25.3 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜ್ಯ

ಶಾಲಾ ಮಕ್ಕಳಲ್ಲಿ ಜಂಕ್ ಫುಡ್ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮ – ಆರೋಗ್ಯ ಸಚಿವ ಯು.ಟಿ. ಖಾದರ್

ಬೆಂಗಳೂರು : ಶಾಲಾ ಮಕ್ಕಳ ಆರೋಗ್ಯ ರಕ್ಷಣೆಗೆ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಇನ್ನುಂದೆ ಶಾಲೆ ಹಾಗೂ ಕಾಲೇಜುಗಳ ಆವರಣ ಮತ್ತು ಅವುಗಳ 50 ಮೀಟರ್ ವ್ಯಾಪ್ತಿಯಲ್ಲಿ ಹೆಚ್ಚಿನ ಕೊಬ್ಬು, ಸಕ್ಕರೆ ಹಾಗೂ ಉಪ್ಪು ಹೊಂದಿರುವ ಜಂಕ್ ಫುಡ್ ಮಾರಾಟವನ್ನು ನಿರುತ್ಸಾಹಗೊಳಿಸಿ ಕಟ್ಟುನಿಟ್ಟಿನ ನಿಯಂತ್ರಣ ಜಾರಿಗೊಳಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಮಾರ್ಗಸೂಚಿಗಳ ಅನ್ವಯ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ–2006ರಡಿ ಈ ಕ್ರಮ ಕೈಗೊಳ್ಳಲಾಗಿದೆ. ನಿಯಮ ಉಲ್ಲಂಘಿಸುವ ಆಹಾರ ಉದ್ದಿಮೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಅಗತ್ಯವಿದ್ದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

“ರೋಗ ಬಂದ ನಂತರ ಚಿಕಿತ್ಸೆ ನೀಡುವುದಕ್ಕಿಂತ ರೋಗ ಬಾರದಂತೆ ತಡೆಗಟ್ಟುವುದು ಮುಖ್ಯ. ಮಕ್ಕಳಲ್ಲಿ ಬಾಲ್ಯದಿಂದಲೇ ಆರೋಗ್ಯಕರ ಆಹಾರ ಪದ್ಧತಿ ಬೆಳೆಸಬೇಕು. ನಾವು ಸೇವಿಸುವ ಆಹಾರವೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ,” ಎಂದು ಸಚಿವರು ಹೇಳಿದರು. ರಾಜ್ಯದಲ್ಲಿ ಈಗಾಗಲೇ 134 ಶಾಲೆಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಹಲವು ಕಡೆ ಶಾಲಾ ಕ್ಯಾಂಟೀನ್ ಹಾಗೂ ಸುತ್ತಮುತ್ತ HFSS ಆಹಾರ ಮಾರಾಟವಾಗಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಜುಲೈ 24, 2026ರಂದು ಇಲಾಖೆಯಿಂದ ಸಲಹಾ ಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಗಳ ಅಂಕಿತಾಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಶಾಲೆ-ಕಾಲೇಜು ಆಡಳಿತ ಮಂಡಳಿಗಳು, ಅಂಗಡಿ ಮಾಲೀಕರು, ಪೋಷಕರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಶೇಷ ತಪಾಸಣಾ ಅಭಿಯಾನಗಳನ್ನು ನಡೆಸಿ ನಿಯಮಗಳ ಅನುಷ್ಠಾನವನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿದರು.

ಇದೇ ವೇಳೆ, ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಬಿಸಿ ನೀರು ಒದಗಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ವಿದ್ಯಾರ್ಥಿಗಳಲ್ಲಿ HIV ಜಾಗೃತಿ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗುತ್ತಿದ್ದು, ಹೆರಿಗೆ ಹಾಗೂ ರಕ್ತದಾನದ ವೇಳೆ HIV ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಆಯುಕ್ತ ಗುರುದತ್ ಹಾಗೂ ಆಹಾರ ಸುರಕ್ಷತೆ ಆಯುಕ್ತ ಶ್ರೀನಿವಾಸ್ ಉಪಸ್ಥಿತರಿದ್ದರು. ಇದನ್ನೂ ಓದಿ : ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ಮೋದಿ

Related posts

ಮಾನದಂಡಗಳ ಅನ್ವಯವೇ ಶಾಶ್ವತ ನಿವಾಸ ಪ್ರಮಾಣಪತ್ರ – ಅಕ್ರಮ ನಿವಾಸಿಗಳು ಹೊರಕ್ಕೆ; ಡಿಸಿಎಂ ಜಿ.ಪರಮೇಶ್ವರ್

Kalpana Editor

ಪಿಆರ್​ಸಿ ಜಟಾಪಟಿ; ಆದೇಶ ವಾಪಸ್ ಪಡೆಯುವಂತೆ ಆರ್​​ ಅಶೋಕ್ ಆಗ್ರಹ..!

Kalpana Editor

ಕದನ ವಿರಾಮದ ನಡುವೆ ಮತ್ತೆ ಲೆಬನಾನ್ ಮೇಲೆ ಇಸ್ರೇಲ್ ದಾಳಿ; 5 ಮಂದಿ ಸಾವು..!

Kalpana Editor