August 25, 2026
kranthikidi.com
ತಾಜಾಸುದ್ದಿರಾಜಕೀಯರಾಜ್ಯ

ಸಚಿವ ಕೃಷ್ಣಭೈರೇಗೌಡ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ..!

ಬೆಂಗಳೂರು : ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಭೆಯಲ್ಲಿ ಸಚಿವ ಕೃಷ್ಣಭೈರೇಗೌಡ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಯಿಗಳ ಸಂತಾನಹರಣ ಮತ್ತು ಸಸಿ ನೆಡುವ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದ್ದು, ಸ್ವತಃ ಸಚಿವರೇ ಸರ್ಕಾರದ ಲೂಟಿಯನ್ನು ಬಯಲು ಮಾಡಿದ್ದಾರೆ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಟೀಕಿಸಿದ್ದಾರೆ.

ಈ ಸಭೆಯಲ್ಲಿ ಸಚಿವರು “ನನ್ನ ಕಿವಿಯಲ್ಲಿ ದಾಸವಾಳ ಹೂವು ಕಾಣ್ತಾ ಇದ್ಯಾ?” ಎಂದು ಅಧಿಕಾರಿಗಳನ್ನು ಕೇಳಿದ್ದನ್ನು ಉಲ್ಲೇಖಿಸಿರುವ ಆರ್. ಅಶೋಕ್, ಅಸಲಿಗೆ ಈ ಪ್ರಶ್ನೆಯನ್ನು ಕೇಳಬೇಕಾಗಿರುವುದು ತಾವಲ್ಲ ಸ್ವಾಮಿ, ಏಳೂವರೆ ಕೋಟಿ ಕನ್ನಡಿಗರು ನಿಮ್ಮ ಕಡು ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಕೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಕೋತಿ ತಾನು ಮೊಸರು ತಿಂದು ಮೇಕೆ ಮೂತಿಗೆ ಒರೆಸಿದಂತೆ, ಕೆಳಮಟ್ಟದ ಅಧಿಕಾರಿಗಳ ಮೇಲೆ ರೋಷಾವೇಶ ತೋರಿಸಿದರೆ ಏನು ಪ್ರಯೋಜನ? ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತೆ ಮೀಟಿಂಗ್‌ಗಳಲ್ಲಿ ಸಣ್ಣಪುಟ್ಟ ಅಧಿಕಾರಿಗಳನ್ನು ಬೈದು ರೀಲ್ಸ್ ಮಾಡಿದರೆ ಲೂಟಿ ಹೊಡೆದ ಹಣ ವಾಪಸ್ ಬರುತ್ತಾ? ಈ ಮಹಾಲೂಟಿಯ ಹಿಂದಿರುವ ದೊಡ್ಡ ದೊಡ್ಡ ತಿಮಿಂಗಲಗಳು ಯಾರು ಎನ್ನುವುದನ್ನು ತನಿಖೆ ಮಾಡಿಸಿ ಪತ್ತೆ ಹಚ್ಚಿ ಎಂದು ಅಶೋಕ್ ಸಚಿವರಿಗೆ ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಒಂದು ಸಸಿ ನೆಡಲು ಬರೋಬ್ಬರಿ 2,300 ರೂಪಾಯಿಯಿಂದ 3,108 ರೂಪಾಯಿವರೆಗೆ ವೆಚ್ಚ ಮಾಡಲಾಗುತ್ತಿದೆ. ಆದರೆ ರಸ್ತೆ ಬದಿಯಲ್ಲಿ ಸರಿಯಾಗಿ ಗುಣಿಯನ್ನೇ ತೆಗೆಯದೆ, ಗೊಬ್ಬರ ಹಾಕದೆ ಕೇವಲ ಕಾಗದದ ಮೇಲೆ ಗಿಡ ನೆಟ್ಟು ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ನುಂಗಿ ನೀರು ಕುಡಿಯಲಾಗಿದೆ ಎಂದು ಆರೋಪಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗಾಗಿ 42.50 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೂ ಬೆಂಗಳೂರಿನಲ್ಲಿ ನಾಯಿಗಳ ಸಂಖ್ಯೆ ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಇದೆ. ಹಾಗಾದರೆ ಬಡವರ ತೆರಿಗೆ ಹಣ ಯಾರ ಜೇಬು ಸೇರುತ್ತಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರತಿ ಹಗರಣ ನಡೆದಾಗಲೂ ಕೇವಲ ಅಧಿಕಾರಿಶಾಹಿಯನ್ನಷ್ಟೇ ಹೊಣೆ ಮಾಡಿ ಸಚಿವರು ಕೈತೊಳೆದುಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳ ಮೇಲೆ ನಿಗಾ ಇಡಲು ಕಾರ್ಯಾಂಗವನ್ನು ಮುನ್ನಡೆಸಲು ಮಂತ್ರಿಗಳಿರುವುದು. ಸಚಿವರ ಮೂಗಿನಡಿಯೇ ಇಷ್ಟೆಲ್ಲಾ ನಡೆಯುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿತ್ತೇ? ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತದ ಮೇಲೆ ಯಾವುದೇ ಹಿಡಿತವಿಲ್ಲ ಎಂಬುದು ಸಚಿವರ ಮಾತಿನಿಂದಲೇ ಜಗಜ್ಜಾಹೀರಾಗಿದೆ ಎಂದು ಅಶೋಕ್ ಕಿಡಿಕಾರಿದ್ದಾರೆ. ತೆರಿಗೆ ಕಟ್ಟಿ ಕಂಗಾಲಾಗಿರುವ ಜನತೆಗೆ ಈ ಸರ್ಕಾರ ಮಹಾ ದ್ರೋಹ ಮಾಡುತ್ತಿದ್ದು, ಕೇವಲ ಸಭೆ ನಡೆಸಿ ರೀಲ್ಸ್ ಮಾಡುವುದನ್ನು ಬಿಟ್ಟು ಈ ಲೂಟಿಯ ಹಿಂದಿರುವ ಅಸಲಿ ಮುಖಗಳನ್ನು ಬಯಲಿಗೆಳೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ :

Related posts

ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಆ.17ರವರೆಗೆ ವಿಸ್ತರಣೆ..!

kknewskannada1987@gmail.com

ಹಣ ವಂಚನೆ ಪ್ರಕರಣ; ನಟ ಸಲ್ಮಾನ್ ಖಾನ್, ಸಹೋದರಿಗೆ ಕೋರ್ಟ್‌ ಸಮನ್ಸ್ ಜಾರಿ..!

kknewskannada1987@gmail.com

ಮಣ್ಣಲ್ಲಿ ಮಣ್ಣಾದ ದೇವೇಗೌಡರ ಪತ್ನಿ ಚೆನ್ನಮ್ಮ – ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಅಂತ್ಯಕ್ರಿಯೆ..!

Kalpana Editor