21.5 C
ಬೆಂಗಳೂರು
September 22, 2026
kranthikidi.com
ತಾಜಾಸುದ್ದಿದೇಶರಾಜಕೀಯ

ಹಳೆ ಬೇರು, ಹೊಸ ಚಿಗುರು ಫಾರ್ಮುಲಾ; ಯುವ ನಾಯಕರಿಗೆ ಮಂತ್ರಿಗಿರಿ ಪಟ್ಟಾ..?!

ನವದೆಹಲಿ : ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟ ರಚನೆಯ ಕಸರತ್ತು ಅಂತಿಮ ಘಟ್ಟಕ್ಕೆ ತಲುಪಿದೆ. ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ಇಂದು ಮಹತ್ವದ ಸಭೆ ನಡೆಯಲಿದ್ದು ಬಹುತೇಕ ಇಂದು ಸಂಜೆಯ ವೇಳೆಗೆ ಸಚಿವರ ಅಂತಿಮ ಪಟ್ಟಿ ಸಿದ್ಧವಾಗುವ ಸಾಧ್ಯತೆಯಿದೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರ ನೇತೃತ್ವದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಅವರ ಅಧಿಕೃತ ನಿವಾಸದಲ್ಲಿ ಈ ಸಭೆ ನಡೆಯಲಿದೆ. ಸಭೆಯಲ್ಲಿ ಕಾಂಗ್ರೆಸ್ ಅಗ್ರ ನಾಯಕ ರಾಹುಲ್ ಗಾಂಧಿ, ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಭಾಗಿಯಾಗಲಿದ್ದಾರೆ.

ವರಿಷ್ಠರು ಈ ಬಾರಿ ವಿಶೇಷ ಸೂತ್ರವನ್ನು ಅನುಸರಿಸುತ್ತಿದ್ದಾರೆ ಎನ್ನಲಾಗಿದೆ. ಸಂಪುಟದಲ್ಲಿ ‘ಹಳೆ ಬೇರು, ಹೊಸ ಚಿಗುರು’ ಫಾರ್ಮುಲಾ ಅನ್ವಯಿಸಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ. ಇದರಂತೆ ಅನುಭವಿ ಹಿರಿಯ ನಾಯಕರ ಜೊತೆಗೆ ಯುವ ಮತ್ತು ಹೊಸ ಮುಖಗಳಿಗೂ ಹೆಚ್ಚಿನ ಆದ್ಯತೆ ಸಿಗಲಿದೆ.

ಸುಮಾರು 8 ರಿಂದ 10 ಹೊಸ ಶಾಸಕರಿಗೆ ಈ ಬಾರಿ ಮಂತ್ರಿಭಾಗ್ಯ ಒಲಿಯುವ ಸಾಧ್ಯತೆಯಿದ್ದು, ಎಷ್ಟು ಯುವ ಮುಖಗಳಿಗೆ ಹೈಕಮಾಂಡ್ ಮಣೆ ಹಾಕಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಹೈಕಮಾಂಡ್ ಎರಡು ಹಂತಗಳಲ್ಲಿ ಸಂಪುಟ ರಚನೆ ಮಾಡಲು ಕರಡು ಸಿದ್ಧಪಡಿಸಿದೆ.

ಮೊದಲ ಹಂತದಲ್ಲಿ ಕೇವಲ 8 ರಿಂದ 10 ಅಥವಾ 10 ರಿಂದ 12 ಪ್ರಮುಖ ಶಾಸಕರು ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಂಬರುವ ವಿಧಾನ ಪರಿಷತ್ ಹಾಗೂ ರಾಜ್ಯಸಭೆ ಚುನಾವಣೆಗಳು ಮುಗಿದ ನಂತರ, ಬಾಕಿ ಉಳಿದಿರುವ ಸ್ಥಾನಗಳನ್ನು ಭರ್ತಿ ಮಾಡುವ ಮೂಲಕ ಎರಡನೇ ಹಂತದಲ್ಲಿ ಸಂಪುಟ ವಿಸ್ತರಣೆ ಮಾಡಲು ವರಿಷ್ಠರು ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗುತ್ತಿದೆ.

Related posts

ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ದಿಢೀರ್‌ ರಾಜೀನಾಮೆ..!

kknewskannada1987@gmail.com

ನಟಿ ಶುಭಾ ಪೂಂಜಾ ವೈವಾಹಿಕ ಜೀವನದಲ್ಲಿ ಬಿರುಗಾಳಿ; ವಿಚ್ಛೇದನಕ್ಕೆ ಮೊರೆ ಹೋದ ದಂಪತಿ

Kalpana Editor