ಬೆಂಗಳೂರು : ಸಾರ್ವಜನಿಕರ ಸುರಕ್ಷಿತ ಹಾಗೂ ಸುಗಮ ಓಡಾಟಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ, ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ರವರ ಆದೇಶ ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ರವರ ನಿರ್ದೇಶನ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಇಂದು ಒಟ್ಟು 11.40 ಕಿ.ಮೀ.ನಷ್ಟು ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಲಾಗಿದೆ.
ಪಾಲಿಕೆ ವ್ಯಾಪ್ತಿಯ ವಿವಿಧ ಮುಖ್ಯ ಹಾಗೂ ಉಪ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿನ ಅನಧಿಕೃತ ಒತ್ತುವರಿಗಳನ್ನು ಸಂಚಾರ ಹಾಗೂ ಕಾನೂನು ಸುವ್ಯವಸ್ಥೆಯ ಪೊಲೀಸ್ ವಿಭಾಗದ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಗಳ ಸಮನ್ವಯತೆಯೊಂದಿಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ.
ಕ್ಷೇತ್ರವಾರು ಒತ್ತುವರಿ ತೆರವು ಕಾರ್ಯಾಚರಣೆಯ ವಿವರ; ಅಂಜನಾಪುರ ಮತ್ತು ಬೇಗೂರು ವಿಭಾಗ : 40ನೇ ವಾರ್ಡ್ ಅಂಜನಾಪುರ ವ್ಯಾಪ್ತಿಯ ಕೃಷ್ಣಂ ಹೋಟೆಲ್‌ನಿಂದ ಟಿಪ್ಪು ಸರ್ಕಲ್‌ವರೆಗಿನ ಸ್ವಾಮಿ ವಿವೇಕಾನಂದ ರಸ್ತೆಯಲ್ಲಿ 3.50 ಕಿ.ಮೀ., 46ನೇ ವಾರ್ಡ್ ಯಲಚೇನಹಳ್ಳಿ ವ್ಯಾಪ್ತಿಯ ಕೋಣನಕುಂಟೆ ಕ್ರಾಸ್‌ನಿಂದ ಸಾರಕ್ಕಿ ಸರ್ಕಲ್‌ವರೆಗಿನ ಕನಕಪುರ ಮುಖ್ಯ ರಸ್ತೆಯಲ್ಲಿ 2.80 ಕಿ.ಮೀ. ಹಾಗೂ 33ನೇ ವಾರ್ಡ್ ನಾಗನಾಥಪುರ ವ್ಯಾಪ್ತಿಯ ರಾಯಸಂದ್ರ ಸರ್ಕಲ್‌ನಿಂದ ಮೀನಾಕ್ಷಿ ಲೇಔಟ್ 1ನೇ ಕ್ರಾಸ್‌ವರೆಗಿನ ಹೊಸ ರಸ್ತೆಯಲ್ಲಿ 1.50 ಕಿ.ಮೀ. ಸೇರಿ ಒಟ್ಟು 7.80 ಕಿ.ಮೀ. ಪಾದಚಾರಿ ಮಾರ್ಗವನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ.

ಪದ್ಮನಾಭನಗರ ವಿಭಾಗ : 5ನೇ ವಾರ್ಡ್ ಕಾನೇ ಮುನೇಶ್ವರ ವಾರ್ಡ್ ಹಾಗೂ 6ನೇ ವಾರ್ಡ್ ಗೌಡನಪಾಳ್ಯ ವ್ಯಾಪ್ತಿಯ ದಯಾನಂದ ಸಾಗರ್ ಶಿಕ್ಷಣ ಸಂಸ್ಥೆಗಳಿಂದ ಕುಮಾರಸ್ವಾಮಿ ಲೇಔಟ್‌ನ 18ನೇ ಮುಖ್ಯ ರಸ್ತೆವರೆಗಿನ 50 ಅಡಿ ರಸ್ತೆಯ (ವ್ಯಾಸರಾಯ ಬಲ್ಲಾಳ ರಸ್ತೆ) ಎರಡೂ ಬದಿಗಳಲ್ಲಿ ಒಟ್ಟು 2.20 ಕಿ.ಮೀ. ಪಾದಚಾರಿ ಮಾರ್ಗವನ್ನು ತೆರವುಗೊಳಿಸಲಾಗಿದೆ.
ಎಚ್‌ಎಸ್‌ಆರ್ ಲೇಔಟ್ ವಿಭಾಗ : 72ನೇ ವಾರ್ಡ್ ಎಚ್‌ಎಸ್‌ಆರ್ ಲೇಔಟ್ ವ್ಯಾಪ್ತಿಯ ಹೊರವರ್ತುಲ ರಸ್ತೆಯಿಂದ (Outer Ring Road) 22ನೇ ಕ್ರಾಸ್ ರಸ್ತೆವರೆಗಿನ 14ನೇ ಮುಖ್ಯ ರಸ್ತೆಯಲ್ಲಿ ಒಟ್ಟು 1.40 ಕಿ.ಮೀ. ಪಾದಚಾರಿ ಮಾರ್ಗವನ್ನು ಮುಕ್ತಗೊಳಿಸಲಾಗಿದೆ.
ಸಿಬ್ಬಂದಿ ಹಾಗೂ ಯಂತ್ರೋಪಕರಣಗಳ ಬಳಕೆ : ಈ ಕಾರ್ಯಾಚರಣೆಗಾಗಿ ಒಟ್ಟು 150ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಪಾದಚಾರಿ ಮಾರ್ಗದಲ್ಲಿದ್ದ ಅನಧಿಕೃತ ಶೆಡ್‌ಗಳು, ಕಾಂಕ್ರೀಟ್ ಮೆಟ್ಟಿಲು ಹಾಗೂ ಒತ್ತುವರಿಗಳನ್ನು ತೆರವುಗೊಳಿಸಲು ಜೆಸಿಬಿ (JCB) ಯಂತ್ರಗಳನ್ನು ಮತ್ತು ತ್ಯಾಜ್ಯ ಸಾಗಿಸಲು ಟ್ರ್ಯಾಕ್ಟರ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಇದನ್ನೂ ಓದಿ : E20 ಪೆಟ್ರೋಲ್‌ನಿಂದ ಹಾನಿಯಾದ ಒಂದೇ ಒಂದು ಕಾರು ತೋರಿಸಿ – ನಿತಿನ್ ಗಡ್ಕರಿ
