ಬೆಂಗಳೂರು : ಮುಂಬರುವ ಗ್ರೇಟರ್ ಬೆಂಗಳೂರು ಆಡಳಿತ (ಜಿಬಿಎ) ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಮ್ ಆದ್ಮಿ ಪಕ್ಷ (ಎಎಪಿ) ತನ್ನ “ಬೆಂಗಳೂರು ಉಳಿಸಿ” ಹಸಿರು ಕಾರ್ಯಸೂಚಿ ಪ್ರಣಾಳಿಕೆಯನ್ನು ನಗರದ ಪ್ರೆಸ್ ಕ್ಲಬ್‌ನಲ್ಲಿ ಬಿಡುಗಡೆ ಮಾಡಿತು.
ಕಾರ್ಯಕ್ರಮದಲ್ಲಿ ಎಎಪಿ ರಾಜ್ಯ ಉಸ್ತುವಾರಿ ಋತುರಾಜ್ ಗೋವಿಂದ್ ಝಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿ, ಬೆಂಗಳೂರು ಕೇವಲ ಒಂದು ನಗರವಲ್ಲ, ಅದು ಲಕ್ಷಾಂತರ ಜನರ ಮನೆ, ಉದ್ಯೋಗ, ಶಿಕ್ಷಣ ಹಾಗೂ ಭವಿಷ್ಯದ ಕೇಂದ್ರವಾಗಿದೆ ಎಂದು ಹೇಳಿದರು. ಒಮ್ಮೆ “ಗಾರ್ಡನ್ ಸಿಟಿ” ಎಂದು ಖ್ಯಾತಿಯಾಗಿದ್ದ ಬೆಂಗಳೂರು ಇಂದು ಸಂಚಾರ ದಟ್ಟಣೆ, ಮಾಲಿನ್ಯ, ನೀರಿನ ಕೊರತೆ, ಪ್ರವಾಹ ಹಾಗೂ ಕಸದ ಸಮಸ್ಯೆಗಳಿಂದ ಬಳಲುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕಳೆದ ಮೂರು ದಶಕಗಳಲ್ಲಿ ಆಡಳಿತ ನಡೆಸಿದ ಸರ್ಕಾರಗಳು ನಗರದ ದೀರ್ಘಕಾಲೀನ ಹಿತಾಸಕ್ತಿಗಿಂತ ಕೆಲವು ಪ್ರಭಾವಿ ಗುಂಪುಗಳ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದೇ ಇಂದಿನ ಸಮಸ್ಯೆಗಳಿಗೆ ಕಾರಣ ಎಂದು ಆರೋಪಿಸಿದ ಅವರು, ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಎಎಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮತದಾರರಿಗೆ ಮನವಿ ಮಾಡಿದರು.
ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಮಾತನಾಡಿ, ಕಸ ನಿರ್ವಹಣೆಯಲ್ಲಿನ ಮಾಫಿಯಾ ವ್ಯವಸ್ಥೆ, ನೀರಿನ ಸಮಸ್ಯೆಯಿಂದ ಲಾಭ ಪಡೆಯುತ್ತಿರುವ ಟ್ಯಾಂಕರ್ ಲಾಬಿ, ಕೆರೆ ಮತ್ತು ರಾಜಕಾಲುವೆಗಳ ಒತ್ತುವರಿಗಳಿಗೆ ಕಾರಣವಾದ ಭೂಮಾಫಿಯಾಗಳು ಹಾಗೂ ಗುಣಮಟ್ಟವಿಲ್ಲದ ಕಾಮಗಾರಿಗಳ ಹಿಂದೆ ಇರುವ ಗುತ್ತಿಗೆದಾರರ ಜಾಲಗಳು ಬೆಂಗಳೂರಿನ ಸಮಸ್ಯೆಗಳನ್ನು ಮತ್ತಷ್ಟು ಗಂಭೀರಗೊಳಿಸಿವೆ ಎಂದು ಆರೋಪಿಸಿದರು.

ನಗರದಲ್ಲಿ ಟ್ರಾಫಿಕ್ ಹೆಚ್ಚಳ, ಕೆರೆಗಳ ನಾಶ, ಮರಗಳ ಕಡಿತ, ಪ್ರವಾಹ ಮತ್ತು ನೀರಿನ ಸಂಕಷ್ಟಗಳು ಜನಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ. “ಬೆಂಗಳೂರು ಉಳಿಸಿ” ಅಭಿಯಾನವು ಕೇವಲ ಪರಿಸರ ಸಂರಕ್ಷಣೆಯ ಕಾರ್ಯಕ್ರಮವಲ್ಲ, ಉತ್ತಮ ಆಡಳಿತ ಮತ್ತು ಪಾರದರ್ಶಕತೆಯ ಜನಾಂದೋಲನವಾಗಿದೆ ಎಂದು ಅವರು ಹೇಳಿದರು.
ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ, ದಶಕಗಳಿಂದ ಬೆಂಗಳೂರು ಜನರಿಗೆ ಉದ್ಯೋಗ ಮತ್ತು ಸಮೃದ್ಧಿಯನ್ನು ನೀಡಿದ್ದು, ಈಗ ನಗರದ ಕೆರೆಗಳು, ಮರಗಳು, ನೀರು, ಗಾಳಿ ಮತ್ತು ಸಾರ್ವಜನಿಕ ಸ್ಥಳಗಳನ್ನು ರಕ್ಷಿಸುವ ಮೂಲಕ ಬೆಂಗಳೂರಿಗೆ ಮರಳಿ ಕೊಡುವ ಸಮಯ ಬಂದಿದೆ ಎಂದರು. “ಬೆಂಗಳೂರು ಉಳಿದರೆ ನಾವು ಉಳಿಯುತ್ತೇವೆ, ಬೆಂಗಳೂರು ಬೆಳೆದರೆ ನಾವು ಬೆಳೆಯುತ್ತೇವೆ” ಎಂದು ಹೇಳಿ, ಮುಂಬರುವ ಚುನಾವಣೆಯಲ್ಲಿ ಎಎಪಿಯನ್ನು ಬೆಂಬಲಿಸುವಂತೆ ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಸತೀಶ್ ಕುಮಾರ್, ಲಕ್ಷ್ಮಿಕಾಂತ್ ರಾವ್, ಜಗದೀಶ್ ವಿ. ಸದಂ, ಉಷಾ ಮೋಹನ್, ಜಗದೀಶ್ ಚಂದ್ರ, ಅಶೋಕ್ ಮೃತ್ಯುಂಜಯ, ಶಶಿಧರ ಆರಾಧ್ಯ, ಮುನೇಶ್ ಕುಮಾರ್, ಮರಿಯ ಹುಸೇನ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಇದನ್ನೂ ಓದಿ : ವಿಜಯ್, ಸಂಗೀತಾ ವಿಚ್ಛೇದನ ಅರ್ಜಿ ವಿಚಾರಣೆ; ಪತ್ನಿ ಜೊತೆ ರಾಜಿ ಮಾಡ್ಕೊಳ್ತಾರಾ ದಳಪತಿ
