July 11, 2026
kranthikidi.com
ತಾಜಾಸುದ್ದಿದೇಶ

ಅಸ್ಸಾಂನಲ್ಲಿ ಭೀಕರ ಪ್ರವಾಹ; ಜನರಿಗೆ ಸಂಕಷ್ಟ, ರೈಲು ಸಂಚಾರ ಸ್ಥಗಿತ…!

ದಿಸ್ಪುರ್ : ಅರುಣಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಅಸ್ಸಾಂನ ಆರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಪರಿಣಾಮ 22,000ಕ್ಕೂ ಅಧಿಕ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೊಂದೆಡೆ ರೈಲು ಸಂಚಾರಕ್ಕೂ ತೊಂದೆರೆಯುಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ, ಧೇಮಾಜಿ, ನಲ್ಬಾರಿ, ದಿಬ್ರುಗಢ್, ಚಿರಂಗ್, ಲಖಿಂಪುರ್ ಮತ್ತು ಕೊಕ್ರಾಜಾರ್ ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿ ಹೋಗಿದ್ದು, ಸುಮಾರು 22,124 ಜನರು ಪರದಾಡುವಂತಾಗಿದೆ. ಇದರಲ್ಲಿ ಧೇಮಾಜಿ ಜಿಲ್ಲೆ ಹೆಚ್ಚು ಹಾನಿಗೊಳಗಾಗಿದ್ದು, ಸುಮಾರು 15,483 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರವಾಹದ ನೀರು ಹಳ್ಳಿಗಳು ಮತ್ತು ಕೃಷಿ ಭೂಮಿಯನ್ನು ಜಲಾವೃತಗೊಳಿಸಿದೆ. ಅಷ್ಟೇ ಅಲ್ಲದೇ ಪ್ರಮುಖ ರೈಲ್ವೆ ಸೇತುವೆಯೊಂದರ ಪಿಲ್ಲರ್‌ಗೆ ಹಾನಿಯಾಗಿದ್ದು, ಮುಂದಿನ ಸೂಚನೆವರೆಗೂ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಭೀಕರ ಪ್ರವಾಹ ಮತ್ತು ನದಿ ದಂಡೆಯ ಸವೆತದಿಂದಾಗಿ ಅರ್ಚಿಪಥರ್ ಮತ್ತು ಸಿಮೆನ್ ಚಾಪರಿ ನಿಲ್ದಾಣಗಳ ನಡುವಿನ ರೈಲ್ವೆ ಸೇತುವೆಯ ಪಿಲ್ಲರ್‌ವೊಂದು ದುರ್ಬಲಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಈಶಾನ್ಯ ಗಡಿ ರೈಲ್ವೆ ವಕ್ತಾರರು ತಿಳಿಸಿದ್ದಾರೆ.

ಈ ರೈಲ್ವೆ ಸೇತುವೆಯನ್ನು 1965ರಲ್ಲಿ ಕಟ್ಟಲಾಗಿತ್ತು. ಆನಂತರ ಇದನ್ನು ಬ್ರಾಡ್ ಗೇಜ್ ಆಗಿ ಬದಲಾಯಿಸಲಾಗಿತ್ತು. ಆ ತನಕ ಸೇತುವೆ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಇದೀಗ ಭಾರಿ ಮಳೆಯಿಂದಾಗಿ ನದಿಯ ದಂಡೆ ಕೊಚ್ಚಿ ಹೋಗಿರುವುದರಿಂದ ಸೇತುವೆಯ ಒಂದು ಪಿಲ್ಲರ್ ದುರ್ಬಲಗೊಂಡು ಅಲುಗಾಡುವಂತಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಅದೃಷ್ಟವಶಾತ್ ಯಾವುದೇ ರೈಲಿಗೆ ಹಾನಿಯಾಗಿಲ್ಲ ಮತ್ತು ಯಾರಿಗೂ ಗಾಯಗಳಾಗಿಲ್ಲ. ಸದ್ಯಕ್ಕೆ ಮುರ್ಕೋಂಗ್‌ಸೆಲೆಕ್ ಮತ್ತು ಸಿಲಾಪಥರ್ ನಡುವಿನ ರೈಲು ಸಂಚಾರ ಸ್ಥಗಿತಗೊಳಿಸಿದ್ದು, ರೈಲುಗಳು ಸಿಲಾಪಥರ್ ನಿಲ್ದಾಣದವರೆಗಷ್ಟೇ ಸಂಚರಿಸಲಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬಸ್ಸುಗಳ ವ್ಯವಸ್ಥೆ ಮಾಡಿದ್ದು, ಧೇಮಾಜಿ, ಸಿಲಾಪಥರ್ ಮತ್ತು ಮುರ್ಕೋಂಗ್‌ಸೆಲೆಕ್ ನಿಲ್ದಾಣಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆದಿದೆ.

ಪ್ರವಾಹದ ಅಬ್ಬರಕ್ಕೆ ಒಟ್ಟು 96 ಹಳ್ಳಿಗಳು ಮುಳುಗಡೆಯಾಗಿದ್ದು, ಸುಮಾರು 1,690 ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದೆ. ರೈತರ ಜೀವನಾಧಾರವಾಗಿದ್ದ 48,199 ಜಾನುವಾರುಗಳು ಕೂಡ ಪ್ರವಾಹದಿಂದ ಸಂಕಷ್ಟಕ್ಕೆ ಈಡಾಗಿವೆ. ಬ್ರಹ್ಮಪುತ್ರ ಮತ್ತು ಅದರ ಉಪನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಶಿವಸಾಗರ್ ಜಿಲ್ಲೆಯ ನಾಂಗ್ಲಾಮುರಘಾಟ್‌ನಲ್ಲಿ ಡಿಸಾಂಗ್ ನದಿಯ ಅಬ್ಬರ ಜೋರಾಗಿದೆ. ಮಳೆ ಹೀಗೆಯೇ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ.

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಪ್ರವಾಹ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತೊಂದರೆಗೊಳಗಾದ ಕುಟುಂಬಗಳಿಗೆ ತಕ್ಷಣದ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಧೇಮಾಜಿ ಸೇರಿದಂತೆ ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ನಾನು ಖುದ್ದಾಗಿ ನಿಗಾವಹಿಸುತ್ತಿದ್ದೇನೆ. ಸಂತ್ರಸ್ತರ ಸುರಕ್ಷತೆ ಮತ್ತು ದೀರ್ಘಕಾಲೀನ ಪುನರ್ವಸತಿಗಾಗಿ ಸರ್ಕಾರ ತನ್ನೆಲ್ಲಾ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತಿದೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ : ರಾಮ ಮಂದಿರ ದೇಣಿಗೆ ವಿವಾದ – ತುರ್ತು ವಿಚಾರಣೆಗೆ ಸುಪ್ರೀಂ ನಕಾರ..!

Related posts

ಭಾರತದ ಮಾವಿನ ಹಣ್ಣುಗಳಿಗೆ ಜಪಾನ್ ಸರ್ಕಾರ ತಾತ್ಕಾಲಿಕ ಬ್ರೇಕ್..!

Kalpana Editor

ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್‌ ಹಾವಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ…!

Kalpana Editor

ಕರಾವಳಿಯಲ್ಲಿ ಭಾರೀ ಮಳೆ; ಯಾಣ ಪ್ರವಾಸಿ ತಾಣಕ್ಕೆ ನಿರ್ಬಂಧ..!

Kalpana Editor