ತಿರುವನಂತಪುರಂ : ಕೇವಲ ತುಟಿಯ ಮೇಲಾದ ಸಣ್ಣ ಗಾಯಕ್ಕೆ ಹೊಲಿಗೆ ಹಾಕಲು ಅರಿವಳಿಕೆ ನೀಡಿದ ಬೆನ್ನಲ್ಲೇ ಒಂದೂವರೆ ವರ್ಷದ ಗಂಡು ಮಗುವೊಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಕೇರಳದ ಕಣ್ಣೂರಿನ ಆಸ್ಪತ್ರೆಯೊಂದರಲ್ಲಿ ನಡೆದಿದೆ. ದೇವನ್ಶ್ ಶೌರ್ಯ (18 ತಿಂಗಳು) ಮೃತಪಟ್ಟ ಮಗು ಎಂದು ತಿಳಿದುಬಂದಿದೆ.
ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದು, ಅರಿವಳಿಕೆ ತಜ್ಞರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇವನ್ಶ್ ಇರಾಮಮ್-ಕುಟ್ಟೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಭಾಗದ ತೇರಂಗಲ್ ನಿವಾಸಿಗಳಾದ ಟಿ. ಸೂರಜ್ ಮತ್ತು ವಿಜಿಶಾ ದಂಪತಿಯ ಏಕೈಕ ಪುತ್ರನಾಗಿದ್ದ. ಮದುವೆಯಾದ 8 ವರ್ಷಗಳ ಬಳಿಕ ಈ ದಂಪತಿಗೆ ಮಗು ಜನಿಸಿತ್ತು.
ಜುಲೈ 5 ರಂದು ದೇವನ್ಶ್ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದು, ಕೆಳತುಟಿಗೆ ಸಣ್ಣದಾಗಿ ಗಾಯವಾಗಿತ್ತು. ಪೋಷಕರು ತಕ್ಷಣವೇ ದೇವನ್ಶ್‌ನನ್ನು ಪಯ್ಯನ್ನೂರಿನಲ್ಲಿರುವ ಬೇಬಿ ಮೆಮೋರಿಯಲ್ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಗಾಯಕ್ಕೆ ಹೊಲಿಗೆ ಹಾಕಬೇಕೆಂದು ನಿರ್ಧರಿಸಿದ ವೈದ್ಯರು ಅರಿವಳಿಕೆ (ಅನಸ್ತೇಶಿಯಾ) ನೀಡಿದ್ದರು.
ಅರಿವಳಿಕೆ ನೀಡಿದ ಕೆಲವೇ ಕ್ಷಣಗಳಲ್ಲಿ ಮಗು ಪ್ರಜ್ಞೆ ಕಳೆದುಕೊಂಡಿದ್ದು, ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರಿನಲ್ಲಿರುವ ಆಸ್ಪತ್ರೆಯ ಮತ್ತೊಂದು ಸುಧಾರಿತ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಸತತ ಐದು ದಿನಗಳ ಕಾಲ ವೆಂಟಿಲೇಟರ್ ಮೇಲಿದ್ದ ಮಗು, ಚಿಕಿತ್ಸೆಗೆ ಸ್ಪಂದಿಸದೆ ನೆನ್ನೆ (ಶುಕ್ರವಾರ) ರಾತ್ರಿ ಕೊನೆಯುಸಿರೆಳೆದಿದೆ ಘಟನೆ ಬಳಕಿಗೆ ಬಂದಿದೆ.
ಮಗುವಿಗೆ ಅರಿವಳಿಕೆಯ ಅತಿಯಾದ ಡೋಸ್ ನೀಡಿದ್ದರಿಂದಲೇ ಮಗುವಿನ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದೆ ಎಂದು ಮಗುವಿನ ಸಂಬಂಧಿಕರು ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪಯ್ಯನ್ನೂರು ಪೊಲೀಸರು ಆಸ್ಪತ್ರೆಯ ಅರಿವಳಿಕೆ ತಜ್ಞರಾದ ಡಾ. ಅಂಜಲಿ ಪೊದುವಾಳ್ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 125ರ ಅಡಿಯಲ್ಲಿ (ಜೀವಕ್ಕೆ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ನಿರ್ಲಕ್ಷ್ಯದ ಕೃತ್ಯ) ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಗುವಿನ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯ ಕಾರಣ ಎಂಬ ಆರೋಪವನ್ನು ಆಸ್ಪತ್ರೆ ಆಡಳಿತ ಮಂಡಳಿ ತಳ್ಳಿಹಾಕಿದೆ. ಅರಿವಳಿಕೆ ನೀಡಿದ ತಕ್ಷಣ ಮಗುವಿಗೆ ಹಠಾತ್ ಹೃದಯ ಸ್ತಂಭನ ಉಂಟಾಗಿತ್ತು. ತಕ್ಷಣವೇ ಎಲ್ಲಾ ತುರ್ತು ಚಿಕಿತ್ಸೆ ನೀಡಿ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿತ್ತು. ವೈದ್ಯಕೀಯ ಶಾಸ್ತ್ರದಲ್ಲಿ ಸೂಕ್ತ ಪ್ರಮಾಣದ ಡೋಸ್ ನೀಡಿದರೂ ಕೆಲವೊಮ್ಮೆ ಅರಿವಳಿಕೆಯಿಂದ ಇಂತಹ ಗಂಭೀರ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಇರುತ್ತದೆ.
ಮಗುವನ್ನು ಉಳಿಸಲು ನಮ್ಮ ವೈದ್ಯರು ಎಲ್ಲಾ ರೀತಿಯ ಪ್ರೋಟೋಕಾಲ್ ಪಾಲಿಸಿದ್ದಾರೆ ಎಂದು ಆಸ್ಪತ್ರೆ ಹೇಳಿಕೆ ನೀಡಿದೆ. ಈ ಘಟನೆಯ ಬೆನ್ನಲ್ಲೇ ಆಸ್ಪತ್ರೆಯ ಮುಂದೆ ಡಿವೈಎಫ್‌ಐ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದ್ದು, ನಿರ್ಲಕ್ಷ್ಯ ತೋರಿದ ವೈದ್ಯರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಪೊಲೀಸರು ಮಗುವಿನ ಶವಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇದನ್ನೂ ಓದಿ : ಫಿಫಾ ವಿಶ್ವಕಪ್‌ನಲ್ಲಿ ಮೊರಾಕ್ಕೊ ಸೋತಿದ್ದಕ್ಕೆ ಕಣ್ಣೀರಿಟ್ಟ ನಟಿ ನೋರಾ ಫತೇಹಿ
