ಉಡುಪಿ : ತಮಿಳುನಾಡು ಸಿಎಂ ಸಿ.ಜೋಸೆಫ್ ವಿಜಯ್ ಅವರು ಶುಕ್ರವಾರ (ಜೂ.12) ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಭೇಟಿ ನೀಡಿ, ದೇವಿಯ ದರ್ಶನ ಪಡೆಯಲಿದ್ದಾರೆ. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಕೊಲ್ಲೂರಿಗೆ ಆಗಮಿಸಲಿದ್ದಾರೆ. ದೇವಿ ದರ್ಶನ ಪಡೆದು, ಸಂಜೆ ಮಂಗಳೂರು ವಿಮಾನ ನಿಲ್ದಾಣದಿಂದ ಚೆನ್ನೈಗೆ ತೆರಳಲಿದ್ದಾರೆ.
ಕರ್ನಾಟಕದ ರಾಜಕೀಯ ನಾಯಕರು, ತಮಿಳುನಾಡಿನ ರಾಜಕೀಯ ನಾಯಕರ ಪಾಲಿಗೆ ಕೊಲ್ಲೂರು ಭಕ್ತಿ ಶ್ರದ್ಧೆಯ ಕೇಂದ್ರವಾಗಿದೆ. ಎಂಜಿಆರ್ ಅವರಿಂದ ಹಿಡಿದು ಎಲ್ಲರೂ ಸಾಮಾನ್ಯವಾಗಿ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಎಂಜಿಆರ್ ಕೂಡ ಸಿಎಂ ಆಗಿದ್ದಾಗ ಕೊಲ್ಲೂರು ದೇಗುಲಕ್ಕೆ ಆಗಮಿಸಿ ಮೂಕಾಂಬಿಕೆಗೆ ಚಿನ್ನದ ಖಡ್ಗವನ್ನು ಭಕ್ತಿಯಿಂದ ಕಾಣಿಕೆಯಾಗಿ ಸಮರ್ಪಿಸಿದ್ದರು.
ಅದಾದ ಮೇಲೆ ರಾಜಕೀಯ ಏಳುಬೀಳು ಕಾಣುವ ಹಂತದಲ್ಲಿ ಜಯಲಲಿತಾ ಕೂಡ ಶಕ್ತಿಪೀಠದ ಮೊರೆ ಹೋಗಿದ್ದರು. ಸಿಎಂ ಆದ ಮೇಲೆ ಜ್ಯೋತಿಷಿಗಳ ಸಲಹೆ ಮೇರೆಗೆ 2004 ರಲ್ಲಿ ಇಲ್ಲಿಗೆ ಬಂದು ವಿಶೇಷ ಚಂಡಿಕಾಯಾಗ ಮಾಡಿದ್ದರು. ಅಲ್ಲದೇ ಶುಕ್ರವಾರದ ಅನ್ನಸಂತರ್ಪಣೆಗೆ 30 ಸಾವಿರ ರೂ. ನೀಡಿದ್ದರು.
ಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಪಾಲಿಗೆ ಮೂಕಾಂಬಿಕಾ ದೇಗುಲ ನಂಬಿಕೆ ಆರಾಧ್ಯ ಕೇಂದ್ರವಾಗಿದೆ. ಈಗ ಅಧಿಕಾರ ವಹಿಸಿಕೊಂಡ ವಿಜಯ್ ಕೂಡ ಮೂಕಾಂಬಿಕೆಯ ಮೊರೆ ಹೋಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು ಕ್ಷೇತ್ರವು ಪರಶುರಾಮನ ಸೃಷ್ಟಿಯಲ್ಲಿನ ಏಳು ಮುಕ್ತಿ ಧಾಮಗಳಲ್ಲಿ ಒಂದಾಗಿದೆ. ಇದನ್ನೂ ಓದಿ : ವಿಚ್ಛೇದನ ಅರ್ಜಿ ವಿಚಾರಣೆ ಹಂತದಲ್ಲೇ ‘ಶುಭ’ ಸುದ್ದಿ ಕೇಳಿಬಂತು..!
ಈ ಕ್ಷೇತ್ರವನ್ನು ಆದಿ ಶಂಕರಾಚಾರ್ಯರು ಸ್ಥಾಪಿಸಿದರು. ಇದು ಶಕ್ತಿ ದೇವಿಯನ್ನು ಪೂಜಿಸುವ ವಾಸಸ್ಥಾನವಾಗಿದೆ. ‘ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ’ ಎಂಬ ಮೂರು ದೇವತೆಗಳ ಐಕ್ಯರೂಪಿಣಿಯಾಗಿ ಮೂಕಾಂಬಿಕಾ ಎಂಬ ಹೆಸರಿನಲ್ಲಿ ದೇವಿಯನ್ನು ಆರಾಧಿಸಲ್ಪಡುವ ಶಕ್ತಿಪೀಠ ಇದಾಗಿದೆ. ಮೂಕಾಂಬಿಕೆ ದರ್ಶನ ಪಡೆದರೆ ಏಳಿಗೆಯಾಗುತ್ತದೆ ಎನ್ನುವ ನಂಬಿಕೆ ಇದೆ.
