August 26, 2026
kranthikidi.com
ತಾಜಾಸುದ್ದಿರಾಜ್ಯ

NEET ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ; ವಿದ್ಯಾರ್ಥಿಗಳ ರಕ್ತದ ಮೇಲೆ ನಡೆಯುತ್ತಿರುವ ಕೋಚಿಂಗ್ ಮಾಫಿಯಾಗಳು..!

ಬೆಂಗಳೂರು : NEET-UG ಪರೀಕ್ಷೆಯಲ್ಲಿ ನಡೆದಿರುವ ಅವ್ಯವಸ್ಥೆಗಳನ್ನು ಖಂಡಿಸಿ, ಕೋಚಿಂಗ್ ಮಾಫಿಯಾಗಳ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯನ್ನು ರದ್ದುಪಡಿಸಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (AIDSO) ನೇತೃತ್ವದಲ್ಲಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ AIDSO ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಅವರು, “ಭ್ರಷ್ಟಾಚಾರ ತಡೆಗಟ್ಟುವ ನೆಪದಲ್ಲಿ ಮೊದಲ ಬಾರಿಗೆ NEET ಪರೀಕ್ಷೆಯನ್ನು ಜಾರಿಗೊಳಿಸಿದಾಗಲೇ AIDSO ಇದನ್ನು ವಿರೋಧಿಸಿ ಹೋರಾಟ ನಡೆಸಿತ್ತು. ಇಂದು ಕೋಚಿಂಗ್ ಉದ್ಯಮದ ವಾರ್ಷಿಕ ವಹಿವಾಟು ಸುಮಾರು ₹60 ಸಾವಿರ ಕೋಟಿ ತಲುಪಿದ್ದು, 2030ರ ವೇಳೆಗೆ ಅದು ₹1 ಲಕ್ಷ ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ. NEET ಕೋಚಿಂಗ್ ಪಡೆಯಲು ಒಂದು ಕುಟುಂಬ ವರ್ಷಕ್ಕೆ ₹1.5 ಲಕ್ಷದಿಂದ ₹3.5 ಲಕ್ಷದವರೆಗೆ ಖರ್ಚು ಮಾಡಬೇಕಾಗುತ್ತದೆ.

ಆದರೆ ದೇಶದ ಕೇವಲ ಶೇ.17ರಷ್ಟು ಕುಟುಂಬಗಳು ಮಾತ್ರ ₹3 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿವೆ. ಉಳಿದ ಶೇ.83ರಷ್ಟು ಕುಟುಂಬಗಳ ಮಕ್ಕಳಿಗೆ ಕೋಚಿಂಗ್ ಪಡೆಯುವುದೇ ದುಸ್ತರವಾಗಿದೆ” ಎಂದು ಹೇಳಿದರು. ಅವರು ಮುಂದುವರಿದು, “ಪ್ರತಿ ವರ್ಷವೂ ಕೆಲವು ಕೋಚಿಂಗ್ ಸಂಸ್ಥೆಗಳ ವಿದ್ಯಾರ್ಥಿಗಳೇ ಅಖಿಲ ಭಾರತ ಮಟ್ಟದ ಅಗ್ರ ರ್ಯಾಂಕ್‌ಗಳನ್ನು ಪಡೆಯುತ್ತಿದ್ದಾರೆ. ಇದರಿಂದ NEET ಪರೀಕ್ಷಾ ವ್ಯವಸ್ಥೆಯ ಮೇಲೆ ಕೋಚಿಂಗ್ ಮಾಫಿಯಾಗಳ ಪ್ರಭಾವ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. NTA ಈ ಮಾಫಿಯಾಗಳ ಕೈಗೊಂಬೆಯಾಗಿ ಪರಿಣಮಿಸಿದೆ.

ಮರುಪರೀಕ್ಷೆ ಘೋಷಣೆಯಾದ ಕೂಡಲೇ ಸಾವಿರಾರು ರೂಪಾಯಿಗಳ ಕ್ರ್ಯಾಶ್ ಕೋರ್ಸ್‌ಗಳನ್ನು ಮಾರುಕಟ್ಟೆಗೆ ತಂದಿರುವುದು ಇದಕ್ಕೆ ಉದಾಹರಣೆ” ಎಂದು ಆರೋಪಿಸಿದರು. “ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ವಿದ್ಯಾರ್ಥಿಗಳ ಮೇಲೆ ಭಾರೀ ಆರ್ಥಿಕ ಹಾಗೂ ಮಾನಸಿಕ ಒತ್ತಡವನ್ನು ಹೇರುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೋಚಿಂಗ್ ಉದ್ಯಮಕ್ಕೆ ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ಲಾಭವೇ ಮುಖ್ಯವಾಗಿದೆ. ಇದು ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲ, ಕೋಚಿಂಗ್ ಮಾಫಿಯಾಗಳು ನಡೆಸುತ್ತಿರುವ ಸಾಮಾಜಿಕ ಹಿಂಸಾಚಾರವಾಗಿದೆ. ರೈತರು ಮತ್ತು ಕಾರ್ಮಿಕರ ಮಕ್ಕಳೂ ವೈದ್ಯರು ಹಾಗೂ ಇಂಜಿನಿಯರ್‌ಗಳಾಗಲು ಸಮಾನ ಅವಕಾಶ ಹೊಂದಿರಬೇಕು” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

AIDSO ಪ್ರಮುಖ ಬೇಡಿಕೆಗಳು :

  • ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯನ್ನು ರದ್ದುಪಡಿಸಬೇಕು.
  • NEET ಹಗರಣದ ಎಲ್ಲಾ ತಪ್ಪಿತಸ್ಥರ ವಿರುದ್ಧ ನಿದರ್ಶನೀಯ ಕ್ರಮ ಕೈಗೊಳ್ಳಬೇಕು.
  • ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೂಡಲೇ ರಾಜೀನಾಮೆ ನೀಡಬೇಕು.

ಪ್ರತಿಭಟನೆಯ ಅಧ್ಯಕ್ಷತೆಯನ್ನು AIDSO ಬೆಂಗಳೂರು ಜಿಲ್ಲಾ ಸೆಕ್ರೆಟರಿಯಟ್ ಸದಸ್ಯ ರೋಹಿತ್ ವಹಿಸಿದ್ದರು. ಕಾರ್ಯಕ್ರಮದಲ್ಲಿ AIDSO ರಾಜ್ಯಾಧ್ಯಕ್ಷೆ ಅಶ್ವಿನಿ ಕೆ.ಎಸ್., ಬೆಂಗಳೂರು ಜಿಲ್ಲಾಧ್ಯಕ್ಷೆ ಅಪೂರ್ವ ಸಿ.ಎಂ., ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದನ್ನೂ ಓದಿ : ಹೆಚ್​​.ಸಿ. ಮಹದೇವಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ; ರಾಜ್ಯಪಾಲರಿಗೆ ದೂರು ಸಲ್ಲಿಕೆ..!

Related posts

ಬಿಡದಿ ಟೌನ್‌ಶಿಪ್ ಸರ್ವೆಗೆ ಬಂದವರಿಗೆ ಪೊರಕೆ ಪೂಜೆ, ಸ್ಥಳದಲ್ಲಿ ಉದ್ವಿಗ್ನತೆ – ಅಧಿಕಾರಿಗಳ ವಾಹನಕ್ಕೆ ಹಾನಿ, ರೈತರ ಆಕ್ರೋಶ..!

Kalpana Editor

ಶಿಕ್ಷಕರಿಂದ ಕಿರುಕುಳ ಆರೋಪ; ಬಿಲ್ಡಿಂಗ್‌ನಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ..!

Kalpana Editor

ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಹರಿದ ಕಾವೇರಿ ನೀರು

kknewskannada1987@gmail.com