20.8 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿರಾಜ್ಯ

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಬಹಳ ಗಂಭೀರ ವಿಷಯ; ಕರ್ನಾಟಕ ಹೈಕೋರ್ಟ್​​

ಬೆಂಗಳೂರು : ವಿದೇಶಿ ಮಹಿಳೆಯ ಮೇಲೆ ಭಾರತದಲ್ಲಿ ಅತ್ಯಾಚಾರ ನಡೆದಿರುವ ಆರೋಪ ಅತ್ಯಂತ ಗಂಭೀರ ವಿಷಯ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಕೊಡಗಿನ ಕುಟ್ಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಂಸ್ಟೇ ಮಾಲೀಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ.

ಏಪ್ರಿಲ್​​ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ, ಮಾದಕ ವಸ್ತು ನೀಡಿ ಪ್ರಜ್ಞೆ ತಪ್ಪಿಸಿ ಹೋಂಸ್ಟೇಯಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು 33 ವರ್ಷದ ಅಮೆರಿಕ ಮೂಲದ ಮಹಿಳೆ ಆರೋಪಿಸಿದ್ದರು. ಈ ಸಂಬಂಧ ಹೋಂಸ್ಟೇ ಮಾಲೀಕ ವಿಶಾಲ್ ಪೊನ್ನಣ್ಣ ಹಾಗೂ ಕೆಲಸಗಾರ ಬ್ರಿಜೇಶ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಇದು ಗಂಭೀರ ಪ್ರಕರಣವಾಗಿರುವ ಹಿನ್ನೆಲೆ ತನಿಖಾ ದಾಖಲೆಗಳನ್ನು ಬುಧವಾರದೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.

ಆರೋಪಿಸಲಾದ ಅಪರಾಧಗಳು ಜಾಮೀನು ದೊರೆಯುವ ಸ್ವರೂಪದವು ಎಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಅಲ್ಲದೆ, ಎಫ್‌ಐಆರ್ ದಾಖಲಾಗುವ ಮೊದಲು ತಮ್ಮ ಕಕ್ಷಿದಾರರಿಗೆ ಯಾವುದೇ ಆರೋಪದ ಕುರಿತು ಮಾಹಿತಿ ನೀಡಲಾಗಿರಲಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು. ದೂರುದಾರರು ಏಪ್ರಿಲ್ 12ರಂದು ಆರೋಪಿಯನ್ನು ಹೋಂಸ್ಟೇ ಸಿಬ್ಬಂದಿ ಎಂದು ಗುರುತಿಸಿದ್ದರೇ ಹೊರತು, ಅರ್ಜಿದಾರರನ್ನು ಆರೋಪಿಸಿರಲಿಲ್ಲ ಎನ್ನಲಾಗಿದೆ. ಇದನ್ನೂ ಓದಿ : ಬಿಟ್‌ಕಾಯಿನ್ ಹಗರಣ; ನಲಪಾಡ್‌ ಹಣ ಪಡೆದ ಬಗ್ಗೆ SIT ಚಾರ್ಜ್​ಶೀಟಲ್ಲಿ ಉಲ್ಲೇಖ..!

ಹೀಗಾಗಿ ಏಪ್ರಿಲ್ 19ರಿಂದ ಮೇ 2ರವರೆಗೆ ಕಕ್ಷಿದಾರರ ಬಂಧನ ಕಾನೂನುಬಾಹಿರವಾಗಿದ್ದು, ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದರು. ಹೀಗಾಗಿ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿ ನಾಗಪ್ರಸನ್ನ, ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗಿವೆಯೇ ಎಂಬುದನ್ನು ನಾವು ಪರಿಶೀಲಿಸುತ್ತೇವೆ. ಮೊದಲು ತನಿಖಾ ದಾಖಲೆಗಳನ್ನು ಸಲ್ಲಿಸಿ ಎಂದು ಸೂಚಿಸಿದ್ದಾರೆ.

ಅಲ್ಲದೆ ಬೇರೆ ದೇಶದ ಪ್ರಜೆಯೊಬ್ಬರ ಮೇಲೆ ಇಲ್ಲಿ ಅತ್ಯಾಚಾರ ನಡೆದಿದ್ದರೆ, ಅದು ಅತ್ಯಂತ ಗಂಭೀರ ಅಪರಾಧವಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ಇದು ತಕ್ಷಣವೇ ಸಂಪೂರ್ಣ ತಡೆಯಾಜ್ಞೆ ನೀಡಬಹುದಾದ ಪ್ರಕರಣವಲ್ಲ. ತನಿಖಾ ದಾಖಲೆಗಳನ್ನು ಪರಿಶೀಲಿಸಬೇಕಿದೆ ಎಂದೂ ಅವರು ಈ ವೇಳೆ ತಿಳಿಸಿದ್ದಾರೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

Related posts

ಪರಪ್ಪನ ಅಗ್ರಹಾರದಲ್ಲಿ ಸಿಸಿಬಿ ರೇಡ್ ಮಾಡಿಸಿದ್ದು ನಾನೇ – ಪ್ರಿಯಾಂಕ್ ಖರ್ಗೆ

kknewskannada1987@gmail.com

ಮದ್ಯದಂಗಡಿಗೆ ನುಗ್ಗಿದ ಚಿರತೆ, ಮೂವರ ಮೇಲೆ ಭೀಕರ ದಾಳಿ..!

Kalpana Editor

ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಅಪಘಾತಕ್ಕೆ ವ್ಯಕ್ತಿ ಬಲಿ..!

Kalpana Editor