ಬೆಂಗಳೂರು : ಕಾವೇರಿ ನದಿ ನೀರು ಹಂಚಿಕೆ ವಿವಾದವು ಸ್ವಾತಂತ್ರ್ಯ ಪೂರ್ವದಿಂದಲೂ ನಡೆದುಕೊಂಡು ಬಂದಿರುವ ಸೂಕ್ಷ್ಮ ವಿಷಯವಾಗಿದೆ. ಪ್ರಕೃತಿಯ ಮುನಿಸಿನಿಂದ ಉಂಟಾಗುವ ಬರಗಾಲಕ್ಕೂ ಮತ್ತು ಯಾರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಪ್ರತಿ 2-3 ವರ್ಷಗಳಿಗೊಮ್ಮೆ ಬರಗಾಲ ಬರುವುದು ನಿಸರ್ಗದ ನಿಯಮವಾಗಿದೆ. ಆದರೆ, ಪ್ರತಿಪಕ್ಷಗಳು ಹತಾಶೆಯಿಂದ ಕಾವೇರಿ ವಿಚಾರದಲ್ಲಿ ತಮಗೆ ಮನಸ್ಸಿಗೆ ಬಂದ ಹಾಗೆ ಬೇಜವಾಬ್ದಾರಿಯಾಗಿ ಮಾತನಾಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ನಾಗಮಂಗಲ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ತಕ್ಷಣವೇ ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್ ಮತ್ತು ಬಿ. ವೈ. ವಿಜಯೇಂದ್ರ ಅವರು ರಾಜ್ಯಕ್ಕೆ ಬರಗಾಲ ಬರುತ್ತದೆ ಎಂದು ಅಪಪ್ರಚಾರ ಮಾಡಿದ್ದರು. ಆದರೆ ಅವರ ಭವಿಷ್ಯ ಸುಳ್ಳಾಗಿ ತದನಂತರ ರಾಜ್ಯದಲ್ಲಿ ಉತ್ತಮ ಮಳೆಯಾಯಿತು. ಈಗ ಡಿ.ಕೆ. ಶಿವಕುಮಾರ್ ಅವರು ಬಂದ ತಕ್ಷಣವೇ ಬರಗಾಲ ಬಂದಿದೆ ಎಂದು ಜಪಿಸುತ್ತಿದ್ದಾರೆ.
ಮಳೆ ಬರುವುದು ಪ್ರಕೃತಿಯ ಸಹಜ ಪ್ರಕ್ರಿಯೆಯೆ ಹೊರತು, ಡಿ.ಕೆ. ಶಿವಕುಮಾರ್ ಅವರನ್ನು ಕೇಳಿ ಮಳೆ ಬರುತ್ತದೆಯೇ? ರಾಜಕಾರಣಿಗಳು ಇಂತಹ ಬಾಲಿಶ ಹಾಗೂ ವೈಜ್ಞಾನಿಕವಲ್ಲದ ಹೇಳಿಕೆಗಳನ್ನು ನೀಡುವುದು ಯಾವುದೇ ದೃಷ್ಟಿಯಿಂದಲೂ ಸರಿಯಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಕಾವೇರಿ ಸಂಕಷ್ಟ ನಿರ್ವಹಣೆ ಮತ್ತು ಸರ್ಕಾರದ ನಡೆ : ಪ್ರಸ್ತುತ ಕಾವೇರಿ ವಿಚಾರವಾಗಿ ನೀರಾವರಿ ಸಚಿವರು ಈಗಾಗಲೇ ಉನ್ನತ ಮಟ್ಟದ ಸಭೆಗಳನ್ನು ನಡೆಸಿದ್ದಾರೆ. ಮುಖ್ಯಮಂತ್ರಿಗಳನ್ನು ಖುದ್ದಾಗಿ ಭೇಟಿ ಮಾಡಿ ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿಕೊಡಲಾಗಿದೆ. ಇಂದು ಸಿಡಬ್ಲ್ಯೂಸಿ ಸಭೆ ಇದ್ದು, ಕೇಂದ್ರ ಸರ್ಕಾರದ ಸಭೆಯ ತೀರ್ಮಾನಗಳು ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಸೂಕ್ಷ್ಮವಾಗಿ ಗಮನಿಸಿಕೊಂಡು ಮುಂದಿನ ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ.
ಈ ಹಿಂದೆ ಕೇಂದ್ರ ಸರ್ಕಾರದ ಮುಂದೆ 5 ನಿಮಿಷಗಳಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುವುದಾಗಿ ಬೀಗಿದ್ದವರು, ಈಗ ಸುಪ್ರೀಂ ಕೋರ್ಟ್ ಮತ್ತು ಕೇಂದ್ರದ ಎದುರು ಆ ಕುರಿತು ತಾವೇನೂ ಮಾತನಾಡಿಯೇ ಇಲ್ಲ ಎಂದು ನುಣುಚಿಕೊಳ್ಳುತ್ತಿರುವುದನ್ನು ಇಡೀ ರಾಜ್ಯದ ಜನತೆ ನೋಡಿದ್ದಾರೆ. ಐದೇ ನಿಮಿಷದಲ್ಲಿ ಪ್ರಧಾನಮಂತ್ರಿಯವರ ಬಳಿ ಕೂರಿಸುತ್ತೇನೆ ಎಂದವರ ಇತಿಹಾಸವೂ ಜನರಿಗೆ ತಿಳಿದಿದೆ. ಹೀಗಾಗಿ ಡಿ.ಕೆ. ಶಿವಕುಮಾರ್ ಅವರ ಬದ್ಧತೆಯ ಬಗ್ಗೆ ಅನುಮಾನ ವ್ಯಕ್ತಪಡಿಸುವ ಅಥವಾ ಜನರಿಗೆ ತಪ್ಪು ಮಾಹಿತಿ ನೀಡುವ ಅಗತ್ಯ ಯಾರಿಗೂ ಇಲ್ಲ.

ರೈತ ಬಾಂಧವರಲ್ಲಿ ವಿನಂತಿ – ಪ್ರತಿಭಟನೆಯ ಅಗತ್ಯವಿಲ್ಲ : ಕಾವೇರಿ ಅಚ್ಚುಕಟ್ಟು ಪ್ರದೇಶದ ಹಾಗೂ ಮಂಡ್ಯ ಜಿಲ್ಲೆಯ ರೈತ ಹೋರಾಟಗಾರರಲ್ಲಿ ನಾನು ವಿನಂತಿ ಮಾಡಿಕೊಳ್ಳುವುದೇನೆಂದರೆ, ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಪ್ರತಿಭಟನೆಯನ್ನು ಮಾಡುವ ಅವಶ್ಯಕತೆ ಇಲ್ಲ. ರೈತರಿಗೆ ಯಾವುದೇ ಆತಂಕ ಅಥವಾ ಗೊಂದಲಗಳಿದ್ದಲ್ಲಿ ತಮ್ಮ ಕ್ಷೇತ್ರದ ಶಾಸಕರನ್ನು, ನೀರಾವರಿ ಸಚಿವರನ್ನು ಅಥವಾ ಮುಖ್ಯಮಂತ್ರಿಗಳನ್ನು ನೇರವಾಗಿ ಸಂಪರ್ಕಿಸಿ ಚರ್ಚಿಸಬಹುದು.
ನಿಮ್ಮ ಪ್ರತಿ ಆತಂಕಕ್ಕೂ ಸೂಕ್ತ ಪರಿಹಾರ ನೀಡಲು ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರು ಮುಕ್ತ ಮನಸ್ಸನ್ನು ಹೊಂದಿದ್ದಾರೆ. ನಮ್ಮ ಸರ್ಕಾರವು ಕಾವೇರಿ ಅಚ್ಚುಕಟ್ಟು ಭಾಗದ ರೈತರ ಸಮಸ್ಯೆಗಳಿಗೆ 100% ಸ್ಪಂದಿಸಲಿದೆ. ಪ್ರತಿಭಟನೆಗಳು ಕಾನೂನಾತ್ಮಕ ತೊಡಕುಗಳಿಗೆ ಕಾರಣವಾಗದಂತೆ ತಡೆಯುವುದು ನಮ್ಮ ಜವಾಬ್ದಾರಿಯಾಗಿದೆ. ನಾವೆಲ್ಲರೂ ಒಟ್ಟಾಗಿ ಚರ್ಚಿಸಿ ರೈತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಶಾಂತಿಯುತ ಪರಿಹಾರ ಕಂಡುಕೊಳ್ಳಲಿದ್ದೇವೆ.
ಮಾಜಿ ಪ್ರಧಾನಿಗಳ ನಡೆ ಮತ್ತು ನೀಟ್ ಹಗರಣದ ಮೌನಕ್ಕೆ ಪ್ರಶ್ನೆ : ಮುಖ್ಯಮಂತ್ರಿಗಳ ಮತ್ತು ಸರ್ಕಾರದ ಜನಪರ ಕೆಲಸಗಳ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಿರಿಯ ಮನಸ್ಸಿನಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಬಹುದು ಎಂದು ನಾವೆಲ್ಲರೂ ಕಾಯುತ್ತಿದ್ದೆವು. ಅವರ ಪಕ್ಷದ ನಾಯಕರಾದ ಎಚ್.ಡಿ. ರೇವಣ್ಣನವರೇ ಸರ್ಕಾರದ ಕಾರ್ಯವೈಖರಿಯನ್ನು ಶ್ಲಾಘಿಸಿ, ಒಳ್ಳೆಯ ಕೆಲಸವಾಗಲಿ ಎಂದು ಹಾರೈಸಿದ್ದಾರೆ. ಆದರೆ ಮಾಜಿ ಪ್ರಧಾನಿಗಳು ಮಾತ್ರ ಈಗ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುವುದಾಗಿ ಹೇಳುತ್ತಿರುವುದು ವಿಷಾದನೀಯ.
ಇಡೀ ದೇಶವೇ ಬೆಚ್ಚಿಬಿದ್ದ ನೀಟ್ ಪರೀಕ್ಷಾ ಹಗರಣದಿಂದಾಗಿ ನಮ್ಮ ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ, ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಾಗ ದೇಶದ ಹಿರಿಯ ನಾಯಕರಾಗಿರುವ ಮಾಜಿ ಪ್ರಧಾನಿಗಳು 1 ದಿನವೂ ತುಟಿ ಬಿಚ್ಚಲಿಲ್ಲ, ಒಂದೇ ಒಂದು ಹೇಳಿಕೆಯನ್ನೂ ನೀಡಲಿಲ್ಲ. ಕೇಂದ್ರ ಸರ್ಕಾರದ ನೇರ ಜವಾಬ್ದಾರಿಯಿರುವ ನೀಟ್ ಹಗರಣದ ವಿರುದ್ಧ ಮೌನ ವಹಿಸಿದ್ದ ದೇವೇಗೌಡರು, ಈಗ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಪ್ರತಿಭಟನೆಗೆ ನಿಂತಿರುವುದು ಅವರ ರಾಜಕೀಯ ಪ್ರೇರಿತ ನಡೆಯನ್ನು ಎತ್ತಿ ತೋರಿಸುತ್ತದೆ.
ವಿಧಾನಸೌಧ ಇರುವುದೇ ಸಾರ್ವಜನಿಕ ಚರ್ಚೆಗೆ : ದೇವನಹಳ್ಳಿ ಭಾಗದಲ್ಲಿ ಇಡೀ ರಾಜ್ಯದ ರೈತರು ಜಮೀನು ಸ್ವಾಧೀನ ವಿರೋಧಿಸಿ ಸುದೀರ್ಘ ಹೋರಾಟ ನಡೆಸಿದಾಗ ಇವರು ರೈತರನ್ನು ಭೇಟಿ ಮಾಡಲು ಹೋಗಲೇ ಇಲ್ಲ. ಅಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಹೋರಾಟದ ಸ್ಥಳಕ್ಕೆ ಹೋಗಿ ಬೀದಿ ಸರ್ಕಸ್ ಮಾಡಲಿಲ್ಲ, ಬದಲಿಗೆ ವಿಧಾನಸೌಧದಲ್ಲಿ ಅಧಿಕೃತ ಸಭೆ ಕರೆದು ರೈತರ ಪರವಾಗಿ ಸೂಕ್ತ ತೀರ್ಮಾನ ಕೈಗೊಂಡರು. ಆದರೆ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿಯವರು ‘ಪ್ರತಿಭಟನಾ ಸ್ಥಳಕ್ಕೆ ಕುಸ್ತಿ ಆಡಲು ಕರೆಯುತ್ತಾರಾ?’ ಎಂದು ಲೇವದೇವಿ ಮಾಡುತ್ತಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಸರ್ಕಾರಿ ವ್ಯವಸ್ಥೆ ಇರುವುದು ಕುಸ್ತಿ ಆಡಲಿಕ್ಕಲ್ಲ, ಬದಲಿಗೆ ರೈತರ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲಿಕ್ಕೆ. ವಿಧಾನಸೌಧವನ್ನು ನಿರ್ಮಿಸಿರುವುದೇ ರಾಜ್ಯದ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ಆಡಳಿತಾತ್ಮಕ ಪರಿಹಾರ ಕಂಡುಕೊಳ್ಳಲು. ಇವರು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಸಭೆಗಳನ್ನು ನಡೆಸಿರಲಿಲ್ಲವೇ? ಇವರು ಎಷ್ಟು ಬಾರಿ ರೈತರ ಸಮಸ್ಯೆಗಳಿಗಾಗಿ ಬೀದಿಗೆ ಇಳಿದಿದ್ದರು? ದೆಹಲಿಯ ಗಡಿಯಲ್ಲಿ ಹರಿಯಾಣ ಮತ್ತು ಪಂಜಾಬ್‌ನ ರೈತರು ವರ್ಷಗಟ್ಟಲೆ ಹೋರಾಟ ನಡೆಸಿದಾಗ,
ತಾವೇ ಮಣ್ಣಿನ ಮಕ್ಕಳೆಂದು ಕರೆದುಕೊಳ್ಳುವ ಈ ನಾಯಕರು ಅಲ್ಲಿಗೆ ಏಕೆ ಹೋಗಲಿಲ್ಲ? ಕೇಂದ್ರದಲ್ಲಿರುವ ಪ್ರಧಾನ ಮಂತ್ರಿಗಳನ್ನಾಗಲಿ ಅಥವಾ ಅಮಿತ್ ಶಾ ಅವರನ್ನಾಗಲಿ ಭೇಟಿ ಮಾಡಿ ರೈತರ ಪರವಾಗಿ ಒತ್ತಡ ಹೇರಬಹುದಿತ್ತಲ್ಲವೇ? ಪ್ರತಿಪಕ್ಷಗಳು ಕೇವಲ ರಾಜಕೀಯ ಲಾಭಕ್ಕಾಗಿ ರೈತರನ್ನು ಬಳಸಿಕೊಳ್ಳುವುದನ್ನು ಬಿಟ್ಟು ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ ಎಂದು ಎನ್. ಚಲುವರಾಯಸ್ವಾಮಿ ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ : 2.19 ಲಕ್ಷ ಕೋಟಿ ರೂ ವೆಚ್ಚದ 7 ಯೋಜನೆಗಳಿಗೆ ಅನುಮೋದನೆ – ಪ್ರಧಾನಿ ಮೋದಿ
