ಮುಂಬೈ : ಉನ್ನತ ಮಟ್ಟದ ತಂಡಕ್ಕೆ ಆಯ್ಕೆಯಾಗದ ಕಾರಣ ಬೇಸರಗೊಂಡು 17 ವರ್ಷದ ಮಹಿಳಾ ಕ್ರಿಕೆಟಿಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗ್ಪುರದಲ್ಲಿ ನಡೆದಿದೆ. ಮೃತ ಅದಿತಿ ಚೌಖಂಡೆ ಮೂಲತಃ ಅಕೋಲಾದವರಾಗಿದ್ದು, ನಾಗ್ಪುರದಲ್ಲಿ ತನ್ನ ತಾಯಿ ಮತ್ತು ಅಣ್ಣನೊಂದಿಗೆ ವಾಸಿಸುತ್ತಿದ್ದರು. ಆಕೆಯ ತಂದೆ ಅಕೋಲಾದಲ್ಲಿ ಸಿವಿಲ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ.
ಅದಿತಿ ಇತ್ತೀಚೆಗೆ 12 ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರು. ಪೊಲೀಸರ ಪ್ರಕಾರ, ಅದಿತಿ ತನ್ನ ಅಣ್ಣ ಪ್ರಬಲ್ ಜೊತೆಗೆ ಕ್ರಿಕೆಟಿಗನಾಗಿ ತರಬೇತಿ ಪಡೆಯುತ್ತಿದ್ದಳು, ಅವರು ಕೂಡ ಉದಯೋನ್ಮುಖ ಆಟಗಾರ. ಬುಧವಾರ ರಾತ್ರಿ, ತನ್ನ ತಾಯಿಯೊಂದಿಗೆ ಊಟ ಮಾಡಿದ ನಂತರ, ಅದಿತಿ ತನ್ನ ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಘಟನೆ ನಡೆದ ಸಮಯದಲ್ಲಿ ಆಕೆಯ ಸಹೋದರ ಊರ ಹೊರಗೆ ಇದ್ದರು.
ಕೊಠಡಿಯಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಪತ್ರದಲ್ಲಿ ತಾನು ಉನ್ನತ ಮಟ್ಟದ ತಂಡಕ್ಕೆ ಆಯ್ಕೆಯಾಗದಿದ್ದಕ್ಕೆ ತನಗೆ ನಿರಾಶೆಯಾಗಿದೆ ಎಂದು ಅದಿತಿ ಬೆರೆದಿದ್ದಳು. ಪೊಲೀಸರು ತನಿಖೆ ಆರಂಭಿಸಿದ್ದು ಉನ್ನತ ಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗದಿದ್ದಕ್ಕೆ ಅದಿತಿ ಅಸಮಾಧಾನಗೊಂಡಿದ್ದಾರೆ ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಇನ್ಸ್ಪೆಕ್ಟರ್ ಚೇತನ್ ಚೌಹಾಣ್ ಹೇಳಿದ್ದಾರೆ.
“ದೊಡ್ಡ ತಂಡದಲ್ಲಿ ಆಯ್ಕೆಯಾಗದ ಕಾರಣ ನಿರಾಶೆಯಿಂದ ಬಲಿಪಶು ಈ ಕಠಿಣ ಕ್ರಮ ತೆಗೆದುಕೊಂಡಂತೆ ತೋರುತ್ತದೆ” ಎಂದು ಹಿರಿಯ ಇನ್ಸ್ಪೆಕ್ಟರ್ ಚೇತನ್ ಚೌಹಾಣ್ ಹೇಳಿದರು. ಅದಿತಿ ಅವರ ಅಕಾಲಿಕ ನಿಧನದಿಂದ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಸ್ಥಳೀಯ ಕ್ರಿಕೆಟ್ ವಲಯ ದುಃಖದಲ್ಲಿ ಮುಳುಗಿದೆ. ಅನೇಕ ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದು, ಯುವ ಆಟಗಾರರ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ : ಯೋಗೇಶ್ ಗೌಡ ಕೊಲೆ ಪ್ರಕರಣ; ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ – ಜಾಮೀನು ಮಂಜೂರು..!
