ಬೆಂಗಳೂರು : ರಾಜಧಾನಿಯ ಅತ್ಯಂತ ಗಿಜಿಗುಡುವ ಹಾಗೂ ಸೂಕ್ಷ್ಮ ಪ್ರದೇಶವಾದ ಶಿವಾಜಿನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಜಿಬಿಎ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆ ಪುಂಡರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದೆ. ಬಸ್ ಸ್ಟ್ಯಾಂಡ್ ಬಳಿ ಬೆಳಿಗ್ಗೆಯಿಂದ ತೆರವು ಕಾರ್ಯಾಚರಣೆ ನಡೆಯುತ್ತಿದ್ದಾಗ, ಮಧ್ಯಾಹ್ನ 12:30ರ ಸುಮಾರಿಗೆ ಇನ್ನೋವಾ ಕಾರಿನಲ್ಲಿ ಬಂದ ಬಸವರಾಜ್ ಪಡುಕೋಟೆ ಹಾಗೂ ಆತನ ಗ್ಯಾಂಗ್ ಏಕಾಏಕಿ ಅಧಿಕಾರಿಗಳ ಮೇಲೆ ಮುಗಿಬಿದ್ದಿದೆ.
ಸಹಾಯಕ ಕಾರ್ಯಪಾಲಕ ಅಭಿಯಂತರ ಮಾಧವ್ ರಾವ್ ಅವರ ಮೇಲೆ ಅಪರಿಚಿತರು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದು, ತಳ್ಳಿದ ರಭಸಕ್ಕೆ ಅಧಿಕಾರಿ ಕೆಳಗೆ ಬಿದ್ದಿದ್ದಾರೆ. ಅಲ್ಲದೆ ಹೆಲ್ಮೆಟ್ ಹಾಗೂ ಪ್ಲಾಸ್ಟಿಕ್ ಚೇರ್ಗಳಿಂದ ಮನಸೋಇಚ್ಛೆ ಹೊಡೆಯಲಾಗಿದೆ. ‘ನಮ್ಮ ಕರ್ನಾಟಕ ಸೇನೆ’ ಸಂಘಟನೆಯ ಬಸವರಾಜ್ ಪಡುಕೋಟೆ ಹಾಗೂ ಆತನ ಬೆಂಬಲಿಗರು ಮಹಿಳಾ ಅಧಿಕಾರಿಯೊಬ್ಬರ ಮುಖದ ಹತ್ತಿರವೇ ಬಂದು ಪೆಪ್ಪರ್ ಸ್ಪ್ರೇ ಮಾಡಿ ಭಯಾನಕ ವಾತಾವರಣ ಸೃಷ್ಟಿಸಿದ್ದಾರೆ.
ಮುಖದ ಹತ್ತಿರ ಬಂದು ಪೆಪ್ಪರ್ ಸ್ಪ್ರೇ ಮಾಡಿದ್ರು. ನಾವು ಜೀವಭಯದಿಂದ ಓಡಿ ಅಡಗಿಕೊಂಡೆವು. ನಮಗೆ ಕೆಲಸ ಮಾಡಲು ಭಯವಾಗುತ್ತಿದೆ, ತಕ್ಷಣ ಸೂಕ್ತ ರಕ್ಷಣೆ ಬೇಕು” ಎಂದು ಮಹಿಳಾ ಅಧಿಕಾರಿ ಸಾವಿತ್ರಿ ಪಬ್ಲಿಕ್ ಟಿವಿ ಮುಂದೆ ನೋವು ತೋಡಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ನಾಲ್ಕು ಜನ ಪೊಲೀಸರಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನೆ ವೀಡಿಯೋ ಮಾಡುತ್ತಾ ನಿಂತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸೂಕ್ಷ್ಮ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವಾಗ ಪೊಲೀಸರು ಅಲರ್ಟ್ ಆಗಿರಬೇಕಿತ್ತು ಎಂದು ಜಿಬಿಎ ಸಿಬ್ಬಂದಿ ಆಕ್ರೋಶ ಹೊರಹಾಕಿದ್ದಾರೆ.
ಜಿಬಿಎ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಅವರು ಮಾತನಾಡಿ, ಬಸವರಾಜ್ ಪಡುಕೋಟೆ ಕನ್ನಡಪರ ಸಂಘಟನೆಯ ಹೆಸರು ಹೇಳಿಕೊಂಡು ಸ್ಥಳೀಯ ವ್ಯಾಪಾರಿಗಳಿಂದ ನಿಯಮಿತವಾಗಿ ಮಾಮೂಲಿ ವಸೂಲಿ ಮಾಡುತ್ತಿದ್ದ. ಒತ್ತುವರಿ ತೆರವುಗೊಂಡರೆ ಆತನ ಹಫ್ತಾ ಬಂದ್ ಆಗುತ್ತದೆ ಎಂಬ ಕಾರಣಕ್ಕೆ ಈ ಮಾರಣಾಂತಿಕ ದಾಳಿ ನಡೆಸಿದ್ದಾನೆ” ಎಂದು ನೇರ ಆರೋಪ ಮಾಡಿದ್ದಾರೆ.
ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಜಿಬಿಎ ನೌಕರರ ಸಂಘವು ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಹಲ್ಲೆ ನಡೆಸಿದ ಬಸವರಾಜ್ ಪಡುಕೋಟೆ ಸೇರಿದಂತೆ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ತಪ್ಪಿತಸ್ಥರನ್ನು ಬಂಧಿಸದಿದ್ದರೆ ನಾಳೆಯಿಂದ ಎಸ್ಐಆರ್ ಮತ್ತು ಫುಟ್ಪಾತ್ ತೆರವು ಕಾರ್ಯಾಚರಣೆ ಸೇರಿದಂತೆ ಎಲ್ಲಾ ಕೆಲಸಗಳನ್ನು ಬಂದ್ ಮಾಡಿ ಮುಷ್ಕರ ನಡೆಸಲಾಗುವುದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ : ಫುಟ್ಪಾತ್ ತೆರವಿಗೆ ಜನರು ಸಹಕಾರ ಕೊಡಬೇಕು – ಡಿಸಿಎಂ ಜಿ. ಪರಮೇಶ್ವರ್
