕ್ಯಾಮೆರಾಗಳ ಕಣ್ಣು ತಪ್ಪಿಸಿ ಭಾರಿ ಪ್ರಮಾಣದ ಕಾಣಿಕೆ ಹಣವನ್ನು ಕದ್ದು, ದೇವಸ್ಥಾನದ ಶೌಚಾಲಯಗಳಲ್ಲಿ ಅಡಗಿಸಿಡುತ್ತಿದ್ದರು ಎಂಬುದು ಬಯಲಾಗಿದೆ.

ತನಿಖೆ ತೀವ್ರ, ಟ್ರಸ್ಟ್‌ಗೆ ಐಎಎಸ್ ಅಧಿಕಾರಿ ನೇಮಕ ಸಾಧ್ಯತೆ ಪ್ರಕರಣದ ವ್ಯಾಪ್ತಿ ದೊಡ್ಡದಾಗುತ್ತಿರುವುದರಿಂದ ಕಾಣಿಕೆ ಎಣಿಕೆ ಉಸ್ತುವಾರಿ ವಹಿಸಿದ್ದ ವಾರಣಾಸಿ ಮೂಲದ ಭದ್ರತಾ ಸಂಸ್ಥೆಯ ಪಾತ್ರದ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಸುತ್ತಿದೆ. ಇದೇ ವೇಳೆ ಟ್ರಸ್ಟ್‌ನ ಭದ್ರತಾ ವ್ಯವಸ್ಥೆಯ ಕುರಿತು ಚಂಪತ್ ರಾಯ್ ಅವರನ್ನು ಅಧಿಕಾರಿಗಳು ಸುದೀರ್ಘವಾಗಿ ಪ್ರಶ್ನಿಸಿದ್ದಾರೆ. ಮಂದಿರದ ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಇಂತಹ ಆರ್ಥಿಕ ಅಕ್ರಮಗಳು ಮರುಕಳಿಸದಂತೆ ತಡೆಯಲು, ಇನ್ಮುಂದೆ ಒಬ್ಬರು ನಿವೃತ್ತ ಐಎಎಸ್ ಅಧಿಕಾರಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ನೇಮಿಸಲು ಟ್ರಸ್ಟ್ ಗಂಭೀರ ಚಿಂತನೆ ನಡೆಸಿದೆ. ಇದನ್ನೂ ಓದಿ : ತಡರಾತ್ರಿವರೆಗೆ ಸಚಿವ ಕೃಷ್ಣಬೈರೇಗೌಡ ಸಿಟಿ ರೌಂಡ್ಸ್ – ಅಧಿಕಾರಿಗಳಿಗೆ ಫುಲ್‌ ಕ್ಲಾಸ್‌..!

Related posts

‘ವಿಕಸಿತ ಭಾರತಕ್ಕೆ ಮಾದಕ ವ್ಯಸನ ಮುಕ್ತ ಯುವಜನತೆ ಅಗತ್ಯ’ – ಅಭಿಯಾನಕ್ಕೆ ಮೋದಿ ಚಾಲನೆ..!

Kalpana Editor

ಮತ್ತೆ ವಾಣಿಜ್ಯ ಸಿಲಿಂಡರ್‌ ದರ ಏರಿಕೆಗೆ ತೈಲ ಕಂಪನಿಗಳ ನಿರ್ಧಾರ; ಬಳಕೆದಾರರಿಗೆ ಬೆಲೆ ಏರಿಕೆ ಬಿಸಿ..!

Kalpana Editor

ಮಳೆ ಬಂದ್ರೆ ಜೀವಭಯ; ಶಿಥಿಲಗೊಂಡ ಬ್ರೀಮ್ಸ್ ಕಟ್ಟಡದಲ್ಲಿ ನಲುಗುತ್ತಿರೋ ರೋಗಿಗಳು

kknewskannada1987@gmail.com