ಮುಂಬೈ : ನನ್ನ ಮಗಳು ತಪ್ಪು ಮಾಡಿದ್ರೆ ಕೇತನ್‌ನನ್ನು ತಳ್ಳಿ ಕೊಲೆಗೈದ ಅದೇ ಕೋಟೆಯಿಂದ ತಳ್ಳಿ ಬಿಡಿ ಎಂದು ಸಿಯಾ ಗೋಯಲ್ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಕೇತನ್ ಕೊಲೆ ಆರೋಪಿಯಾದ ಸಿಯಾಳ ತಾಯಿ ಪೂಜಾ ಗೋಯಲ್ ಮಾಧ್ಯಮಗಳ ಜೊತೆ ಮಾತನಾಡಿ, ನನ್ನ ಮಗಳು ಸಿಯಾ, ಕೇತನ್ ಜೊತೆ ಮದುವೆ ಮಾತುಕತೆ ವೇಳೆ ಅಸಮಾಧಾನ ವ್ಯಕ್ತಪಡಿಸಿರಲಿಲ್ಲ. ಇಬ್ಬರೂ ನವೆಂಬರ್‌ನಲ್ಲಿ ರಾಜಸ್ಥಾನದ ಉದಯಪುರದ ಅರಮನೆಯಲ್ಲಿ ಮದುವೆಯಾಗಲು ಸಿದ್ಧರಾಗಿದ್ದರು. ಕೇತನ್ ಸಾವು ಕೇವಲ ಒಂದು ಕುಟುಂಬವನ್ನು ಮಾತ್ರವಲ್ಲ, ಎರಡು ಕುಟುಂಬಗಳಿಗೂ ತೀವ್ರ ದುಃಖ ಉಂಟು ಮಾಡಿದೆ.
ಕೇತನ್ ಕುಟುಂಬಕ್ಕಿಂತ ಹೆಚ್ಚು ನೋವನ್ನು ನಮ್ಮ ಕುಟುಂಬ ಅನುಭವಿಸುತ್ತಿದೆ. ಆರೋಪಿ ನನ್ನ ಮಗಳಾಗಿದ್ದರೂ ಸಹ, ಕಠಿಣ ಶಿಕ್ಷೆ ವಿಧಿಸಬೇಕು. ನನ್ನ ಮಗಳು ತಪ್ಪಿತಸ್ಥರೆಂದು ಸಾಬೀತಾದರೆ, ಕೇತನ್‌ನನ್ನು ತಳ್ಳಿದ ಸ್ಥಳದಿಂದಲೇ ಅವಳನ್ನು ತಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸಿಯಾಳ ತಂದೆ ಪ್ರವೀಣ್ ಗೋಯಲ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರೋಪಿ ನನ್ನ ಸ್ವಂತ ಮಗಳಾಗಿದ್ದರೂ, ಕೇತನ್‌ನನ್ನು ತಳ್ಳಿದ ಕೋಟೆಯಿಂದ ಅವಳನ್ನು ಕೆಳಗೆ ತಳ್ಳಬೇಕು ಎಂದಿದ್ದಾರೆ.
ಈ ಘಟನೆಯನ್ನು ನಂಬಲು ನಮಗೆ ಕಷ್ಟ. ನಾವು ಕೇತನ್‌ನನ್ನು ಮಗನಂತೆ ಭಾವಿಸಿದ್ದೆವು. ಆತನ ತಂದೆ ತಾಯಿ ತಮ್ಮ ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ನಾವು ಸಹ ಅಷ್ಟೇ ದುಃಖಿತರಾಗಿದ್ದೇವೆ. ನಾವು ಸಹ ಅವನನ್ನು ತುಂಬಾ ಪ್ರೀತಿಸುತ್ತಿದ್ದೆವು. ನಾನು ಅವನನ್ನು ಸ್ವಂತ ಮಗನಂತೆ ಹಚ್ಚಿಕೊಂಡಿದ್ದೆ. ಒಳ್ಳೆಯ ಹುಡುಗನನ್ನು ಕಳೆದುಕೊಂಡಿದ್ದೇವೆ. ಇದರಿಂದ ನಮಗೆ ತುಂಬಾ ದುಃಖವಾಗಿದೆ ಎಂದಿದ್ದಾರೆ.
ಚೇತನ್ ಬಗ್ಗೆ ನಮಗೆ ಏನೂ ತಿಳಿದಿರಲಿಲ್ಲ. ನಿಶ್ಚಿತಾರ್ಥವಾದಾಗಿನಿಂದ ಅವಳು ಕೇತನ್ ಜೊತೆ ಮಾತ್ರ ಮಾತನಾಡುತ್ತಿದ್ದಳು ಎಂದು ಸಿಯಾಳ ತಾಯಿ ಮಾಹಿತಿ ನೀಡಿದ್ದಾರೆ. ಆಕೆಯ ತಂದೆ ಕೂಡ ಮಗಳ ಪ್ರೇಮ ಸಂಬಂಧದ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ. ಚೇತನ್ ಎಲ್ಲಿಂದ ಬಂದ ಎಂಬುದು ಗೊತ್ತಿಲ್ಲ. ನಾವು ಅವನ ಮುಖವನ್ನೂ ಸಹ ನೋಡಿಲ್ಲ. ಜೀವನದಲ್ಲಿ ಒಮ್ಮೆಯೂ ಅವನೊಂದಿಗೆ ಮಾತನಾಡಿಲ್ಲ. ಅವನು ನಮ್ಮ ಮನೆಗೆ ಎಂದಿಗೂ ಬಂದಿಲ್ಲ ಎಂದು ಸಿಯಾ ಪೋಷಕರು ಹೇಳಿದ್ದಾರೆ.
ಕೇತನ್ ಜೊತೆ ಸಿಯಾ ಸಂತೋಷವಾಗಿದ್ದಳು. ಕೇತನ್ ಕುಟುಂಬ ಸಿಯಾಳನ್ನು ಬಹಳ ಪ್ರೀತಿಯಿಂದ ನೋಡಿಕೊಂಡಿತ್ತು. ಎಲ್ಲಾ ಕಾರ್ಯಕ್ರಮಗಳು ಚೆನ್ನಾಗಿ ನಡೆಯುತ್ತಿದ್ದವು. ಸಿಯಾಳ ಹುಟ್ಟುಹಬ್ಬದ ಆಚರಣೆಗಾಗಿ ಅವರು ಅನೇಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಿದ್ದರು. ಈ ಮದುವೆಯ ಬಗ್ಗೆ ಸಿಯಾ ಎಂದಿಗೂ ಅಸಮಾಧಾನ ವ್ಯಕ್ತಪಡಿಸಿರಲಿಲ್ಲ ಎಂದು ಆಕೆಯ ಪೋಷಕರು ಹೇಳಿದ್ದಾರೆ.
ಜೂನ್ 19 ರಂದು ಸಿಯಾ ಗೋಯಲ್ ಹುಟ್ಟುಹಬ್ಬವಿತ್ತು. ಇದರ ಮುನ್ನಾದಿನ ಅಂದರೆ ಜೂನ್ 18 ರಂದು ಬೆಳಿಗ್ಗೆ, ಭಾವಿ ಪತ್ನಿಯ ಬರ್ತ್‌ಡೇ ಆಚರಣೆ ಹಾಗೂ ಪ್ರಿ-ವೆಡ್ಡಿಂಗ್ ಫೋಟೋಶೂಟ್‌ಗಾಗಿ ಕೇತನ್ ಮತ್ತು ಸಿಯಾ ಲೋಹಗಢ ಕೋಟೆಗೆ ಟ್ರೆಕ್ಕಿಂಗ್ ಬಂದಿದ್ದರು. ಕೋಟೆಯ ತುದಿಯಲ್ಲಿ ಬೆಳಿಗ್ಗೆ 10:30ರ ಸುಮಾರಿಗೆ ಫೋಟೋ ತೆಗೆದುಕೊಳ್ಳುವಾಗ ತೀವ್ರ ಗಾಳಿಗೆ ಕೇತನ್ ಆಯತಪ್ಪಿ 400 ಅಡಿ ಆಳದ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಆರಂಭದಲ್ಲಿ ಬಿಂಬಿಸಲಾಗಿತ್ತು. ಪೊಲೀಸರು ಕೂಡ ಇದನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದರು.
ಪೊಲೀಸರು ತನಿಖೆ ಮುಂದುವರಿಸಿದಾಗ ಸಿಯಾ ನೀಡುತ್ತಿದ್ದ ಹೇಳಿಕೆಗಳಲ್ಲಿ ಅನುಮಾನ ಮೂಡಿತ್ತು. ನಂತರ ಆಕೆಯ ಮೊಬೈಲ್ ಕರೆಗಳ ವಿವರ, ಸಾಮಾಜಿಕ ಜಾಲತಾಣಗಳ ಚಟುವಟಿಕೆ ಮತ್ತು ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸಿದಾಗ ಕರಾಳ ಸತ್ಯ ಬಯಲಾಗಿತ್ತು. ಆರೋಪಿಗಳಿಬ್ಬರನ್ನೂ ಬಂಧಿಸಿರುವ ಪುಣೆ ಗ್ರಾಮಾಂತರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ : ಧರ್ಮಸ್ಥಳದಲ್ಲಿ ಮಂಜುನಾಥನ ಮೊರೆ ಹೋದ ಬಿ.ವೈ. ವಿಜಯೇಂದ್ರ
