29.2 C
ಬೆಂಗಳೂರು
June 10, 2026
kranthikidi.com
ಆರೋಗ್ಯತಾಜಾಸುದ್ದಿ

ಆಲೂಗಡ್ಡೆಯಲ್ಲಿ ಆರೋಗ್ಯದ ರಹಸ್ಯ ಮತ್ತು ಆಯುರ್ವೇದದ ಮಹಿಮೆ..!

ಎಲ್ಲಾರ ಮನೆಗಳ ಅಡುಗೆಮನೆಯಲ್ಲಿ ಒಂದಲ್ಲ ಒಂದು ರೂಪದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ತರಕಾರಿ ಎಂದರೆ ಅದು ಆಲೂಗಡ್ಡೆ. ಆದರೆ ಇದು ಕೇವಲ ಒಂದು ಸಾಧಾರಣ ತರಕಾರಿ ಮಾತ್ರವಲ್ಲ; ಕೋಟ್ಯಂತರ ಜನರ ಹೊಟ್ಟೆ ತುಂಬಿಸುವ, ಲಕ್ಷಾಂತರ ರೈತರ ಜೀವನಾಧಾರವಾಗಿದೆ.

ಈ ಮಹತ್ವದ ಬೆಳೆಯನ್ನು ಗೌರವಿಸಲು ಮತ್ತು ಜಾಗತಿಕ ಆಹಾರ ಭದ್ರತೆಯಲ್ಲಿ ಇದರ ಪಾತ್ರವನ್ನು ಸ್ಮರಿಸಲು ವಿಶ್ವಸಂಸ್ಥೆಯು ಪ್ರತಿ ವರ್ಷ ಮೇ 30ರಂದು ‘ಅಂತರರಾಷ್ಟ್ರೀಯ ಆಲೂಗಡ್ಡೆ ದಿನ’ ಎಂದು ಆಚರಿಸುತ್ತದೆ. ಜಾಗತಿಕ ತಾಪಮಾನ ಏರಿಕೆ ಮತ್ತು ನೀರಿನ ಕೊರತೆಯ ಇಂದಿನ ಯುಗದಲ್ಲಿ, ಗೋಧಿ ಮತ್ತು ಅಕ್ಕಿಗಿಂತ ಕಡಿಮೆ ನೀರು ಬೇಡುವ, ಕಡಿಮೆ ಅವಧಿಯಲ್ಲಿ ಕೈಗೆ ಬರುವ ಹಾಗೂ ಕಡಿಮೆ ಜಾಗದಲ್ಲಿ ಹೆಚ್ಚು ಕ್ಯಾಲೊರಿ ಉತ್ಪಾದಿಸುವ ಆಲೂಗಡ್ಡೆ ಜಗತ್ತಿಗೆ ಒಂದು ಭರವಸೆಯ ಬೆಳೆಯಾಗಿದೆ.

ಆಲೂಗಡ್ಡೆಯ ಮೂಲ ತಾಯ್ನಾಡು ದಕ್ಷಿಣ ಅಮೆರಿಕದ ಆಂಡೀಸ್ ಪರ್ವತ ಪ್ರದೇಶವಾಗಿದೆ. ಪೆರು ಮತ್ತು ಬೊಲಿವಿಯಾ ದೇಶಗಳ ಗಡಿಯಲ್ಲಿರುವ ಟಿಟಿಕಾಕಾ ಸರೋವರದ ಸುತ್ತಮುತ್ತ ಸುಮಾರು 8000 ವರ್ಷಗಳ ಹಿಂದೆ ಇಂಕಾ ನಾಗರಿಕತೆಯ ಜನರು ಮೊಟ್ಟಮೊದಲ ಬಾರಿಗೆ ಆಲೂಗಡ್ಡೆಯನ್ನು ಬೆಳೆಸಿದರು. ತದನಂತರ 16ನೇ ಶತಮಾನದಲ್ಲಿ ಸ್ಪ್ಯಾನಿಷ್ ವಸಾಹತುಗಾರರು ಬಟಾಟೆಯನ್ನು ಯುರೋಪಿಗೆ ಕೊಂಡೊಯ್ದರು ಮತ್ತು ಅಲ್ಲಿಂದ ಅದು ಜಗತ್ತಿನಾದ್ಯಂತ ಹರಡಿತು.

18 ಮತ್ತು 19ನೇ ಶತಮಾನಗಳಲ್ಲಿ ಯುರೋಪಿನ ಜನಸಂಖ್ಯೆ ವೇಗವಾಗಿ ಹೆಚ್ಚಲು ಆಲೂಗಡ್ಡೆಯ ಕೊಡುಗೆ ಅಪಾರ ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಭಾರತಕ್ಕೆ ಆಲೂಗಡ್ಡೆ ಬಂದದ್ದು ಪೋರ್ಚುಗೀಸರ ಮೂಲಕ ಸುಮಾರು ೧೭ನೇ ಶತಮಾನದಲ್ಲಿ ಎಂಬ ಇತಿಹಾಸವಿದ್ದು, ಇಂದು ಭಾರತವು ವಿಶ್ವದ ಪ್ರಮುಖ ಬಟಾಟೆ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

2008ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು “ಅಂತರರಾಷ್ಟ್ರೀಯ ಆಲೂಗಡ್ಡೆ ವರ್ಷ” ಆಚರಿಸಿ ಇದರ ಜಾಗತಿಕ ಮಹತ್ವವನ್ನು ಸಾರಿತು. ಇದರ ಮುಂದುವರಿದ ಭಾಗವಾಗಿ ಜುಲೈ 2023ರ FAO ಸಮ್ಮೇಳನದಲ್ಲಿ ಮೇ 30ಅನ್ನು ಅಂತರರಾಷ್ಟ್ರೀಯ ಆಲೂಗಡ್ಡೆ ದಿನವಾಗಿ ಆಚರಿಸಲು ನಿರ್ಣಯ ಕೈಗೊಳ್ಳಲಾಯಿತು ಮತ್ತು ಡಿಸೆಂಬರ್ 2023ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಇದಕ್ಕೆ ಅಧಿಕೃತ ಅನುಮೋದನೆ ನೀಡಿತು.

ಮೊದಲ ಆಚರಣೆಯು ಮೇ 30, 2024ರಂದು ನಡೆದಿದ್ದು, ಈ ದಿನಾಂಕವನ್ನು ಆಲೂಗಡ್ಡೆ ತಾಯ್ನಾಡಾದ ಪೆರುವಿನ ರಾಷ್ಟ್ರೀಯ ಬಟಾಟೆ ದಿನದ ನೆನಪಿಗಾಗಿ ಆಯ್ಕೆ ಮಾಡಲಾಗಿದೆ. “ಆಲೂಗಡ್ಡೆ ಬೆಳೆಯುವಲ್ಲಿ, ಜೀವನೋಪಾಯ ಅರಳುತ್ತದೆ” ಎಂಬುದು 2026ರ ಸಾಲಿನ ವಿಶೇಷ ಥೀಮ್ (ಸಂದೇಶ) ಆಗಿದ್ದು, ಆಲೂಗಡ್ಡೆ ಕೃಷಿಯನ್ನು ಬಲಪಡಿಸುವ ಮೂಲಕ ಗ್ರಾಮೀಣ ಬಡತನ ಕಡಿಮೆ ಮಾಡಬಹುದು ಮತ್ತು ಮಹಿಳಾ ರೈತರ ಸಬಲೀಕರಣ ಸಾಧಿಸಬಹುದು ಎಂಬುದನ್ನು ಇದು ಬಿಂಬಿಸುತ್ತದೆ.

ಪೋಷಣೆ, ಆರೋಗ್ಯ ಮತ್ತು ಆಯುರ್ವೇದದ ದೃಷ್ಟಿಕೋನ : ಅನೇಕರು ಆಲೂಗಡ್ಡೆಯನ್ನು ಆರೋಗ್ಯಕ್ಕೆ ಹಾನಿಕಾರಕ ಎಂದು ಭಾವಿಸುತ್ತಾರೆ, ಆದರೆ ನಿಜವಾಗಿ ಆಲೂಗಡ್ಡೆ ಅತ್ಯಂತ ಪೌಷ್ಟಿಕ ಆಹಾರವಾಗಿದೆ. ಇದರಲ್ಲಿ ವಿಟಮಿನ್ C, ಪೊಟ್ಯಾಸಿಯಂ, ವಿಟಮಿನ್ B6, ಫೈಬರ್ ಮತ್ತು ಉತ್ತಮ ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿವೆ. ಒಂದು ಮಧ್ಯಮ ಗಾತ್ರದ ಆಲೂಗಡ್ಡೆ ದಿನದ ವಿಟಮಿನ್ C ಅವಶ್ಯಕತೆಯ ಸುಮಾರು ಮೂರನೇ ಒಂದು ಭಾಗವನ್ನು ಪೂರೈಸಬಲ್ಲದು.

ಆಯುರ್ವೇದದ ಪ್ರಕಾರ, ಆಲೂಗಡ್ಡೆಯು ದೇಹಕ್ಕೆ ಶಕ್ತಿ ಮತ್ತು ಬಲ ನೀಡುತ್ತದೆ, ಆಮ್ಲತೆ ಮತ್ತು ಹೊಟ್ಟೆ ಉರಿಯನ್ನು ಕಡಿಮೆ ಮಾಡುತ್ತದೆ, ಮೂತ್ರಪಿಂಡಗಳ ಕಾರ್ಯಕ್ಕೆ ನೆರವಾಗುತ್ತದೆ ಹಾಗೂ ಚರ್ಮದ ಕಾಂತಿ ಹೆಚ್ಚಿಸಲು ಸಹಕಾರಿಯಾಗಿದೆ. ಆಲೂಗಡ್ಡೆ ಆರೋಗ್ಯಕ್ಕೆ ಸಮಸ್ಯೆಯಲ್ಲ, ಅದನ್ನು ಅತಿಯಾಗಿ ಎಣ್ಣೆಯಲ್ಲಿ ಕರಿಯುವುದು ಮತ್ತು ಮಿತಿಮೀರಿ ಸೇವಿಸುವುದು ಮಾತ್ರ ರಕ್ತದ ಸಕ್ಕರೆ ಏರಿಕೆ, ತೂಕ ಹೆಚ್ಚಳ ಅಥವಾ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ದುಷ್ಪರಿಣಾಮ ತಡೆಯುವ ಆಯುರ್ವೇದ ಉಪಾಯಗಳು : ಆಲೂಗಡ್ಡೆಯ ನಕಾರಾತ್ಮಕ ಪರಿಣಾಮಗಳನ್ನು ತಡೆಯಲು ಕೆಲವು ಸುಲಭ ಆಯುರ್ವೇದ ಉಪಾಯಗಳಿವೆ. ಇದನ್ನು ಎಣ್ಣೆಯಲ್ಲಿ ಕರಿಯುವುದಕ್ಕಿಂತ ಹಬೆಯಲ್ಲಿ ಬೇಯಿಸಿ ತಿನ್ನುವುದು ಉತ್ತಮ ಹಾಗೂ ತೊಗಟೆಯೊಂದಿಗೆ ತಿಂದರೆ ಫೈಬರ್ ಹೆಚ್ಚಾಗಿ ದೊರೆಯುತ್ತದೆ. ಬೇಯಿಸಿದ ಆಲೂಗಡ್ಡೆಯನ್ನು ಸ್ವಲ್ಪ ಸಮಯ ತಣ್ಣಗಾಗಲು ಬಿಟ್ಟು ಸೇವಿಸಿದರೆ ಅದರಲ್ಲಿ “ರೆಸಿಸ್ಟೆಂಟ್ ಸ್ಟಾರ್ಚ್” ಹೆಚ್ಚಾಗಿ ರಕ್ತದ ಸಕ್ಕರೆ ಏರಿಕೆಯನ್ನು ತಗ್ಗಿಸುತ್ತದೆ. ಅಡುಗೆಯಲ್ಲಿ ಹಿಂಗು, ಜೀರಿಗೆ, ಅರಿಶಿನ, ಶುಂಠಿ ಮತ್ತು ಮೆಣಸಿನಂತಹ ಮಸಾಲೆಗಳನ್ನು ಬಳಸುವುದರಿಂದ ಇದು ಸುಲಭವಾಗಿ ಜೀರ್ಣವಾಗುತ್ತದೆ.

ಮೊಳಕೆ ಬಂದ ಆಲೂಗಡ್ಡೆ: ವಹಿಸಬೇಕಾದ ಕಟ್ಟುನಿಟ್ಟಿನ ಎಚ್ಚರಿಕೆ : ಆಲೂಗಡ್ಡೆಯನ್ನು ಹೆಚ್ಚು ದಿನ ಇಟ್ಟಾಗ ಅದರ ಮೇಲೆ ಮೂಡುವ ಚಿಗುರು ಅಥವಾ ಮೊಳಕೆಗಳ ಬಗ್ಗೆ ಎಚ್ಚರಿಕೆ ಅಗತ್ಯ. ಮೊಳಕೆ ಒಡೆದ ಮತ್ತು ಹಸಿರು ಬಣ್ಣಕ್ಕೆ ತಿರುಗಿದ ಆಲೂಗಡ್ಡೆಯಲ್ಲಿ ‘ಸೊಲನೈನ್’ ಮತ್ತು ‘ಚಾಕೊನೈನ್’ ಎಂಬ ಎರಡು ವಿಷಕಾರಿ ರಾಸಾಯನಿಕಗಳು ಹೆಚ್ಚಾಗುತ್ತವೆ. ಇವು ಶಾಖವನ್ನು ತಡೆಯಬಲ್ಲ ವಿಷಕಾರಿ ಅಂಶಗಳಾಗಿದ್ದರಿಂದ ಬೇಯಿಸಿದರೂ ಅಥವಾ ಕರಿದರೂ ಸಂಪೂರ್ಣ ನಾಶವಾಗುವುದಿಲ್ಲ.

ಇಂತಹ ಬಟಾಟೆ ತಿಂದರೆ ಸಣ್ಣ ಪ್ರಮಾಣದಲ್ಲಿ ತಲೆನೋವು, ವಾಕರಿಕೆ, ಹೊಟ್ಟೆನೋವು ಕಾಣಿಸಿಕೊಳ್ಳಬಹುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಜ್ವರ, ರಕ್ತದೊತ್ತಡ ಕುಸಿತದಂತಹ ಗಂಭೀರ ನರಮಂಡಲದ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಸಣ್ಣ ಮೊಳಕೆ ಇದ್ದರೆ ಆ ಭಾಗವನ್ನು ಆಳವಾಗಿ ಕತ್ತರಿಸಿ ಬಳಸಿ, ಆದರೆ ಹಸಿರು ಬಣ್ಣ ಅಥವಾ ಸುಕ್ಕುಗಟ್ಟಿದ ಬಟಾಟೆ ಇದ್ದರೆ ಅದನ್ನು ಸಂಪೂರ್ಣವಾಗಿ ಬಿಸಾಡುವುದು ಸುರಕ್ಷಿತ. ಇದನ್ನು ತಡೆಯಲು ಆಲೂಗಡ್ಡೆಯನ್ನು ಯಾವಾಗಲೂ ಕತ್ತಲೆ, ಒಣ ಹಾಗೂ ತಂಪಾದ ಜಾಗದಲ್ಲಿ ಸಂಗ್ರಹಿಸಬೇಕು ಮತ್ತು ಈರುಳ್ಳಿ ಜೊತೆಗೆ ಇಡಬಾರದು.

ಭಾರತ ಹಾಗೂ ಕರ್ನಾಟಕದಲ್ಲಿ ಆಲೂಗಡ್ಡೆ ಸ್ಥಾನ : ಭಾರತದಲ್ಲಿ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಗುಜರಾತ್ ಪ್ರಮುಖ ಆಲೂಗಡ್ಡೆ ಉತ್ಪಾದಕ ರಾಜ್ಯಗಳಾಗಿವೆ. ನಮ್ಮ ಕರ್ನಾಟಕದಲ್ಲಿ ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಆಲೂಗಡ್ಡೆ ಕೃಷಿ ಹೆಚ್ಚಾಗಿ ಕಂಡುಬರುತ್ತದೆ. ಕನ್ನಡಿಗರ ದೈನಂದಿನ ಅಡುಗೆಯಲ್ಲಂತೂ ಆಲೂಗಡ್ಡೆ ಪಲ್ಯ, ಮಸಾಲೆ ದೋಸೆ, ಸಾಂಬಾರು, ಬಜ್ಜಿ, ಚಾಟ್ ಸೇರಿದಂತೆ ಅನೇಕ ಸವಿಯಾದ ತಿನಿಸುಗಳಲ್ಲಿ ಆಲೂಗಡ್ಡೆ ಪ್ರಮುಖ ಮತ್ತು ಅನಿವಾರ್ಯ ಸ್ಥಾನವನ್ನು ಪಡೆದುಕೊಂಡಿದೆ.

ಒಂದು ಸಾಮಾನ್ಯ ಆಲೂಗಡ್ಡೆಯ ಹಿಂದೆ ಸಾವಿರಾರು ವರ್ಷಗಳ ಇತಿಹಾಸ, ಕೋಟ್ಯಂತರ ಜನರ ಬದುಕು ಮತ್ತು ಜಾಗತಿಕ ಆಹಾರ ಭದ್ರತೆಯ ಕಥೆಯಿದೆ. ಸರಿಯಾದ ಅಡುಗೆ ವಿಧಾನ ಮತ್ತು ಮಿತ ಪ್ರಮಾಣದೊಂದಿಗೆ ಸೇವಿಸಿದರೆ ಆಲೂಗಡ್ಡೆ ಎಂದಿಗೂ ನಮ್ಮ ಆರೋಗ್ಯದ ಉತ್ತಮವಾಗಿದೆ.

Related posts

ರಣವೀರ್ ಸಿಂಗ್ 3 ವರ್ಷ ಬ್ಯಾನ್ ಆಗಿಲ್ಲ – ಎಫ್‌ಡಬ್ಲುಐಸಿಇ ಸ್ಪಷ್ಟನೆ..!

Kalpana Editor

ದೆಹಲಿಯ ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ..!

Kalpana Editor

ಸಿದ್ದರಾಮಯ್ಯ ಪತ್ನಿಗೆ ರಾಜ್ಯಸಭಾ ಆಫರ್ ನೀಡಿದ್ದ, ರಾಹುಲ್ ಗಾಂಧಿ

Kalpana Editor