20.9 C
ಬೆಂಗಳೂರು
September 21, 2026
kranthikidi.com
ತಾಜಾಸುದ್ದಿದೇಶ

2.19 ಲಕ್ಷ ಕೋಟಿ ರೂ ವೆಚ್ಚದ 7 ಯೋಜನೆಗಳಿಗೆ ಅನುಮೋದನೆ – ಪ್ರಧಾನಿ ಮೋದಿ

ನವದೆಹಲಿ : ಭಾರತದಲ್ಲಿ ತಯಾರಿಕಾ ಕ್ಷೇತ್ರ ಮತ್ತು ಮೂಲಸೌಕರ್ಯ ಕ್ಷೇತ್ರಕ್ಕೆ ಮತ್ತಷ್ಟು ಪುಷ್ಟಿ ಕೊಡಲು ಸರ್ಕಾರ ಪ್ರಯತ್ನಗಳನ್ನು ಮುಂದುವರಿಸಿದೆ. ಈ ನಿಟ್ಟಿನಲ್ಲಿ ಕೆಲ ಮಹತವದ ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಮತ್ತು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ದೇಶದ ಮೂಲಸೌಕರ್ಯ, ಸೆಮಿಕಂಡಕ್ಟರ್, ಕೃಷಿ ಮತ್ತು ರೈಲ್ವೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 2,19,353 ಕೋಟಿ ರೂ ವೆಚ್ಚದ 7 ಪ್ರಮುಖ ಐತಿಹಾಸಿಕ ನಿರ್ಧಾರಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳ ವಿವರ ಈ ಕೆಳಕಂಡಂತಿದೆ:

ವಾರಣಾಸಿಯಲ್ಲಿ ಎರಡು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು – ಉತ್ತರಪ್ರದೇಶದ ವಾರಣಾಸಿ ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಆಧುನಿಕ ಸಂಪರ್ಕ ಕಲ್ಪಿಸಲು ಎರಡು ಬೃಹತ್ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಲಿಂಕ್ ಕಾರಿಡಾರ್ ನಿರ್ಮಾಣ : ರಾಷ್ಟ್ರೀಯ ಹೆದ್ದಾರಿ-19 ಅನ್ನು ವಾರಣಾಸಿ ರಿಂಗ್ ರೋಡ್‌ಗೆ ಸಂಪರ್ಕಿಸುವ 46.039 ಕಿಮೀ ಉದ್ದದ ಲಿಂಕ್ ಕಾರಿಡಾರ್ ನಿರ್ಮಿಸಲಾಗುವುದು. ಗಂಗಾ ನದಿ ತೀರದ ಮೂಲಕ ಹಾದುಹೋಗುವ ಈ ಯೋಜನೆಗೆ ರೂ. 14,447.64 ಕೋಟಿ ವೆಚ್ಚವಾಗಲಿದೆ. ಇದರಲ್ಲಿ 6-ಲೇನ್ ಎಲಿವೇಟೆಡ್ ರಸ್ತೆ ಮತ್ತು ಅತ್ಯಾಧುನಿಕ ಕೇಬಲ್ ಸೇತುವೆ ಒಳಗೊಂಡಿರುತ್ತದೆ.

ಎಲಿವೇಟೆಡ್ ಕಾರಿಡಾರ್ : ವರುಣಾ ನದಿ ತೀರದಲ್ಲಿ 6/4 ಲೇನ್‌ಗಳ ಮತ್ತೊಂದು ಬೃಹತ್ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಇದಕ್ಕೆ ರೂ. 10,998.32 ಕೋಟಿ ವೆಚ್ಚವಾಗಲಿದೆ.

ಸೆಮಿಕಾನ್ 2.0 ಮಿಷನ್ – ಭಾರತವನ್ನು ಜಾಗತಿಕ ಚಿಪ್ ತಯಾರಿಕಾ ಹಬ್ ಮಾಡಲು ಐತಿಹಾಸಿಕ ಹೆಜ್ಜೆ ಇಡಲಾಗಿದೆ. ಭಾರತೀಯ ಸೆಮಿಕಂಡಕ್ಟರ್ ಮಿಷನ್‌ನ ಎರಡನೇ ಆವೃತ್ತಿಯಾದ ‘ಸೆಮಿಕಾನ್ 2.0’ ಯೋಜನೆಗೆ ರೂ. 1.27 ಲಕ್ಷ ಕೋಟಿ ಭಾರಿ ಮೊತ್ತದ ಅನುಮೋದನೆ ನೀಡಲಾಗಿದೆ. ಇದು ದೇಶದಲ್ಲಿ ಹೈ-ಟೆಕ್ ತಂತ್ರಜ್ಞಾನ ಮತ್ತು ಉದ್ಯೋಗ ಸೃಷ್ಟಿಗೆ ದೊಡ್ಡ ಕೊಡುಗೆ ನೀಡಲಿದೆ.

ಮೊಬೈಲ್ ಫೋನ್ ತಯಾರಿಕೆ – ದೇಶೀಯ ಮೊಬೈಲ್ ಉತ್ಪಾದನೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಮೊಬೈಲ್ ಉತ್ಪಾದನಾ ಪ್ರೋತ್ಸಾಹಕ ಯೋಜನೆಯ ಎರಡನೇ ಆವೃತ್ತಿಗೆ ಅನುಮೋದನೆ ನೀಡಲಾಗಿದೆ. ಇದಕ್ಕೆ ರೂ. 62,500 ಕೋಟಿ ಅನುದಾನ ಮೀಸಲಿಡಲಾಗಿದೆ.

ಯೂರಿಯಾ ರಾಷ್ಟ್ರೀಯ ಹೂಡಿಕೆ ನೀತಿ – 2026 – ರಸಗೊಬ್ಬರ (ಯೂರಿಯಾ) ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಹೊಸ ಹೂಡಿಕೆ ನೀತಿಯನ್ನು ತರಲಾಗಿದೆ. ಇದರ ಅಡಿಯಲ್ಲಿ ದೇಶದಲ್ಲಿ 9 ಹೊಸ ಯೂರಿಯಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುವುದು. ಇದರಿಂದ ಹೆಚ್ಚುವರಿಯಾಗಿ 1 ಕೋಟಿ ಟನ್ ಯೂರಿಯಾ ಉತ್ಪಾದನೆಯಾಗಲಿದ್ದು, ಭಾರತವು ಯೂರಿಯಾ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಬಹುದಾಗಿದೆ.

ರೈಲ್ವೆ ಜಾಲದ ನವೀಕರಣ ಮತ್ತು ನಾಲ್ಕನೇ ರೈಲ್ವೆ ಲೈನ್ – ರೈಲ್ವೆ ಸಂಪರ್ಕವನ್ನು ಬಲಪಡಿಸಲು ಮತ್ತು ಸಾರಿಗೆ ವೇಗವನ್ನು ಹೆಚ್ಚಿಸಲು ಹಳಿಗಳ ದ್ವಿಗುಣಗೊಳಿಸುವಿಕೆ ಹಾಗೂ ರೈಲ್ವೆ ಜಾಲದ ನವೀಕರಣ ಯೋಜನೆಗಳಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಇದರಲ್ಲಿ ಅತ್ಯಂತ ಬ್ಯುಸಿ ಇರುವ ಮಾರ್ಗಗಳಲ್ಲಿ ನಾಲ್ಕನೇ ರೈಲ್ವೆ ಹಳಿ ನಿರ್ಮಾಣ ಯೋಜನೆಯೂ ಸೇರಿದೆ.

ಈ ಎಲ್ಲಾ ಯೋಜನೆಗಳಿಗೆ ಒಟ್ಟಾರೆಯಾಗಿ ರೂ. 2.19 ಲಕ್ಷ ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಲಾಗುತ್ತಿದ್ದು, ಇದು ದೇಶದ ಆರ್ಥಿಕ ಪ್ರಗತಿಯನ್ನು ಹೆಚ್ಚಿಸುವುದರ ಜೊತೆಗೆ ಲಕ್ಷಾಂತರ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ. ಇದನ್ನೂ ಓದಿ : ಕೋಲ್ಕತ್ತಾದಿಂದ ಬೆಂಗಳೂರಿಗೆ ಐಷಾರಾಮಿ ಬಸ್ ಸೇವೆ ಆರಂಭ..!

Related posts

ಯತೀಂದ್ರ ಖಾತೆ ಬದಲಾವಣೆಗೆ ಆಗ್ರಹ – ನೈಜ ಹೋರಾಟಗಾರರ ವೇದಿಕೆಯಿಂದ ಸಿಎಂಗೆ ಪತ್ರ..!

Kalpana Editor

ಟೀಂ ಇಂಡಿಯಾದ ಅಂಡರ್-19 ವಿಶ್ವಕಪ್ ವಿಜೇತ ಸ್ಟಾರ್‌ ಅರೆಸ್ಟ್‌…!

Kalpana Editor

ಹೋಟೆಲ್‌, ಮೆಡಿಕಲ್ ಸ್ಟೋರ್‌​ಗಳಲ್ಲಿ ಇನ್ಮುಂದೆ QR ಕೋಡ್ ಅಳವಡಿಕೆ; ಯುಟಿ ಖಾದರ್