August 27, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಸಮಾವೇಶದಿಂದ ನೀಟ್‌ ಪರೀಕ್ಷೆಯ ವಿದ್ಯಾರ್ಥಿಗಳಿಗೆ ತೊಂದರೆ; ಬಿಜೆಪಿ ವಿರುದ್ಧ ಬಿಕೆಹೆಚ್‌ ವಾಗ್ದಾಳಿ..!

ಬೆಂಗಳೂರು : ನಮ್ಮ ಕಾರ್ಯಕ್ರಮದಿಂದಾಗಿ ನೀಟ್ ಪರೀಕ್ಷೆಯ ವಿದ್ಯಾರ್ಥಿಗಳಿಗೆ ಏನಾದರೂ ತೊಂದರೆಯಾಗಿದ್ದರೆ ನಾನು ವೈಯಕ್ತಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್‌ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣದ ಸಮಾವೇಶದಿಂದಾಗಿ ನೀಟ್ ಪರೀಕ್ಷೆಯ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ಹಾಗೂ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹರಿಪ್ರಸಾದ್ ಕಠಿಣ ಪದಗಳಲ್ಲಿ ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಸರಣಿ ತಪ್ಪು ಮಾಹಿತಿ ನೀಡುವ ಸುಳ್ಳಿನ ಫ್ಯಾಕ್ಟರಿ ಇಟ್ಟುಕೊಂಡಿದ್ದಾರೆ. ತಮ್ಮದೇ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು. ನಿನ್ನೆ ಬೆಂಗಳೂರಿನಲ್ಲಿ ನಡೆದ ಸಂಕಲ್ಪ ಸಮಾವೇಶದ ವೇಳೆ ನಗರದಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ನಿಜ, ಇದರಿಂದ ಸಾರ್ವಜನಿಕರಿಗೆ ಸಣ್ಣಪುಟ್ಟ ತೊಂದರೆಗಳಾಗಿವೆ. ನಮ್ಮ ಕಾರ್ಯಕ್ರಮದಿಂದಾಗಿ ನೀಟ್ ಪರೀಕ್ಷೆಯ ವಿದ್ಯಾರ್ಥಿಗಳಿಗೆ ಏನಾದರೂ ತೊಂದರೆಯಾಗಿದ್ದರೆ ನಾನು ವೈಯಕ್ತಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ.

ಆದರೆ, ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಈ ವಿಚಾರದಲ್ಲಿ ಶುದ್ಧ ಸುಳ್ಳು ಮತ್ತು ತಪ್ಪು ಸಂದೇಶ ಹರಡುತ್ತಿದ್ದಾರೆ. ನೀಟ್ ಪರೀಕ್ಷೆ ಆರಂಭವಾಗಿದ್ದು ಮಧ್ಯಾಹ್ನ 2 ಗಂಟೆಗೆ. ಆದರೆ ನಮ್ಮ ಸಮಾವೇಶಕ್ಕೆ ಬಂದಿದ್ದ ಎಲ್ಲ ಬಸ್‌ಗಳು ಬೆಳಿಗ್ಗೆ 10 ಗಂಟೆಯ ಒಳಗೇ ಅರಮನೆ ಮೈದಾನದ ಆವರಣ ಪ್ರವೇಶಿಸಿದ್ದವು. ಹೀಗಿದ್ದರೂ ಕಾಂಗ್ರೆಸ್‌ನಿಂದಲೇ ಪರೀಕ್ಷೆ ಮಿಸ್ ಆಗಿದೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ ಎಂದು ದೂರಿದರು.

ಕೇವಲ ಬೆಂಗಳೂರು ಮಾತ್ರವಲ್ಲದೆ ಮಂಗಳೂರು, ಯಾದಗಿರಿ, ಮೈಸೂರಿನಲ್ಲೂ ಸಹ ಅಸಂಖ್ಯಾತ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ, ಹಲವರಿಗೆ ಪರೀಕ್ಷೆ ಮಿಸ್ ಆಗಿದೆ. ಹಾಗಾದರೆ ಅಲ್ಲಿ ಯಾವ ಕಾಂಗ್ರೆಸ್ ಕಾರ್ಯಕ್ರಮ ಇತ್ತು? ಅಲ್ಲಿ ಟ್ರಾಫಿಕ್ ಜಾಮ್ ಮಾಡಲು ಯಾರು ಹೋಗಿದ್ದರು? ದೇಶಾದ್ಯಂತ ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿ ಆಗಿರುವ ಭೀಕರ ಲೋಪಗಳು ಮತ್ತು ಗೊಂದಲಗಳಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗದೆ ವಂಚಿತರಾಗಿದ್ದಾರೆ. ಇದನ್ನು ಮುಚ್ಚಿಹಾಕಲು ಇವರು ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಹರಿಪ್ರಸಾದ್, ಪ್ರಧಾನಿ ನರೇಂದ್ರ ಮೋದಿ ಅವರು ನಕಲಿ ಪದವಿ ಪ್ರಮಾಣಪತ್ರ ಇಟ್ಟುಕೊಂಡಿರುವ ಮನುಷ್ಯ. ಅವರು ಜೀವನದಲ್ಲಿ ಯಾವುದೇ ಕಠಿಣ ಪರೀಕ್ಷೆಗಳನ್ನು ಎದುರಿಸಿದವರಲ್ಲ. ದೇಶದ ವಿದ್ಯಾರ್ಥಿಗಳ ಜೊತೆ ‘ಪರೀಕ್ಷಾ ಪೇ ಚರ್ಚಾ’ ಅಂತ ದೊಡ್ಡ ದೊಡ್ಡ ಮಾತುಗಳನ್ನಾಡುವ ಪ್ರಧಾನಿ, ಇಷ್ಟು ದೊಡ್ಡ ಮಟ್ಟದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರೂ ಈವರೆಗೆ ಬಾಯಿ ಬಿಟ್ಟಿಲ್ಲ. ಇಂತಹವರಿಂದಾಗಲಿ ಅಥವಾ ಕುಮಾರಸ್ವಾಮಿಯವರಿಂದಾಗಲಿ ನಾವು ಆಡಳಿತ ಕಲಿಯಬೇಕಿಲ್ಲ. ಮೊದಲು ಇವರೆಲ್ಲ ಪೇಪರ್ ಲೀಕ್ ಹಗರಣಕ್ಕೆ ದೇಶದ ಜನರಿಗೆ ಉತ್ತರ ಕೊಡಲಿ, ಆಮೇಲೆ ಕಾಂಗ್ರೆಸ್ ಕಡೆ ಬೆರಳು ಮಾಡಲಿ ಎಂದು ಕಿಡಿಕಾರಿದರು.

ನೀಟ್ ಪರೀಕ್ಷೆಯು ಪದೇ ಪದೇ ಮುಂದೂಡಲ್ಪಟ್ಟು ಇಡೀ ದೇಶದ ವಿದ್ಯಾರ್ಥಿಗಳ ಭವಿಷ್ಯ ಕತ್ತಲಿಗೆ ತಳ್ಳಲ್ಪಟ್ಟಿದೆ. ಪರೀಕ್ಷಾ ಅಕ್ರಮ ಹಾಗೂ ಗೊಂದಲಗಳಿಂದ ಬೇಸತ್ತು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಪ್ರಧಾನಿಯಾಗಲಿ ಅಥವಾ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಆಗಲಿ ಯಾವುದೇ ಸಾಂತ್ವನ ಹೇಳಿಲ್ಲ ಎಂದು ದೂರಿದರು. ನೀಟ್ ಪರೀಕ್ಷಾ ಗೊಂದಲಗಳಿಂದ ರಾಜ್ಯದಲ್ಲಿ ತೊಂದರೆಗೊಳಗಾದ ವಿದ್ಯಾರ್ಥಿಗಳ ಸಂಕಷ್ಟ ಕೇಳಲು ನಮ್ಮ ಪಕ್ಷದಿಂದ ಒಂದು ವಿಶೇಷ ‘ಸಹಾಯ ಹಸ್ತ ತಂಡ’ ರಚನೆ ಮಾಡುತ್ತಿದ್ದೇವೆ. ನಮ್ಮ ತಂಡವು ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳನ್ನು ಖುದ್ದಾಗಿ ಸಂಪರ್ಕಿಸಿ, ಅವರಿಗೆ ಬೇಕಾದ ಕಾನೂನು ನೆರವು, ಸೂಕ್ತ ಸಲಹೆ ಹಾಗೂ ಎಲ್ಲ ರೀತಿಯ ಸಹಕಾರ ನೀಡಲು ಬದ್ಧವಾಗಿದೆ ಎಂದು ಹರಿಪ್ರಸಾದ್‌ ಪ್ರಕಟಿಸಿದರು. ಇದನ್ನೂ ಓದಿ : ಮತ್ತೆ ಎಂಇಎಸ್ ಪುಂಡಾಟ; ಸರ್ಕಾರದ ಕನ್ನಡ ಕಡ್ಡಾಯ ಆದೇಶದ ಪ್ರತಿ ಹರಿದು ಉದ್ಧಟತನ..!

Related posts

ತಡರಾತ್ರಿವರೆಗೆ ಸಚಿವ ಕೃಷ್ಣಬೈರೇಗೌಡ ಸಿಟಿ ರೌಂಡ್ಸ್ – ಅಧಿಕಾರಿಗಳಿಗೆ ಫುಲ್‌ ಕ್ಲಾಸ್‌..!

Kalpana Editor

ತ್ರಿಷಾ ವಿರುದ್ಧ ಉದಯನಿಧಿ ವಿವಾದಾತ್ಮಕ ಹೇಳಿಕೆ; ಮಹಿಳಾ ಆಯೋಗದ ಮೊರೆ ಹೋದ ಟಿವಿಕೆ..!

kknewskannada1987@gmail.com

ಮಾಜಿ ಶಾಸಕ, ಜಾಫರ್ ಶರೀಫ್ ಅಳಿಯ ಸೈಯದ್ ಯಾಸಿನ್ ನಿಧನ..!

Kalpana Editor