ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿ ಭಾಗದ ಸಾಂಸ್ಕೃತಿಕ ಆಸ್ಮಿತೆಯಾಗಿರುವ ‘ಕಂಬಳ’ ಕ್ರೀಡೆಯನ್ನು ಆಯೋಜಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಈಗ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪುತ್ತೂರು ಶಾಸಕ ಅಶೋಕ್ ರೈ ಅವರ ನೇತೃತ್ವದಲ್ಲಿ ಈ ಪ್ರಸ್ತಾವನೆಯನ್ನು ಜುಲೈ 10ರಂದು ನಡೆದ ದಸರಾ ಉನ್ನತ ಮಟ್ಟದ ಪೂರ್ವಸಿದ್ಧತಾ ಸಭೆಯಲ್ಲಿ ಮಂಡಿಸಲಾಗಿತ್ತು. ಆದರೆ, ಈ ಹೊಸ ಸೇರ್ಪಡೆಗೆ ಮೈಸೂರು ರಾಜಮನೆತನ, ವಿರೋಧ ಪಕ್ಷಗಳು ಹಾಗೂ ಕೇಂದ್ರ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೀಗ ಈ ಬಗ್ಗೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಎಕ್ಸ್ ಮೂಲಕ ಪೋಸ್ಟ್ ಮಾಡಿದ್ದಾರೆ.
ಮೈಸೂರು ದಸರಾದಲ್ಲಿ ಕಂಬಳ ನಡೆಸುವ ನಿರ್ಧಾರವನ್ನು ವಿರೋಧಿಸಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಎಕ್ಸ್ನಲ್ಲಿ ಸರಣಿ ಪೋಸ್ಟ್ಗಳನ್ನು ಹಾಕುವ ಮೂಲಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಪರಂಪರಾಗತವಾಗಿ ತನ್ನದೇ ಆದ ವೈಶಿಷ್ಟ್ಯದಿಂದ ಕಂಗೊಳಿಸುತ್ತಿರುವ ಮೈಸೂರು ದಸರಾ ಉತ್ಸವದಲ್ಲಿ ಕಂಬಳವನ್ನು ಸೇರಿಸುವ ಅಗತ್ಯವಿಲ್ಲ. ಈವರೆಗೂ ನಡೆದುಕೊಂಡು ಬಂದಿರುವ ದಸರಾ ಪರಂಪರೆಗೆ ಧಕ್ಕೆ ತರುವ ಪ್ರಯತ್ನ ಖಂಡಿತ ಬೇಡ ಎಂದರು.
ಕಂಬಳವು ಕರಾವಳಿ ಭಾಗದ ಸಾಂಸ್ಕೃತಿಕ ಶ್ರೇಷ್ಠತೆ ಮತ್ತು ನಂಬಿಕೆಯ ಪ್ರತೀಕವಾಗಿದ್ದು, ಭೌಗೋಳಿಕವಾಗಿ ಆ ಭಾಗಕ್ಕೆ ಮಾತ್ರ ಸರಿಹೊಂದುವ ಆಚರಣೆಯಾಗಿದೆ. ಅದನ್ನು ಮೈಸೂರಿಗೆ ತಂದು ದೈವಿಕ ಹಿನ್ನೆಲೆಯ ಆ ಪರಂಪರೆ ಹಾಗೂ ಪಾವಿತ್ರ್ಯತೆಗೆ ಧಕ್ಕೆ ತರುವುದನ್ನು ಒಪ್ಪಲಾಗದು ಕರಾವಳಿ ಪ್ರದೇಶ ಹಸಿರು ಮತ್ತು ನೀರಿನ ಸಂಗಮವಾಗಿದ್ದು, ಅಂತಹ ಪ್ರಾಕೃತಿಕ ಹಿನ್ನೆಲೆಯಲ್ಲಿ ಕಂಬಳವನ್ನು ಕಣ್ತುಂಬಿಕೊಳ್ಳುವುದೇ ಧನ್ಯತೆಯ ಅನುಭವ. ಹೀಗಾಗಿ ಮೈಸೂರು ಮತ್ತು ಕರಾವಳಿ ಜನರ ಭಾವನೆಗಳಿಗೆ ನೋವುಂಟು ಮಾಡುವುದು ಬೇಡ,” ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ದಸರಾ ಸಭೆಯಲ್ಲೇ ಈ ಪ್ರಸ್ತಾವನೆಗೆ ನೇರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ದಸರಾದ ಸಾಂಸ್ಕೃತಿಕ ಹಿನ್ನೆಲೆಯೇ ಬೇರೆ, ಕಂಬಳದ ಹಿನ್ನೆಲೆಯೇ ಬೇರೆ. ಎಲ್ಲದಕ್ಕೂ ದಸರಾವನ್ನು ಜೋಡಿಸುವುದು ಸರಿಯಲ್ಲ. ಕರಾವಳಿ ಭಾಗದ ಸಾಂಸ್ಕೃತಿಕ ಕ್ರೀಡೆಗೆ ಮೈಸೂರಿನಲ್ಲಿ ಗೌರವವಿದೆ, ಆದರೆ ದಸರಾ ಸಮಯದಲ್ಲಿ ಇದು ಯಾಕೆ ಬೇಕು? ಹೊಸ ಆಕರ್ಷಣೆಗಾಗಿ ಅನಾವಶ್ಯಕವಾಗಿ ದಸರಾದಲ್ಲಿ ಇದನ್ನು ಸೇರಿಸುವುದು ಸೂಕ್ತವಲ್ಲ. ಕಳೆದ ಮೂರು ವರ್ಷಗಳಿಂದಲೂ ದಸರಾ ಅಷ್ಟಾಗಿ ಯಶಸ್ವಿಯಾಗಿ ನಡೆದಿಲ್ಲ. ಹೀಗಾಗಿ ಇರುವುದನ್ನೇ ಮೊದಲು ಅಚ್ಚುಕಟ್ಟಾಗಿ ಮಾಡಿ” ಎಂದು ಯದುವೀರ್ ಸರ್ಕಾರಕ್ಕೆ ನೇರ ಸಲಹೆ ನೀಡಿದ್ದಾರೆ.
ಇನ್ನೊಂದೆಡೆ, ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಕಂಬಳ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರು ಸರ್ಕಾರದ ಈ ತೀರ್ಮಾನವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. “ಕಂಬಳ ಕೇವಲ ಕರಾವಳಿಗೆ ಮಾತ್ರ ಸೀಮಿತವಾದ ಕ್ರೀಡೆಯಲ್ಲ, ಅದು ಇಡೀ ರಾಜ್ಯದ ಘನತೆಯನ್ನು ಹೆಚ್ಚಿಸುವ ಕ್ರೀಡೆಯಾಗಿದೆ. ಯಕ್ಷಗಾನ, ಕೋಲದಂತಹ ಕರಾವಳಿಯ ಕಲೆಗಳನ್ನು ಮೈಸೂರಿಗೆ ಕೊಂಡೊಯ್ದು ಪ್ರದರ್ಶಿಸಿ ಜನಬೆಂಬಲ ಪಡೆದ ಇತಿಹಾಸವಿದೆ.
ಕಂಬಳವು ಅಂತರರಾಷ್ಟ್ರೀಯ ದಾಖಲೆಗಳನ್ನು ಮುರಿದು ವಿಶ್ವದಾದ್ಯಂತ ಜನರ ಆಕರ್ಷಣೆಗೆ ಪಾತ್ರವಾಗಿದೆ. ಯದುವೀರ್ ಒಡೆಯರ್ ಅವರು ತಮ್ಮ ರಾಜಮನೆತನದ ಸಂದರ್ಭದಲ್ಲೇ ಮೈಸೂರು ಸಂಸ್ಥಾನದ ಮೂಲಕ ಕಂಬಳ ಪ್ರಾರಂಭವಾಗಿತ್ತು ಎಂಬ ಇತಿಹಾಸವನ್ನು ಗಮನಿಸಬೇಕು. ದಸರಾದಲ್ಲಿ ಕಂಬಳದಿಂದ ಮೈಸೂರು ಜಿಲ್ಲಾಡಳಿತಕ್ಕೆ ಹಣಕಾಸಿನ ಹೊರೆಯಾಗುವುದಾದರೆ, ಸಂಘಟನೆಗೆ ಸಹಕಾರ ನೀಡಲು ಅನೇಕ ದಾನಿಗಳು ನಮ್ಮೊಂದಿಗಿದ್ದಾರೆ, ನಾವೇ ಸಂಪರ್ಕ ಮಾಡುತ್ತೇವೆ” ಎಂದು ಹೇಳಿದ್ದಾರೆ. ಇದನ್ನೂ ಓದಿ : ಪಿಆರ್ಸಿ ಜಟಾಪಟಿ; ಆದೇಶ ವಾಪಸ್ ಪಡೆಯುವಂತೆ ಆರ್ ಅಶೋಕ್ ಆಗ್ರಹ..!
