25.3 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಬಿಡದಿ ಸ್ಯಾಟಲೈಟ್ ಟೌನ್‌ಶಿಪ್ ನೆಪದಲ್ಲಿ ರೈತರ ಜಮೀನು ಲೂಟಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ರಣಕಹಳೆ ಊದಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ

ಬೆಂಗಳೂರು : “ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಬಿಡದಿ ಭಾಗದಲ್ಲಿ ಸ್ಯಾಟಲೈಟ್ ಟೌನ್‌ಶಿಪ್ ಹೆಸರಿನಲ್ಲಿ ರೈತರ ಫಲವತ್ತಾದ ಜಮೀನುಗಳನ್ನು ಬಲವಂತವಾಗಿ ಕಸಿದುಕೊಳ್ಳುತ್ತಿದ್ದು, ಹೈಕಮಾಂಡ್ ಹೊಟ್ಟೆ ತುಂಬಿಸಲು ರಿಯಲ್ ಎಸ್ಟೇಟ್ ದಂಧೆಗೆ ಇಳಿದಿದ್ದಾರೆ,” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಡದಿ ಭಾಗದ ರೈತರ ಪರವಾಗಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ರೈತರ ಜಮೀನು ಕಸಿಯುವ ಕಾಂಗ್ರೆಸ್‌ನ ಹುಚ್ಚಾಟಿಕೆ ಮತ್ತು ದ್ವಂದ್ವ ನೀತಿ – ರಾಜ್ಯದ ಕಾಂಗ್ರೆಸ್ ಸರ್ಕಾರ ಬಿಡದಿ ಭಾಗದಲ್ಲಿ ರೈತರ ಜಮೀನುಗಳನ್ನು ಒತ್ತಾಯಪೂರ್ವಕವಾಗಿ ಹಾಗೂ ಬಲವಂತವಾಗಿ ಕಸಿದುಕೊಳ್ಳುವ ಮೂಲಕ ಹುಚ್ಚಾಟಿಕೆ ನಡೆಸುತ್ತಿದೆ. ಈ ನಾಡಿಗೆ ಅನ್ನ ನೀಡುವ ರೈತರ ಹಿತ ಕಾಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೃಷಿ ಚಟುವಟಿಕೆಯನ್ನೇ ನೆಚ್ಚಿಕೊಂಡಿರುವ ಬಡ ರೈತ ಕುಟುಂಬಗಳ ನಾಲ್ಕೈದು ಎಕರೆ ಜಮೀನನ್ನು ಕಿತ್ತುಕೊಂಡು ಅವರನ್ನು ಬೀದಿಗೆ ತಳ್ಳಲಾಗುತ್ತಿದೆ. ಆದರೆ, ಇದೇ ಕಾಂಗ್ರೆಸ್ ನಾಯಕರು ಹಾಗೂ ಶಾಸಕರು ಬಿಡದಿ ಭಾಗದಲ್ಲಿ ನೂರಾರು, ಸಾವಿರಾರು ಎಕರೆ ಜಮೀನು ಹೊಂದಲು ಯಾವುದೇ ಅಡ್ಡಿಯಿಲ್ಲದಿರುವುದು ಇವರ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತದೆ.

ಉತ್ತರ ಕರ್ನಾಟಕದ ರೈತರ ಸಂಕಷ್ಟ ಕಡೆಗಣಿಸಿ ರಿಯಲ್ ಎಸ್ಟೇಟ್ ದಂಧೆಗೆ ಆದ್ಯತೆ – ಮುಖ್ಯಮಂತ್ರಿಗಳಿಗೆ ಉತ್ತರ ಕರ್ನಾಟಕದ ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಅಥವಾ ಅವರ ಸಂಕಷ್ಟಗಳಿಗೆ ಸ್ಪಂದಿಸಲು ಪುರುಸೊತ್ತಿಲ್ಲ. ಆದರೆ ಬಿಡದಿ ಟೌನ್‌ಶಿಪ್ ಮತ್ತು ಕನಕಪುರ ಏರ್‌ಪೋರ್ಟ್‌ನಂತಹ ರಿಯಲ್ ಎಸ್ಟೇಟ್ ಆಧಾರಿತ ಯೋಜನೆಗಳ ಮೇಲೆ ಮಾತ್ರ ತೀವ್ರ ಆಸಕ್ತಿ ವಹಿಸುತ್ತಿದ್ದಾರೆ. ಡಿ. ಕೆ. ಶಿವಕುಮಾರ್ ಅವರು “ನನ್ನನ್ನು ಮುಖ್ಯಮಂತ್ರಿ ಮಾಡಿದರೆ ಬಿಡದಿ ಟೌನ್‌ಶಿಪ್ ಮಾಡುತ್ತೇನೆ ಮತ್ತು ಡಿಎಲ್‌ಎಫ್ ಸಂಸ್ಥೆಗೆ ಅವಕಾಶ ಮಾಡಿಕೊಡುತ್ತೇನೆ” ಎಂದು ಕಾಂಗ್ರೆಸ್ ಹೈಕಮಾಂಡ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಇವತ್ತು ರೈತರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ.

ರೈತ ಕುಟುಂಬಗಳ ಮೇಲೆ ಗುಂಡಾಗಿರಿ ಮತ್ತು ಸರ್ಕಾರದ ದರ್ಪ – ಜಮೀನು ನೀಡಲು ಒಪ್ಪದ ಅಮಾಯಕ ರೈತ ಕುಟುಂಬಗಳ ಮನೆಗೆ ರಾತ್ರೋರಾತ್ರಿ ಗುಂಡಾಗಳನ್ನು ಕಳುಹಿಸಿ, “ನಿಮಗೆ ಉಳಿಗಾಲವಿಲ್ಲ” ಎಂದು ಪ್ರಾಣ ಬೆದರಿಕೆ ಹಾಕಲಾಗುತ್ತಿದೆ. ಒಂದೆಡೆ ರೈತರಿಂದ ಬಲವಂತವಾಗಿ ಜಮೀನು ಕಸಿದುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡುತ್ತಾ, ಮತ್ತೊಂದೆಡೆ ತಮಗಾಗಿ ಹೋರಾಡುತ್ತಿರುವ ರೈತರ ಮೇಲೆಯೇ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರನ್ನು ಜೈಲಿಗಟ್ಟುವ ಕುತಂತ್ರವನ್ನು ಸರ್ಕಾರ ಮಾಡುತ್ತಿದೆ. ಅಧಿಕಾರದ ಮದ ಮತ್ತು ದರ್ಪದಿಂದ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ.

ಅಸ್ತಿತ್ವದಲ್ಲೂ ಇಲ್ಲದ ಕೃಷಿ ಸಚಿವರು – ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಇಷ್ಟು ತಿಂಗಳುಗಳಾದರೂ ರಾಜ್ಯಕ್ಕೆ ಒಬ್ಬ ಸಮರ್ಥ ಕೃಷಿ ಸಚಿವರು ಯಾರೆಂದೇ ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿರುವ ಮುಖ್ಯಮಂತ್ರಿಗಳು ತಮ್ಮ ಕೃಷಿ ಇಲಾಖೆಯನ್ನು ಸಂಪೂರ್ಣ ಬದಿಗಿಟ್ಟು, ತಮ್ಮ ಇಲಾಖೆಯ ಹೆಸರನ್ನು ‘ರಿಯಲ್ ಎಸ್ಟೇಟ್ ಕಾಂಗ್ರೆಸ್ ಇಲಾಖೆ’ ಎಂದು ಬದಲಾಯಿಸಿಕೊಂಡರೆ ಮಾತ್ರ ಇಲಾಖೆಗೆ ನ್ಯಾಯ ಒದಗಿಸಲು ಸಾಧ್ಯ ಎಂದು ವಿಜಯೇಂದ್ರ ಅವರು ತೀಕ್ಷ್ಣವಾಗಿ ಲೇವಡಿ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರ ಮೌನಕ್ಕೆ ತೀವ್ರ ಪ್ರಶ್ನೆ – ದೇಶಾದ್ಯಂತ ‘ಭಾರತ್ ಜೋಡೋ’ ಯಾತ್ರೆ ನಡೆಸಿ ರೈತರ ರಕ್ಷಣೆ ಮಾಡುತ್ತೇನೆ ಎಂದಿದ್ದ ರಾಹುಲ್ ಗಾಂಧಿ ಅವರು ಕರ್ನಾಟಕದ ರೈತರ ಮೇಲಾಗುತ್ತಿರುವ ಇಷ್ಟೊಂದು ದೊಡ್ಡ ದೌರ್ಜನ್ಯದ ವಿರುದ್ಧ ಇವತ್ತು ಸಂಪೂರ್ಣ ಮೌನ ವಹಿಸಿ ನಾಪತ್ತೆಯಾಗಿದ್ದಾರೆ. ರಾಹುಲ್ ಗಾಂಧಿ ಅವರು ತಕ್ಷಣವೇ ತಮ್ಮ ಪರಮಾಪ್ತ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿ ರೈತರ ಮೇಲಿನ ಮೊಕದ್ದಮೆಗಳನ್ನು ಕೈಬಿಡಬೇಕು ಹಾಗೂ ಬಿಡದಿ ಟೌನ್‌ಶಿಪ್ ಯೋಜನೆಯಿಂದ ಸರ್ಕಾರ ಹಿಂದೆ ಸರಿಯುವಂತೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ಅಂತಿಮ ಎಚ್ಚರಿಕೆ – ನ್ಯಾಯ ಸಿಗುವವರೆಗೂ ನಿರಂತರ ಹೋರಾಟ, ರೈತರ ಶಾಪಕ್ಕೆ ಒಳಗಾದ ಯಾವುದೇ ಸರ್ಕಾರಗಳು ಇತಿಹಾಸದಲ್ಲಿ ಬದುಕುಳಿದಿಲ್ಲ. ಬಿಡದಿ ಭಾಗದ ರೈತರಿಗೆ ನ್ಯಾಯ ಸಿಗುವವರೆಗೂ ಭಾರತೀಯ ಜನತಾ ಪಾರ್ಟಿ ವಿಶ್ರಮಿಸುವುದಿಲ್ಲ. ರೈತ ನಾಯಕ ಬಿ. ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ಇಡೀ ಬಿಜೆಪಿ ಒಗ್ಗಟ್ಟಾಗಿ ನಿಂತಿದ್ದು, ಸದನದ ಒಳಗೂ ಮತ್ತು ಹೊರಗೂ ಸರ್ಕಾರದ ವಿರುದ್ಧ ನಿರಂತರವಾಗಿ ಈ ಹೋರಾಟ ಮುಂದುವರಿಯಲಿದೆ ಎಂದು ಬಿ. ವೈ. ವಿಜಯೇಂದ್ರ ಅವರು ಸರ್ಕಾರಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ : ನಮ್ಮ ಮೆಟ್ರೋದ 191 ನಿಲ್ದಾಣಗಳಲ್ಲಿ ಸುರಕ್ಷತೆಗೆ ಪಿಎಸ್ಡಿ ಡೋರ್ ಅಳವಡಿಕೆ..!

Related posts

ಎಸ್‌ಐಆರ್‌ ಅರ್ಜಿಗಳು ಬೀದಿಯಲ್ಲಿ ವಿತರಣೆ; ಬಾಂಗ್ಲಾ ನಿವಾಸಿಗಳನ್ನು ಮತದಾರರ ಪಟ್ಟಿಗೆ ಸೇರಿಸುವ ಷಡ್ಯಂತ್ರ ಮಾಡಿದ ಕಾಂಗ್ರೆಸ್‌ – ಆರ್‌.ಅಶೋಕ

Kalpana Editor

ಶಾಲಾ ಮಕ್ಕಳಲ್ಲಿ ಜಂಕ್ ಫುಡ್ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮ – ಆರೋಗ್ಯ ಸಚಿವ ಯು.ಟಿ. ಖಾದರ್

Kalpana Editor

ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದ ಸಾವು..!

Kalpana Editor